ಚಿಕ್ಕಬಳ್ಳಾಪುರ: ತರಕಾರಿ ಬದಲು ದಾಳಿಂಬೆ ಬೆಳೆದು ಶ್ರೀಮಂತನಾದ ರೈತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 28, 2024 | 6:19 PM

ಈರುಳ್ಳಿ, ಟೊಮ್ಯಾಟೋ, ಬದನೇಕಾಯಿ ಸೇರಿದಂತೆ ತರಕಾರಿ ಬೆಳೆದು ಬೆಲೆ ಇಲ್ಲದೆ ಕಂಗಾಲಾದ ರೈತನೋರ್ವ, ತೋಟಗಾರಿಕಾ ಪದವೀಧರನ ಮಾತು ಕೇಳಿ ವಿನೂತನ ತಳಿಯ ದಾಳಿಂಬೆ ಬೆಳೆದಿದ್ದಾನೆ. ಇದು ಇಸ್ರೇಲ್ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆದಂತಿದ್ದು, ದ್ರಾಕ್ಷಿ ಗೊಂಚಲಂತೆ ದಾಳಿಂಬೆ ಹುಲುಸಾಗಿ ಫಸಲು ಬಂದಿದೆ. ಈ ಮೂಲಕ ಕೋಟಿಯ ಕನಸು ನನಸಾಗುವ ಕಾಲ ಕೂಡಿಬಂದಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ಸ್ಟೋರಿ ಓದಿ.

ಚಿಕ್ಕಬಳ್ಳಾಪುರ: ತರಕಾರಿ ಬದಲು ದಾಳಿಂಬೆ ಬೆಳೆದು ಶ್ರೀಮಂತನಾದ ರೈತ
ದಾಳಿಂಬೆ ಬೆಳೆದು ಯಶಸ್ಸು ಕಂಡ ರೈತ ಬೈರಪ್ಪ
Follow us on

ಚಿಕ್ಕಬಳ್ಳಾಪುರ, ಜು.28: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ(Bagepalli) ತಾಲ್ಲೂಕಿನ ಮರಸನಪಲ್ಲಿ ಗ್ರಾಮದ ರೈತ ಬೈರಪ್ಪ ಎಂಬುವವರು ತಮ್ಮ ಆರು ಎಕರೆ ಜಮೀನಿನಲ್ಲಿ ದಾಳಿಂಬೆ(Pomegranate) ಬೆಳೆದು ಯಶಸ್ಸು ಕಂಡಿದ್ದಾರೆ. ದ್ರಾಕ್ಷಿಯ ಗೊಂಚಲನ್ನೇ ಮೀರಿಸುವ ಹಾಗೆ ದಾಳಿಂಬೆ ಗಿಡದಲ್ಲಿ ಹುಲುಸಾಗಿ ದಾಳಿಂಬೆ ಹಣ್ಣುಗಳು ಬೆಳೆದಿವೆ. ಈ ಮೊದಲು ಜಮೀನಿನಲ್ಲಿ ಈರುಳ್ಳಿ, ಟೊಮ್ಯಾಟೋ, ಬದನೇಕಾಯಿ ಸೇರಿದಂತೆ ತರಕಾರಿ ಬೆಳೆದು ಬೆಲೆ ಇಲ್ಲದೆ ಕಂಗಾಲಾಗಿದ್ದರು. ಆದ್ರೆ, ತೋಟಗಾರಿಕಾ ಪದವೀಧರ ಶ್ರೀಕಾಂತ್ ಎನ್ನುವವರ ಮಾತು ಕೇಳಿ ಇದೇ ಪ್ರಥಮ ಬಾರಿಗೆ ವಿನೂತನ ತಳಿಯ ದಾಳಿಂಬೆ ತೋಟ ಮಾಡಿದ್ದಾರೆ.

ಕೆ.ಜಿ ದಾಳಿಂಬೆಗೆ 150 ರೂ.; 6 ಎಕರೆ ತೋಟ ಮಾಡಲು 12 ಲಕ್ಷ ರೂ. ಖರ್ಚು

ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಹಾಗೆ, ದಾಳಿಂಬೆ ದ್ರಾಕ್ಷಿ ಗೋಂಚಲನ್ನೇ ಮೀರಿಸುವಷ್ಟು ಫಸಲು ಬಂದಿದ್ದು, ಸ್ಥಳದಲ್ಲೇ ವರ್ತಕರು ಕೆಜಿ ದಾಳಿಂಬೆಗೆ 150 ರೂಪಾಯಿ ಬೆಲೆ ನೀಡುವುದಾಗಿ ಮಾತುಕತೆ ನಡೆಸಿದ್ದಾರೆ. ಇನ್ನು 6 ಎಕರೆ ದಾಳಿಂಬೆ ತೋಟ ಮಾಡಲು, 12 ಲಕ್ಷ ರೂಪಾಯಿ ಖರ್ಚಾಗಿದೆ. ಸದ್ಯ ಇರುವ ಫಸಲು 60 ಟನ್​ಗೂ ಹೆಚ್ಚು ತೂಕ ಇದೆ. ಒಂದು ದಾಳಿಂಬೆ ಗಿಡದಲ್ಲಿ ಸರಿ ಸುಮಾರು 30 ಕೆ.ಜಿ.ಯಷ್ಟು ಹಣ್ಣುಗಳಿವೆ.

ಇದನ್ನೂ ಓದಿ:ಬಾಗಲಕೋಟೆ: ಭೀಕರ ಬರಕ್ಕೆ ತತ್ತರಿಸಿದ್ದ ರೈತನ ಕೈ ಹಿಡಿದ ದಾಳಿಂಬೆ ಬೆಳೆ

ನೆರೆಯ ರಾಜ್ಯಗಳಿಗೂ ರಫ್ತು

ಇದರಿಂದ ಆಂಧ್ರ, ಕರ್ನಾಟಕ, ಮಹಾರಾಷ್ಟ್ರ ವರ್ತಕರು ಖರೀಧಿಗೆ ಮುಗಿಬಿದ್ದಿದ್ದಾರೆ. ಇನ್ನು ರೈತನಿಗೆ ಸಕಾಲಕ್ಕೆ ಔಷಧಿ, ಗೊಬ್ಬರ, ಸಲಹೆಯನ್ನ ತೋಟಗಾರಿಕೆ ವಿಜ್ಞಾನದಲ್ಲಿ ಎಂ.ಎಎಸ್ಸಿ ಪದವಿಧರ ಶ್ರೀಕಾಂತ್ ಎನ್ನುವವರು ನೀಡಿ ಸೈ ಎನಿಸಿಕೊಂಡಿದ್ದಾರೆ. ಯಾವಾಗಲೂ ಸಾಂಪ್ರದಾಯಿಕ ಬೆಳೆಗಳು ಸೇರಿದಂತೆ ಈರುಳ್ಳಿ, ಟೊಮ್ಯಾಟೋ ಸೇರಿದಂತೆ ಹಲವು ತರಕಾರಿ ಬೆಳೆಗಳನ್ನ ಬೆಳೆದು ಕೈಸುಟ್ಟುಕೊಂಡಿದ್ದ ರೈತ ಬೈರಪ್ಪ, ಪ್ರಥಮ ಪ್ರಯತ್ನದಲ್ಲಿ ಭರಪೂರ ದಾಳಿಂಬೆ ಫಸಲು ಬೆಳೆದು ಕೋಟಿ ರೂಪಾಯಿ ನಿರೀಕ್ಷೆಯಲ್ಲಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ