ಬಾಗಲಕೋಟೆ: ಭೀಕರ ಬರಕ್ಕೆ ತತ್ತರಿಸಿದ್ದ ರೈತನ ಕೈ ಹಿಡಿದ ದಾಳಿಂಬೆ ಬೆಳೆ
ಈ ವರ್ಷ ಎಲ್ಲ ಕಡೆ ಮಳೆಯಿಲ್ಲ, ಬೆಳೆಯಿಲ್ಲ. ಬಿತ್ತಿದ ಬೆಳೆಯೆಲ್ಲ ಹಾಳಾಗಿ ಭೀಕರ ಬರ ಆವರಿಸಿದೆ. ಇಂತಹ ವೇಳೆಯಲ್ಲಿ ಅದೊಂದು ಬೆಳೆ ಕೆಲ ರೈತರಿಗೆ ಆಸರೆಯಾಗಿದೆ. ಹೌದು, ಕಡಿಮೆ ಮಳೆಯಲ್ಲಿ ಬೆಳೆಯುವ ದಾಳಿಂಬೆ, ರೈತರ ಬದುಕಿಗೆ ಭರವಸೆ ನೀಡಿದ್ದು, ಕೈ ಸುಟ್ಟುಕೊಂಡ ರೈತರಿಗೆ ಸ್ವಲ್ಪ ಮುಲಾಮು ಹಚ್ಚಿದಂತಾಗಿದೆ. ಅಷ್ಟಕ್ಕೂ ದಾಳಿಂಬೆ ಬೆಳೆ ಹೇಗಿದೆ? ಈ ಸ್ಟೋರಿ ಓದಿ.
ಬಾಗಲಕೋಟೆ, ಏ.26: ಬಾಗಲಕೋಟೆ ತಾಲ್ಲೂಕಿನ ಯಡಳ್ಳಿ ಗ್ರಾಮದ ರೈತ(Farmer) ಪಂಚಾಕ್ಷರಯ್ಯ ಎಂಬುವವರು ಒಟ್ಟು ನಾಲ್ಕು ಎಕರೆಯಲ್ಲಿ ದಾಳಿಂಬೆ(Pomegranate) ಬೆಳೆದಿದ್ದು, ಬರಗಾಲದಲ್ಲಿ ಈ ಬೆಳೆಯೇ ಇವರಿಗೆ ಆಸರೆಯಾಗಿದೆ. ಬಿತ್ತಿದ ಇತರ ಎಲ್ಲ ಬೆಳೆಗಳು ಮಳೆ ಇಲ್ಲದೆ, ಅಂತರ್ಜಲ ಕಡಿಮೆಯಾಗಿ ಬೋರ್ವೆಲ್ ನೀರು ಕೂಡ ಹರಿಸಲಾಗದೆ ಹಾಳಾಗಿವೆ. ಇಂತಹ ಹೊತ್ತಿನಲ್ಲಿ ಅಲ್ಪ ಬೋರ್ವೆಲ್ ನೀರಲ್ಲಿಯೇ ಡ್ರಿಪ್ ಇರಿಗೇಷನ್ ಮೂಲಕ ದಾಳಿಂಬೆ ಬೆಳೆಸಿದ್ದರು. ಈಗ ಬರಗಾಲದಲ್ಲಿ ಈ ಬೆಳೆಯೇ ಭರವಸೆ ಮೂಡಿಸಿದೆ. ಎಕರೆಗೆ 80 ಸಾವಿರದಿಂದ ಒಂದು ಲಕ್ಷ ಖರ್ಚು ಮಾಡಿದ್ದು, ಎರಡು ಲಕ್ಷ ಲಾಭ ಸಿಗುತ್ತಿದೆ.
ಬರಗಾಲದಲ್ಲಿ ಆಸರೆಯಾದ ದಾಳಿಂಬೆ
ಹೊಲದಲ್ಲಿ ದಾಳಿಂಬೆ ಸಮೃದ್ದವಾಗಿ ಬೆಳೆದಿದೆ. ಆದರೆ, ವಾತಾವರಣ ವೈಪರೀತ್ಯದಿಂದ ಸ್ವಲ್ಪಮಟ್ಟಿಗೆ ಗಿಡಗಳು ಹಾಳಾಗಿವೆ. ಇನ್ನು ಇದಕ್ಕೆ ರೋಗ ಬಾದೆ ಕೂಡ ಹೆಚ್ಚು, ಇವರೆಗೆ ದಾಳಿಂಬೆ ಬೆಳೆಯನ್ನ ಇತರೆ ಬೆಳೆಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಲಾಭ ತಂದಿದೆ. ಆದರೆ, ಪ್ರತಿ ಬಾರಿಯಂತೆ ದಾಳಿಂಬೆಗೆ ಸಿಗುವಷ್ಟು ನಿರೀಕ್ಷಿತ ಲಾಭ ಸಿಕ್ಕಿಲ್ಲ. ದಾಳಿಂಬೆ ಲಾಭದ ಲೆಕ್ಕದಲ್ಲಿ ನಿರಾಸೆ ಆದರೂ ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸರೆಯೆಂಬಂತೆ ರೈತರಿಗೆ ಬರಗಾಲದಲ್ಲಿ ಇತರೆ ಬೆಳೆಗಳ ಪೈಕಿ ಇದು ಆಸರೆಯಾಗಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಬಿಸಿಲಿನ ಹೊಡೆತಕ್ಕೆ ಅರಳದ ಹೂ: ಬಾಡಿತು ಹೂ ಬೆಳೆಗಾರರ ಬದುಕು
ಕಳೆದ ವರ್ಷಕ್ಕಿಂತ ಈ ವರ್ಷ ದಾಳಿಂಬೆ ಬೆಲೆ ಕಡಿಮೆಯಾಗಿ ಹೆಚ್ಚು ಲಾಭ ಕೈ ಸೇರಿಲ್ಲ. ಕಳೆದ ವರ್ಷ ಹತ್ತು ಕೆಜಿಯ ಒಂದು ಬಾಕ್ಸ್ಗೆ 2500 ರಿಂದ 2600 ರೂ ಇತ್ತು. ಆದರೆ, ಈ ವರ್ಷ ಅದು 1200 ರೂ.ಗೆ ಇಳಿದಿದೆ. ಈ ಲೆಕ್ಕದಲ್ಲಿ ದಾಳಿಂಬೆ ಆದಾಯ ಕಡಿಮೆಯಾಗಿದೆ. ಸೂಕ್ತ ಬೆಲೆ ಸಿಕ್ಕರೆ ಎಕರೆಗೆ 7 ರಿಂದ 8 ಲಕ್ಷ ಲಾಭ ಆಗುತ್ತಿತ್ತು.ಇದನ್ನು ಹೈದರಾಬಾದ್ ಹಾಗೂ ಮೈಸೂರಿಗೆ ಈ ರೈತರು ಮಾರಾಟ ಮಾಡುತ್ತಾರೆ. ಖರೀಧಿದಾರರು ಇಲ್ಲಿಗೆ ಬಂದು ಖರೀದಿ ಮಾಡುತ್ತಾರೆ. ನಿರೀಕ್ಷಿತ ಲಾಭ ಬರದಿದ್ದರೂ ಬರಗಾಲದಲ್ಲಿ ದಾಳಿಂಬೆ ಅಲ್ಪಮಟ್ಟಿಗೆ ಆಸರೆಯಾಗಿದೆ ಎಂದು ರೈತ ಗೂಳಪ್ಪ ಅವರು ಹೇಳುತ್ತಾರೆ.
ಎಲ್ಲ ಕಡೆ ಬರಗಾಲದಿಂದ ಬೆಳೆ ಹಾಳಾಗಿ ಕಂಗೆಟ್ಟ ರೈತರಿಗೆ ದಾಳಿಂಬೆ ಬೆಳೆ ಬೂಸ್ಟ್ ನೀಡಿದಂತಾಗಿದೆ. ಅಲ್ಪ ನೀರಲ್ಲಿ ಬೆಳೆಯುವ ದಾಳಿಂಬೆ, ಈ ರೈತರ ಬದುಕಿಗೆ ಆಸರೆಯಾಗಿದ್ದು, ಅನ್ನದಾತನಿಗೆ ಕಷ್ಟ ಕಾಲದಲ್ಲಿ ಕೈ ಹಿಡಿದಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ