ಚಿಕ್ಕಬಳ್ಳಾಪುರ ಸರ್ಕಾರಿ ಮಹಿಳಾ ಕಾಲೇಜಿನ (Womens College in Chikkaballapur) ಅವ್ಯವಸ್ಥೆ ಕುರಿತು ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ. ವೀರಪ್ಪ ರವರಿಗೆ (Justice B.Veerappa) ಪತ್ರ ಬರೆದಿದ್ದ ಹಿನ್ನೆಲೆ ಇಂದು ಕಾಲೇಜು ಪರಿಶೀಲನೆಗೆ ಬಂದ ನ್ಯಾಯಮೂರ್ತಿಗಳು, ಸ್ವತಃ ತಾವೇ ಸೂಟು ಬೂಟು ಟೈ ತೆಗೆದು ಸಲಿಕೆ ಪೊರಕೆ ಹಿಡಿದು ಸ್ವಚ್ಛತೆಯಲ್ಲಿ ತೊಡಗುವುದರ ಮೂಲಕ ವಿದ್ಯಾರ್ಥಿನಿಯರಿಗೆ ಸ್ವಚ್ಛತೆಯ ಪಾಠ (Swachh Bharat Mission) ಮಾಡಿದ್ರು.
ಅವ್ಯವಸ್ಥೆಯ ಆಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು:
ಚಿಕ್ಕಬಳ್ಳಾಪುರ ನಗರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇದೆ. ಈ ಮಹಿಳಾ ಕಾಲೇಜು ಆರಂಭವಾಗಿ ದಶಕಗಳೇ ಕಳೆದಿವೆ. ಆದ್ರೆ ಇದುವರೆಗೂ ಒಂದು ಸ್ವಂತ ಕಟ್ಟಡ ಇಲ್ಲ. ಇರೊ ತಾತ್ಕಾಲಿಕ ಕಟ್ಟಡದಲ್ಲಿ ಯಾವುದೆ ಸೌಲಭ್ಯಗಳು ಇಲ್ಲ. ಕಾಲೇಜಿನಲ್ಲಿ 500 ವಿದ್ಯಾರ್ಥಿನಿಯರು ಇದ್ದಾರೆ. ಇರೋದು ಒಂದು ಟಾಯ್ಲೆಟ್, ಬೆಳಕು ಬಾರದ ಕೊಠಡಿಗಳು, ಸಮಸ್ಯೆಗಳ ಸರಮಾಲೆಯಲ್ಲೇ ವಿದ್ಯಾರ್ಥಿನಿಯರು ವ್ಯಾಸಂಗ ಮಾಡ್ತಿದ್ದಾರೆ.
ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲಾಗಿತ್ತು:
ಕಳೆದ ವಾರ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ. ವೀರಪ್ಪ ಅವರು ಸೇರಿದಂತೆ ಪ್ರಧಾನ ಮಂತ್ರಿ, ರಾಷ್ಟ್ರಪತಿಗೆ ಪತ್ರ ಬರೆದು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಅದರಲ್ಲಿ 60 ಪತ್ರಗಳು ನ್ಯಾ. ಬಿ. ವೀರಪ್ಪ ಅವರ ಕಚೇರಿ ತಲುಪಿದ್ದವು.
ಪತ್ರಕ್ಕೆ ಸ್ಪಂದಿಸಿ ಇಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ನ್ಯಾಯಧೀಶರು:
ಇಂದು ಕಾಲೇಜಿಗೆ ಭೇಟಿ ನೀಡಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ. ವೀರಪ್ಪರವರು ಕಾಲೇಜು ಆವರಣದಲ್ಲಿ ಬೆಳೆದು ನಿಂತಿದ್ದ ಗಿಡಗಂಟೆಗಳನ್ನ ನೋಡಿ ಸೂಟು ಬೂಟು ಟೈ ತೆಗೆದು ಸ್ವತಃ ಸಲಿಕೆ ಪೊರಕೆ ಹಿಡಿದು ಸ್ವಚ್ಛತೆ ಮಾಡಿದ್ರು.
ಅಧಿಕಾರಿಗಳ ವಿರುದ್ದ ಗರಂ ಆದ ನ್ಯಾಯಮೂರ್ತಿಗಳು:
ಚಿಕ್ಕಬಳ್ಳಾಪುರ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸಿದ ನ್ಯಾಯಾಧೀಶರು ಕಾಲೇಜಿನ ಮೂಲೆ ಮೂಲೆಯಲ್ಲೂ ಇಂಚಿಂಚು ಪರಿಶೀಲನೆ ನಡೆಸಿದ್ರು. 500 ಹೆಣ್ಣು ಮಕ್ಕಳಿಗೆ ಇರೋದು ಒಂದು ಟಾಯ್ಲೆಟ್! ದನದ ಕೊಟ್ಟಿಗೆಗಿಂತ ಕಡೆಯಾದ ಕೊಠಡಿಗಳು, ಕುಡಿಯುವ ನೀರಿನ ಕೊರತೆ, ವಿದ್ಯುತ್ ಬಲ್ಬ್ ಗಳೇ ಇಲ್ಲದ ಕೊಠಡಿಗಳು, ಗಿಡ ಗಂಟೆಗಳು ಬೆಳೆದಿರೋ ಕಾಲೇಜಿನ ಆವರಣ, ಮತ್ತೊಂದೆಡೆ ಅರ್ಧಕ್ಕೆ ನಿಂತು ಪಾಳು ಕೊಂಪೆಯಾದ ಕಾಲೇಜು ಕಟ್ಟಡ ಕಂಡು ಜಡ್ಜ್ ಫುಲ್ ಗರಂ ಆದರು.
ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ಎಸ್ಪಿ ಡಿ.ಎಲ್. ನಾಗೇಶ, ಕೆ.ಆರ್.ಡಿ.ಐ.ಎಲ್ ಇಂಜಿನಿಯರ್ ಗಳು ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿ ವಿರುದ್ದ ಗರಂ ಆದರು.
ಪಿ.ಐ.ಎಲ್ ದಾಖಲಿಸುವ ಎಚ್ಚರಿಕೆ:
ಇನ್ನು ಎರಡು ತಿಂಗಳೊಳಗಾಗಿ ಅರ್ಧಕ್ಕೆ ನಿಂತಿರೋ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯ ಕಂಪ್ಲೀಟ್ ಮಾಡಿಕೊಡಲು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಮಾಡದೆ ಹೋದಲ್ಲೇ ಸ್ವಯಂ ಪಿ.ಐ.ಎಲ್ ದಾಖಲು ಮಾಡಿಕೊಂಡು ಅಧಿಕಾರಿಗಳು ಹಾಗೂ ಸರ್ಕಾರವನ್ನು ನ್ಯಾಯಾಲಯಕ್ಕೆ ಎಳೆಯುವುದಾಗಿ ಎಚ್ಚರಿಸಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ