ವಕ್ಫ್​ ವಿವಾದ: ಉಳಿಮೆ ಮಾಡುತ್ತಿದ್ದ ರೈತರಿಗೆ ಲಾಠಿ ಏಟು, ಕೇಸ್​​ ದಾಖಲು

| Updated By: ವಿವೇಕ ಬಿರಾದಾರ

Updated on: Nov 15, 2024 | 12:12 PM

ಚಿಕ್ಕಬಳ್ಳಾಪುರದ ತಿಮ್ಮಸಂದ್ರದಲ್ಲಿ ವಕ್ಫ್ ಆಸ್ತಿ ವಿವಾದದಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ತಮ್ಮ ಜಮೀನಿನಲ್ಲಿ ರೈತರು ಉಳುಮೆ ಮಾಡಲು ಹೋದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವಿವಾದದಿಂದ ರೈತರಲ್ಲಿ ಆಕ್ರೋಶ ಹೆಚ್ಚಾಗಿದೆ.

ವಕ್ಫ್​ ವಿವಾದ: ಉಳಿಮೆ ಮಾಡುತ್ತಿದ್ದ ರೈತರಿಗೆ ಲಾಠಿ ಏಟು, ಕೇಸ್​​ ದಾಖಲು
ಪಹಣಿ ವಕ್ಫ್​ ಹೆಸರು, ರೈತರ ಮೇಲೆ ಲಾಠಿ ಚಾರ್ಜ್​​
Follow us on

ಚಿಕ್ಕಬಳ್ಳಾಪುರ, ನವೆಂಬರ್​ 15: ಕರ್ನಾಟಕದಲ್ಲಿ (Karnataka) ವಕ್ಫ್​ ಆಸ್ತಿ ವಿವಾದ (Waqf Board Controversy) ಜೋರಾಗಿದೆ. ವಕ್ಫ್​ ಆಸ್ತಿ ವಿವಾದ ಚಿಕ್ಕಬಳ್ಳಾಪುರಕ್ಕೂ ಕಾಲಿಟ್ಟಿದೆ. ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ರೈತರ ಜಮೀನ ಪಹಣಿಯಲ್ಲಿ ವಕ್ಫ್​ ಆಸ್ತಿ ಎಂದು ನಮೂದು ಆಗಿದೆ. ಇದರಿಂದ ರೈತರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ವಕ್ಫ್​ ಆಸ್ತಿ ಅಂತ ನಮೂದಾದ ಜಮೀನಿನಲ್ಲಿ ಉಳಿಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್​ ಮಾಡಿದ್ದಾರೆ. ಅಲ್ಲದೇ ರೈತರ ಟ್ರ್ಯಾಕ್ಟರ್​ ಅನ್ನು​​ ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

ರೈತರಾದ ಟಿ.ಎನ್ ಬೈರಾರೆಡ್ಡಿ, ಎನ್.ಮುನಿರೆಡ್ಡಿ, ಎನ್ ಚನ್ನಕೃಷ್ಣಪ್ಪ, ಲಕ್ಷ್ಮಿದೇವಮ್ಮ, ನಾರಾಯಣಪ್ಪ, ವೆಂಕಟರೆಡ್ಡಿ, ಶ್ರೀರಾಮರೆಡ್ಡಿ, ನಾಗಮ್ಮ, ಕೆ.ಲಕ್ಷ್ಮಮ್ಮ, ಮುನಿಲಕ್ಷ್ಮಮ್ಮ ಸೇರಿದಂತೆ 10ಕ್ಕೂ ಹೆಚ್ಚು ರೈತರಿಗೆ ಸೇರಿದ ಸರ್ವೆ ನಂಬರ್ 13/1ರಲ್ಲಿ 2 ಎಕರೆ 21 ಗುಂಟೆ, 13/3 ರಲ್ಲಿ 20 ಗುಂಟೆ, ಸರ್ವೆ ನಂಬರ್ 20ರಲ್ಲಿರುವ 1 ಎಕರೆ 36 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್​ ಆಸ್ತಿ ಎಂದು ನಮೂದು ಆಗಿದೆ.

ಇದನ್ನೂ ಓದಿ: ಧಾರವಾಡ ತಾಲೂಕಿನಲ್ಲಿ ಉಂಟಾಗಿದ್ದ ವಕ್ಫ್​ ಆಸ್ತಿ ಗೊಂದಲಗಳಿಗೆ ಕೊನೆಗೂ ತೆರೆ: ನಿಟ್ಟುಸಿರು ಬಿಟ್ಟ ರೈತರು

ಇದರಿಂದ ಆಕ್ರೋಶಗೊಂಡ ರೈತರು, ಚಿಂತಾಮಣಿ ಜಾಮಿಯಾ ಮಸೀದಿ ಸದಸ್ಯರು ಮತ್ತು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ನಂತರ 10ಕ್ಕೂ ಹೆಚ್ಚು ರೈತರು ವಿವಾದಿತ ಜಮೀನುಗಳಲ್ಲಿ ಉಳುಮೆ ಮಾಡಲು ಮುಂದಾಗಿದ್ದಕ್ಕೆ, ಪೊಲೀಸರು ಲಘು ಲಾಠಿ ಚಾರ್ಜ್​ ಮಾಡಿದರು. ನಂತರ ಚಿಂತಾಮಣಿ ಜಾಮಿಯಾ ಮಸೀದಿ ಕಾರ್ಯಾದರ್ಶಿ ದೂರಿನ ಆಧಾರದ ಮೇಲೆ ರೈತರ ವಿರುದ್ಧ BNS ಸೆಕ್ಷನ್​ 324(4), 329(3)ರಡಿ ಪ್ರಕರಣ ದಾಖಲಾಗಿದೆ.​

ತಿಮ್ಮಸಂದ್ರ ಗ್ರಾಮಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಹಾಗೂ ಎಎಸ್ಪಿ ಆರ್.ಐ.ಕಾಸಿಂ ಭೇಟಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಪೊಲೀಸರು ಠಿಕಾಣಿ ಹೂಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ