Chikkaballapur: ಜಿಲ್ಲೆಯ ಉಸ್ತುವಾರಿಯನ್ನೇ ಮರೆತ ಸಚಿವ ಎಂ.ಟಿ.ಬಿ. ನಾಗರಾಜ್ ಚಿಕ್ಕಬಳ್ಳಾಪುರ ಕಡೆ ತಲೆ ಹಾಕಿಲ್ಲ, ಭುಗಿಲೆದ್ದಿದೆ ಅಸಮಾಧಾನ

| Updated By: ಸಾಧು ಶ್ರೀನಾಥ್​

Updated on: Sep 19, 2022 | 6:25 PM

MTB Nagaraj: ಜನೋತ್ಸವ ಸಂಭ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಡಿಂಗ್‌ಡಾಂಗ್ ನೃತ್ಯ ಮಾಡಿ ಕಾಣಿಸಿಕೊಂಡಿದ್ದರಷ್ಟೆ. ಆದರೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ 1363 ಹೆಕ್ಟೇರ್‌ಗೂ ಹೆಚ್ಚು ಪ್ರದೇಶಗಳಲ್ಲಿ ಬೆಳೆದಿದ್ದ ಬೆಳೆಗಳು ಹಾಳಾಗಿ 246 ಕೋಟಿ ರೂ ನಷ್ಟವಾಗಿದೆ. ಆದರೂ ನಾಗರಾಜ್ ತಮ್ಮ ಜವಾಬ್ದಾರಿ ನಿರ್ವಹಿಸಲು ನಿರಾಸಕ್ತಿ ತೋರಿದಂತೆ ಕಂಡುಬಂದಿದೆ. 

Chikkaballapur: ಜಿಲ್ಲೆಯ ಉಸ್ತುವಾರಿಯನ್ನೇ ಮರೆತ ಸಚಿವ ಎಂ.ಟಿ.ಬಿ. ನಾಗರಾಜ್ ಚಿಕ್ಕಬಳ್ಳಾಪುರ ಕಡೆ ತಲೆ ಹಾಕಿಲ್ಲ, ಭುಗಿಲೆದ್ದಿದೆ ಅಸಮಾಧಾನ
ಜಿಲ್ಲೆಯ ಉಸ್ತುವಾರಿಯನ್ನೆ ಮರೆತ ಜಿಲ್ಲಾ ಸಚಿವ ಎಂ.ಟಿ.ಬಿ. ನಾಗರಾಜ್! ಭುಗಿಲೆದ್ದ ಅಸಮಾಧಾನ
Follow us on

ಚಿಕ್ಕಬಳ್ಳಾಪುರ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ಸೇರಿದಂತೆ ಚಿಕ್ಕಬಳ್ಳಾಪುರ ತಾಲ್ಲೂಕಿನಾದ್ಯಂತ 224 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆಗಳು, 1139 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು, 26 ಹೆಕ್ಟೇರ್ ಪ್ರದೇಶದ ರೇಷ್ಮೆ ಬೆಳೆಗಳು ಜಲಾವೃತವಾಗಿ ಜಿಲ್ಲೆಯ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಮಳೆಯ ಅವಾಂತರಗಳಿಂದ ಕೆಲವಡೆ ಜನಜೀವನ ಅಸ್ತವ್ಯಸ್ತವಾಗಿ ಜನರು ಸುಧಾರಿಸಿಕೊಳ್ಳಲಾಗುತ್ತಿಲ್ಲ. ಆದರೆ ಜಿಲ್ಲೆಯ ಜನರು ಸಂಕಷ್ಟಕ್ಕೀಡಾಗಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಹೊತ್ತಿರುವ (Incharge Minister), ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಅವರು ಪತ್ತೆಯೇ ಇಲ್ಲ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಚಿವ ಎಂ.ಟಿ.ಬಿ. ನಾಗರಾಜ್ (MTB Nagaraj) ವಿರುದ್ಧ ಅಸಮಾಧಾನ ಆಕ್ರೋಶ ವ್ಯಕ್ತವಾಗಿದೆ. ಕಳೆದ ತಿಂಗಳು ಆಗಸ್ಟ್ 25 ರಂದು ಸಾರಿಗೆ ಸಚಿವ ಶ್ರೀರಾಮುಲು ಜೊತೆ ಗೌರಿಬಿದನೂರಿಗೆ ಭೇಟಿ ನೀಡಿದ್ದ ಸಚಿವರು ಆದಾದ ಮೇಲೆ ಜಿಲ್ಲೆಯ ಕಡೆ ಮುಖಮಾಡಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಕಾಲಿಡದ ಸಚಿವ ಮಹಾಶಯ!

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಖಾತೆ ಸಚಿವ ಡಾ.ಕೆ. ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಕುಬೇರ ಮೂಲೆಯಲ್ಲಿ ಸುಸಜ್ಜಿತವಾದ ಹೈಟೆಕ್ ಜಿಲ್ಲಾ ಉಸ್ತುವಾರಿ ಕಚೇರಿಯನ್ನು ತೆರೆದು, ಸಿಬ್ಬಂದಿ, ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಆದರೆ ಸಚಿವ ಸುಧಾಕರ್ ಬದಲಾಗಿ ಎಂಟಿಬಿ ನಾಗರಾಜ್ ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಇದುವರೆವಿಗೂ ಒಂದು ಬಾರಿಯೂ ಸಚಿವ ನಾಗರಾಜ್ ರವರು ಕಚೇರಿಗೆ ಕಾಲಿಟ್ಟಿಲ್ಲ.

ಇದರಿಂದ ಕಚೇರಿಯ ಸೋಫಾ, ಪೀಠೋಪಕರಣಗಳು, ದಿಢೀರ್ ಕಿಚನ್, ಕಂಪ್ಯೂಟರ್‌ಗಳು ಧೂಳು ತಿನ್ನುತ್ತಿವೆ. ಸಚಿವರ ಕಚೇರಿಯಲ್ಲಿದ್ದ ಅಲಂಕಾರಿಕ ಗಿಡಗಳು ವೀಳ್ಯದೆಲೆ ಬಳ್ಳಿಗಳಂತೆ ಕಚೇರಿಯಲ್ಲಿ ಹರಡಿ ಸಚಿವರ ಆಗಮನಕ್ಕೆ ಅರಳಿನಿಂತಿವೆ. ಇನ್ನು, ಎಂಟಿಬಿ ನಾಗರಾಜ್ ಕೈಗೆ ಸಿಗಲ್ಲ, ಅವರಿಗೂ ಚಿಕ್ಕಬಳ್ಳಾಪುರಕ್ಕೂ ಅದೇನು ದ್ವೇಷವೋ ಗೊತ್ತಿಲ್ಲ ಇದುವರೆವಿಗೂ ಒಂದು ಬಾರಿಯೂ ಸಾರ್ವಜನಿಕರ ಕುಂದುಕೊರತೆ ಸಭೆ ಮಾಡಲಿಲ್ಲ, ಅರ್ಜಿ ಸ್ವೀಕರಿಸಲಿಲ್ಲ. ಇನ್ನು ಇಂತವರು ಇದ್ದರೆಷ್ಟು, ಹೋದರೆಷ್ಟೂ ಎನ್ನುವಂತೆ ಸಾರ್ವಜನಿಕರೂ ಸಹಾ ಸಚಿವರ ಕಚೇರಿಯನ್ನು ಮರೆತಿದ್ದಾರೆ.

ಜಿಲ್ಲೆಯ ಜನ ಸಂಕಷ್ಟದಲ್ಲಿದ್ದರೆ ಸಚಿವರು ನೃತ್ಯದಲ್ಲಿ ಕಾಣಿಸಿಕೊಂಡಿದ್ದರು

ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ವಿವಿಧಡೆ ಗ್ರಾಮಗಳು, ತೋಟಗಳು, ರಸ್ತೆಗಳು ಜಲಾವೃತವಾಗಿ ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೆ, ಜನರನ್ನು ಸಂತೈಹಿಸುವುದಕ್ಕೆ, ಸಾಂತ್ವನ ಹೇಳುವುದಕ್ಕೂ ಸಚಿವರು ಬಂದಿಲ್ಲ. ಆದರೆ ಇದೇ ತಿಂಗಳಲ್ಲಿ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನಾ ಅಥವಾ ಜನೋತ್ಸವ ಸಂಭ್ರಮಾಚರಣೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಚಲನಚಿತ್ರ ಗೀತೆಗಳಿಗೆ ಡಿಂಗ್‌ಡಾಂಗ್ ನೃತ್ಯ ಮಾಡಿ ಅಲ್ಲಿ ಕಾಣಿಸಿಕೊಂಡಿದ್ದರಷ್ಟೆ. ಸೌಜನ್ಯಕ್ಕಾಗಲೀ ಅಥವಾ ತಾವು ಉಸ್ತುವಾರಿ ಸಚಿವರೆನ್ನುವುದನ್ನೇ ಮರೆತಂತೆ ಕಾಣುತ್ತಿದೆ.

ಧಾರಾಕಾರ ಮಳೆಯಿಂದ 246 ಕೋಟಿ ರೂಪಾಯಿ ನಷ್ಟ

ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 1363 ಹೆಕ್ಟೇರ್‌ಗೂ ಹೆಚ್ಚು ಪ್ರದೇಶಗಳಲ್ಲಿ ಬೆಳೆದಿದ್ದ ತೋಟಗಾರಿಕೆ, ಕೃಷಿ, ರೇಷ್ಮೆ ಬೆಳೆಗಳು ಹಾಳಾಗಿ 246 ಕೋಟಿ ರೂಪಾಯಿ ನಷ್ಟವಾಗಿದೆ. ಆದರೂ ಸಹಾ ಸಚಿವ ಎಂಟಿಬಿ ನಾಗರಾಜ್ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯಯನ್ನು ನಿರ್ವಹಿಸಲು ನಿರಾಸಕ್ತಿ ತೋರಿದಂತೆ ಕಂಡುಬಂದಿದೆ. ಇದರಿಂದ ಜಿಲ್ಲೆಯ ಜನ ರಾಜ್ಯ ಬಿಜೆಪಿ ಸರ್ಕಾರದ ಅಸಮಾಧಾನ ವ್ಯಕ್ತಪಡಿಸಿದ್ದಾರೆ – ಭೀಮಪ್ಪ ಪಾಟೀಲ ಟಿವಿ 9 ಚಿಕ್ಕಬಳ್ಳಾಪುರ

Published On - 6:24 pm, Mon, 19 September 22