ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಡಪಲ್ಲಿಯಲ್ಲಿ ಗ್ರಾಮದೇವತೆ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಕುಕೃತ್ಯ ತಡ ರಾತ್ರಿ ನಡೆದಿದೆ.
ನಿನ್ನೆಯಷ್ಟೆ ಗ್ರಾಮ ದೇವತೆಗಳಿಗೆ ತಂಬಿಟ್ಟಿನ ದೀಪೋತ್ಸವದ ಜಾತ್ರೆ ನಡೆಸಲಾಯಿತು. ಸಾವಿರಾರು ಭಕ್ತರು ತಂಬಿಟ್ಟಿನ ಉತ್ಸವದಲ್ಲಿ ಭಾಗಿಯಾಗಿಯಾಗಿದ್ದರು. ಗ್ರಾಮದೇವತೆಗಳಿಗೆ ಕುರಿ,ಕೋಣ, ಮೇಕೆಗಳ ಬಲಿ ಕೊಟ್ಟು ನೆಂಟರೆಲ್ಲರನ್ನು ಆಹ್ವಾನಿಸಿ ಭೋಜನ ವ್ಯವಸ್ಥೆ ಮಾಡುವ ಪದ್ದತಿ ಹಲವಾರು ದಶಕಗಳಿಂದಲೂ ರೂಢಿಯಲ್ಲಿದೆ. ಇಂತಹ ಗ್ರಾಮದೇವತೆಗಳಲ್ಲಿ ಚೌಡೇಶ್ವರಿ ದೇವಿ ಊರನ್ನು ಕಾಯುವ ಮಹಾಶಕ್ತಿ ಎಂಬ ನಂಬಿಕೆ ಗ್ರಾಮಸ್ಥರದು. ಈ ಹಿನ್ನೆಲೆಯಲ್ಲಿ ಪ್ರತಿ ಯುಗಾದಿಯ ಹಬ್ಬದ ನಂತರ ಗ್ರಾಮದ ಉತ್ಸವ ಮಾಡಲಾಗುತ್ತದೆ. ಅದರಂತೆ ನೆನ್ನೆಯೂ ತಂಬಿಟ್ಟಿನ ದೀಪೋತ್ಸವ ನಡೆಸಿ, ಸ್ನೇಹಿತರಿಗೆ, ನೆಂಟರುಗಳೆಲ್ಲರಿಗೂ ಮಾಂಸದ ಊಟದ ವ್ಯವಸ್ಥೆ ಮಾಡಿಸಲಾಗಿತ್ತು.
ಕಳೆದ ರಾತ್ರಿಯು ಚೌಡೇಶ್ವರಿ ದೇವಿಯ ಮೆರವಣಿಗೆ ಮಾಡಿ ಮನೆ ಮನೆಯಿಂದ ಪೂಜೆಯನ್ನು ಸ್ವೀಕರಿಸಲಾಯಿತು. ನಂತರ ಅರ್ಧರಾತ್ರಿ ಸುಮಾರು 1.40ರ ಸಮಯದಲ್ಲಿ ಚೌಡೇಶ್ವರಿ ದೇವಿಯನ್ನು ಊರಿನ ಹೊರವಲಯದಲ್ಲಿರುವ ದೇವಾಲಯದಲ್ಲಿ ಇಳಿಸಿ ಬಂದಿದ್ದಾರೆ. ಅದಾದ ಹತ್ತಿಪ್ಪತ್ತು ನಿಮಿಷಗಳ ಆಸುಪಾಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗ್ರಾಮಸ್ಥರು ಗಮನಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರಾದರೂ, ದೇವಿಯ ಮೂರ್ತಿಯು ಭಸ್ಮವಾಗಿದೆ. ಇದರಿಂದಾಗಿ ಮಾಡಪಲ್ಲಿ ಗ್ರಾಮದ ಜನರು ಆತಂಕದಲ್ಲಿದ್ದು ಬೆಂಕಿ ಅಂಟಿಸಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಶಿಕ್ಷಿಸಲು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬಾಗೇಪಲ್ಲಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಶುರು ಮಾಡಿದ್ದಾರೆ.
ಇದನ್ನೂ ಓದಿ: ಯೇಸುದಾಸ್ರಿಂದ ಹೈದರಾಲಿವರೆಗೆ; ಹಿಂದೂಯೇತರ ಕಲಾವಿದರಿಗೆ ಕೇರಳದ ದೇವಸ್ಥಾನಗಳಲ್ಲಿ ಪ್ರವೇಶ ನಿಷೇಧ ಹೊಸತೇನೂ ಅಲ್ಲ
Gokak Falls: ಸಾತ್ವಿಕ, ಸೂಕ್ಷ್ಮ ಮನಸ್ಸಿನವರೇ ಬೇಕು ಈ ನೇಣಿನ ಕುಣಿಕೆಗೆ