ಚಿಕ್ಕಬಳ್ಳಾಪುರ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಅನಾಥೆಗೆ ಬಾಳು ನೀಡಲು ಮುಂದಾದ ಕಾನೂನು ಪದವೀಧರ

| Updated By: ರಮೇಶ್ ಬಿ. ಜವಳಗೇರಾ

Updated on: Oct 27, 2022 | 8:45 PM

ಮೂರು ವರ್ಷಗಳ ಹಿಂದೆ, ಟೈಲರ್ ಆಗಿದ್ದ ತಂದೆ ಅನಾರೋಗ್ಯದಿಂದ ಮೃತಪಟ್ಟರು. ಒಂದು ವರ್ಷದ ಹಿಂದೆ... ತಾಯಿಯೂ ಸಹ ಅನಾರೋಗ್ಯದಿಂದ ಮೃತಪಟ್ಟರು. ಇದರಿಂದ ಮಮತಾಳ ಅಣ್ಣ ಮಾನಸಿಕ ಅಸ್ವಸ್ಥನಂತಾಗಿ ಹಾಸಿಗೆ ಹಿಡಿದುಬಿಟ್ಟ.

ಚಿಕ್ಕಬಳ್ಳಾಪುರ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಅನಾಥೆಗೆ ಬಾಳು ನೀಡಲು ಮುಂದಾದ ಕಾನೂನು ಪದವೀಧರ
ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಅನಾಥೆಗೆ ಬಾಳು ನೀಡಲು ಮುಂದಾದ ಕಾನೂನು ಪದವೀಧರ
Follow us on

ಇದ್ದ ತಂದೆ ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದ ಯುವತಿಯೊಬ್ಬಳು, ಕಾಲೇಜು ಶಿಕ್ಷಣ ಮೊಟಕುಗೊಳಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದು ದಿನ ದೂಡುತ್ತಿದ್ದಳು. ಇದನ್ನರಿತ ಎಲ್.ಎಲ್.ಬಿ ಪದವೀಧರ ಯುವಕನೊಬ್ಬ… ಅನಾಥೆಯನ್ನು ಮದುವೆ ಮಾಡಿಕೊಳ್ಳಲು ಮುಂದೆ ಬರುವುದರ ಮೂಲಕ ಮಾದರಿಯಾಗಿದ್ದಾನೆ.

ಆ ವಿಧಿಯೇ ಹಾಗೆ. ಯಾರ ಬಾಳಲ್ಲಿ, ಯಾವಾಗ, ಎಲ್ಲಿ, ಏನು ಆಗುತ್ತೆ ಎಂಬುದನ್ನು ಊಹಿಸಲೂ ಆಗಲ್ಲ. ಹೀಗೆ… ಇಲ್ಲೊಬ್ಬ ಯುವತಿಯ ಕಥೆಯನ್ನು ಕೇಳಿದ್ರೆ…ಕಣ್ಣಾಲಿಗಳು ತೇವವಾಗುತ್ತವೆ. ಹೃದಯ ಕರಗಿ ಕರಗಿ ನೀರಾಗುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪುಟ್ಟಪರ್ತಿ ನಿವಾಸಿಯಾಗಿದ್ದ 23 ವರ್ಷದ ಮಮತಾ ಎಂಬಾಕೆ, ಬೆಂಗಳೂರಿನ ಬಿ.ಎಂ.ಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಳು.

ಆದ್ರೆ ಮೂರು ವರ್ಷಗಳ ಹಿಂದೆ, ಟೈಲರ್ ಆಗಿದ್ದ ತಂದೆ ಅನಾರೋಗ್ಯದಿಂದ ಮೃತಪಟ್ಟರು. ಒಂದು ವರ್ಷದ ಹಿಂದೆ… ತಾಯಿಯೂ ಸಹ ಅನಾರೋಗ್ಯದಿಂದ ಮೃತಪಟ್ಟರು. ಇದರಿಂದ ಮಮತಾಳ ಅಣ್ಣ ಮಾನಸಿಕ ಅಸ್ವಸ್ಥನಂತಾಗಿ ಹಾಸಿಗೆ ಹಿಡಿದುಬಿಟ್ಟ. ಇದ್ರಿಂದ ಕುಗ್ಗಿ ಹೋಗಿದ್ದ ಮಮತಾ… ಚಿಕ್ಕಬಳ್ಳಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದು ದಿನ ದೂಡುತ್ತಿದ್ದಳು. ಜೀವನ ಇಲ್ಲಿಗೆ ಮುಗಿಯಿತು… ಎನ್ನುವಷ್ಟರಲ್ಲಿ ಆಕೆಯ ಬಾಳಲ್ಲಿ ಮತ್ತೆ ಸಂತಸ ಮೂಡಿ ಬಂದಿದೆ!

ಇನ್ನು ತಂದೆ ತಾಯಿಯನ್ನು ಕಳೆದುಕೊಂಡು ಅನಾಥಳಾದ ಮಮತಾಳನ್ನು… ಆಕೆಯ ದೂರದ ಸಂಬಂಧಿಗಳು ಮಮತಾಳನ್ನು ಮಹಿಳಾ ಕೇಂದ್ರದಲ್ಲಿ ಸೇರಿಸಿ ಸುಮ್ಮನಾಗಿದ್ದರು. ಆದ್ರೆ ಇತ್ತೀಚೆಗೆ ಮಮತಾಳ ದೂರದ ಸಂಬಂಧಿಯೊಬ್ಬರು ಮಮತಾ ಕಥೆಯನ್ನು ತಮ್ಮ ಸಂಬಂಧಿ, ಬಿ.ಎ -ಎಲ್.ಎಲ್.ಬಿ ಪದವೀಧರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುರಾಲದಿನ್ನೆ ನಿವಾಸಿ 28 ವರ್ಷದ ಸೋಮಶೇಖರ್ ಎನ್ನುವವರ ಗಮನಕ್ಕೆ ತಂದಿದ್ದಾರೆ.

ಇದನ್ನರಿತ ಸೋಮಶೇಖರ್… ಅನಾಥೆ ಮಮತಾಳ ಕತೆ ಕೇಳಿ, ತಾನೇ ಮದುವೆ ಆಗ್ತೀನಿ ಎಂದು ಮುಂದೆ ಬಂದು ಮನೆಯವರನ್ನು ಒಪ್ಪಿಸಿ, ಈಗ ಮುಂದಿನ ತಿಂಗಳು 3 ಹಾಗೂ 4 ರಂದು ಮದುವೆ ಫಿಕ್ಸ್ ಮಾಡಿಕೊಂಡಿದ್ದಾನೆ.

ಕಾಲದ ಕರೆಗೆ ತಂದೆ ತಾಯಿಯನ್ನು ಕಳೆದುಕೊಂಡ ಯುವತಿಯೊಬ್ಬಳು, ವಿದ್ಯಾಭ್ಯಾಸ ಮೊಟಕುಗೊಳಿಸಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಳು ಅಂಥದರಲ್ಲಿ ಕಾನೂನು ಪದವೀಧರ ಯುವಕನೊರ್ವ… ಯುವತಿಗೆ ಬಾಳು ನೀಡಲು ಮುಂದಾಗಿರುವುದಕ್ಕೆ ಎಲ್ಲೆಡೆ ಪ್ರಶಂಸಗಳು ವ್ಯಕ್ತವಾಗಿವೆ.

(ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

Published On - 5:59 pm, Thu, 27 October 22