ಚಿಕ್ಕಬಳ್ಳಾಪುರ, ಏಪ್ರಿಲ್ 20: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕಿಸಾನ್ ಸಮ್ಮಾನ್ (Kisan Samman) ಹಣದ ಜತೆಗೆ 2,000 ರೂ. ಸೇರಿಸಿ 4,000 ರೂಪಾಯಿಯನ್ನು ರೈತರಿಗೆ ನೀಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಸ್ಥಗಿತಗೊಳಿಸಲಾಯಿತು. ಇದರಿಂದಲೇ ಕಾಂಗ್ರೆಸ್ ರೈತ ವಿರೋಧಿ ಎಂಬುದು ಗೊತ್ತಾಗುತ್ತದೆ. ರೈತ ವಿರೋಧಿ ಕಾಂಗ್ರೆಸ್ಗೆ ಇಲ್ಲಿನ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂಬುದಾಗಿ ಭಾವಿಸುತ್ತೇನೆ ಎಂದು ಪ್ರಧಾನಿ ಮೋದಿ (Narendra Modi) ಹೇಳಿದರು. ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಅಗಲಗುರ್ಕಿ ಬಳಿ ಸಮಾವೇಶದಲ್ಲಿ ಮಾತನಾಡಿದ ಅವರು, ವಿಕಸಿತ ಭಾರತಕ್ಕಾಗಿ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿ. ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಎನ್‌ಡಿಎ ಸರ್ಕಾರ ಬದ್ಧವಾಗಿದೆ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
‘ಚಿಕ್ಕಬಳ್ಳಾಪುರದ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಸಂತ ಕೈವಾರಯ್ಯ ತಾತಯ್ಯ, ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿದರು. ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ದೊಡ್ಡ ದೊಡ್ಡ ನಾಯಕರು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಂಚು ನಡೆಯುತ್ತಿದೆ. ಆದರೆ, ನನಗೆ ದೇಶದ ತಾಯಂದಿರ ಆಶೀರ್ವಾದ ಇದೆ ಎಂದು ಮೋದಿ ಹೇಳಿದರು.
ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟ ಪ್ರಧಾನಿ, ರಾಜಕೀಯ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸುವ ಅವಕಾಶಗಳನ್ನೂ ಬಿಡಲಿಲ್ಲ.
ಈ ಇಳಿ ವಯಸ್ಸಿನಲ್ಲೂ ಹೆಚ್‌ಡಿ ದೇವೇಗೌಡರ ಬದ್ಧತೆ, ಉತ್ಸಾಹ ನಮಗೆಲ್ಲರಿಗೂ ಪ್ರೇರಣೆ. ಹಿರಿಯ ನಾಯಕ ದೇವೇಗೌಡ ಆಶೀರ್ವಾದ ಇಂದು ನನಗೆ ಸಿಕ್ಕಿದೆ. ಇಂಡಿಯಾ ಮೈತ್ರಿಕೂಟಕ್ಕೆ ಯಾವುದೇ ನಾಯಕತ್ವ ಇಲ್ಲವೆಂದು ಅವರು ಹೇಳಿದ್ದಾರೆ. ಯುಪಿಎ ಸರ್ಕಾರದ ಅವಧಿಯ ಹಗರಣದ ಬಗ್ಗೆಯೂ ದೇವೇಗವಡರು ಪ್ರಸ್ತಾಪಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮೋದಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Sat, 20 April 24