ರಾಜೀವ್‌ಗೌಡಗೆ ಜಾಮೀನು ನೀಡಲು ಕೋರ್ಟ್‌ ನಕಾರ: ‘ಕೈ’ ಮುಖಂಡನ ಬಂಧನಕ್ಕೆ ಅಡ್ಡಿ ಆಗಿದ್ದಾರಾ ಸಚಿವ?

ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ಮೂರು ದಿನವಾದರೂ ಪತ್ತೆಯಾಗಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬೆಂಗಳೂರು ಸೇರಿದಂತೆ ಹಲವೆಡೆ ಶೋಧ ಕಾರ್ಯ ನಡೆದಿದ್ದು, ಬಂಧಿಸದಂತೆ ಪ್ರಭಾವಿ ಸಚಿವರ ಒತ್ತಡ ಆರೋಪ ಕೇಳಿಬಂದಿದೆ.

ರಾಜೀವ್‌ಗೌಡಗೆ ಜಾಮೀನು ನೀಡಲು ಕೋರ್ಟ್‌ ನಕಾರ: ‘ಕೈ’ ಮುಖಂಡನ ಬಂಧನಕ್ಕೆ ಅಡ್ಡಿ ಆಗಿದ್ದಾರಾ ಸಚಿವ?
Rajeev Gowda
Edited By:

Updated on: Jan 17, 2026 | 10:47 PM

ಚಿಕ್ಕಬಳ್ಳಾಪುರ, ಜನವರಿ 17: ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿ ಎಸ್ಕೇಪ್ ಆಗಿರುವ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ (Rajeev Gowda) ಮೂರು ದಿನವಾದರೂ ಪತ್ತೆ ಆಗಿಲ್ಲ. ಮೊನ್ನೆ ವೀರಾವೇಷದ ಮಾತನಾಡಿದ್ದ ರಾಜೀವ್‌ಗೌಡ, ಕೇಸ್‌ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ. ಇದರ ನಡುವೆ ನಿರೀಕ್ಷಣಾ ಜಮೀನಿಗಾಗಿ ರಾಜೀವ್ ಗೌಡ ಪರ ವಕೀಲ ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರದ 2ನೇ ಜಿಲ್ಲಾ ಅಪರ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ನಿರೀಕ್ಷಣಾ ಜಾಮೀನು (Bail) ನೀಡಲು ನಿರಾಕರಿಸಿರುವ ಕೋರ್ಟ್‌, ವಿಚಾರಣೆಯನ್ನ ಜನವರಿ 22ಕ್ಕೆ ಮುಂದೂಡಿದೆ.

ರಾಜೀವ್‌ಗೌಡ ಪತ್ತೆಗಾಗಿ ಸಿಸಿಟಿವಿ ಮೊರೆ ಹೋದ ಖಾಕಿ!

ರಾಜೀವ್‌ಗೌಡರ ಬಂಧನಕ್ಕೆ ಮೂರು ತಂಡ ಮಾಡಿಕೊಂಡಿರುವ ಪೊಲೀಸರು, ಬೆಂಗಳೂರಿನಲ್ಲಿ ಸಿಸಿಟಿವಿ ಆಧರಿಸಿ ಶೋಧ ನಡೆಸಿದ್ದಾರೆ. ಬೆಂಗಳೂರಿನ ಇಂದಿರಾನಗರದಲ್ಲಿ ರಾಜೀವ್‌ಗೌಡ ಫೋನ್‌ ಸ್ವೀಚ್ ಆಫ್​ ಆಗಿದ್ದು, ಅದೇ ಏರಿಯಾದಲ್ಲೇ ಶೋಧ ಆಗುತ್ತಿದೆ. ರಾಜೀವ್‌ಗೌಡರನ್ನ ಬಂಧಿಸದಂತೆ ರಾಜ್ಯದ ಪ್ರಭಾವಿ ಮಂತ್ರಿ ಪೊಲೀಸರ ಮೇಲೆ ಒತ್ತಡ ಹಾಕಿರುವ ಆರೋಪ ಕೇಳಿ ಬಂದಿದೆ.

15 ಕೋಟಿ ರೂ ಮೌಲ್ಯದ ಭೂಮಿ ಕಬಳಿಸಿದ್ರಾ ರಾಜೀವ್‌?

ಧಮ್ಕಿ ಕೇಸ್‌ನಿಂದ ರಾಜೀವ್‌ಗೌಡರ ಅಸಲಿತ್ತು ಬಯಲಾಗುತ್ತಿದ್ದಂತೆ ಒಂದೊಂದೇ ಅಕ್ರಮಗಳು ಕೂಡ ಹೊರಬರುತ್ತಿವೆ. ಇವರ ವಿರುದ್ಧ 15 ಕೋಟಿ ರೂಪಾಯಿ ಮೌಲ್ಯದ ಭೂಮಿ ಕಬಳಿಸಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಪೂರ್ವ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿರುವ 15 ಕೋಟಿ ರೂ ಮೌಲ್ಯದ 1 ಎಕರೆ 18 ಗುಂಟೆ ಭೂಮಿ ರಾಜೀವ್ ಗೌಡ ಕಬಳಿಸಿದ್ದಾರೆ ಅಂತಾ ಆಶಾಲತಾ ಅನ್ನೋರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ

ಇನ್ನು ಮಂಡೂರಿನ ಸುತ್ತಮುತ್ತ ಜನರಿಗೆ ಇವರು ಮಾಡಿರುವ ವಂಚನೆ ಬಗ್ಗೆ ಭಿತ್ತಿಪತ್ರ ಮಾಡಲಾಗಿದ್ದು, ಶಿಡ್ಲಘಟ್ಟದಲ್ಲಿ ವಿತರಿಸಲಾಗ್ತಿದೆ. ಇದರ ನಡುವೆ ಹಲವು ಸಂಘಟನೆಗಳು ಪೌರಾಯುಕ್ತರ ಕಚೇರಿಗೆ ತೆರಳಿದ ಅಮೃತಾರಿಗೆ ಧೈರ್ಯ ತುಂಬುವ ಕೆಲಸ ಮಾಡಿವೆ. ರೇಷ್ಮೆ ಸೀರೆ, ಬಳೆ ಹರಿಸಿನ ಕುಂಕಮ ಸೇರಿದಂತೆ ಬಾಗಿನ ಕೊಟ್ಟು ಬೆಂಬಲಕ್ಕೆ ನಿಂತಿದ್ದಾರೆ. ಜನರ ಪ್ರೀತಿಗೆ ಅಮೃತಾ ಭಾವುಕರಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.