ಚಿಕ್ಕಬಳ್ಳಾಪುರ: ಜಿಲ್ಲೆಯ ನೂತನ ವಿಧಾನಸಭಾ ಕ್ಷೇತ್ರವಾದ ಮಂಚೇನಹಳ್ಳಿ ಕೇಂದ್ರಕ್ಕೆ 10 ಕೋಟಿ ರೂ. ಅನುದಾನವನ್ನು ಕಂದಾಯ ಸಚಿವ ಆರ್. ಅಶೋಕ್ ಘೋಷಣೆ ಮಾಡಿದ್ದಾರೆ. ಸಚಿವ ಡಾ. ಕೆ. ಸುಧಾಕರ್ ಮನವಿ ಮೇರೆಗೆ ಸ್ಥಳದಲ್ಲೇ ಅನುದಾನ ಘೋಷಿಸಿದರು. ಜಿಲ್ಲೆಯ ಜರಬಂಡಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಸಚಿವ ಆರ್. ಅಶೋಕ್ ಮಾತನಾಡಿ, 79 ಎ.ಬಿ ನಿಯಮ ತೆಗೆದು ಹಾಕಿದ್ದೇನೆ. ಅಧಿಕಾರಿಗಳು 79 ಎ, ಬಿ ಇಟ್ಟುಕೊಂಡು ಕಿರುಕುಳ ಕೊಡುತ್ತಿದ್ದರು. 94ಸಿ ಅಡಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ನೊಂದಣಿ ಮಾಡಲಾಗಿದೆ. ಸದ್ಯ 10 ಸಾವಿರ ಜನರಿಗೆ 94ಸಿಯಿಂದ ಅನುಕೂಲವಾಗಿದ್ದು, ರೈತರ ಜಮೀನು ದಾಖಲೆಗಳು ಮನೆ ಬಾಗಿಲಿಗೆ ಬರುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸೋಲಿನ ಕಹಿ ಘಟನೆ ನೆನಪು ಮಾಡಿಕೊಂಡ ಸಚಿವ ಎಂ.ಟಿ.ಬಿ ನಾಗರಾಜ್
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ನನ್ನನ್ನು ಸೋಲಿಸಿ ಬಿಟ್ಟರು. ನನಗೆ ಏನು ಬೇಕಾಗಿಲ್ಲ. ನನಗೆ ಬಡವರ ಸೇವೆ ಮಾತ್ರ ಬೇಕು. ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ ಎಂದು ತಮ್ಮ ಸೋಲಿನ ಕಹಿ ಘಟನೆಯನ್ನು ಸಚಿವ ಎಂ.ಟಿ.ಬಿ ನಾಗರಾಜ್ ನೆನಪು ಮಾಡಿಕೊಂಡರು. ನಾನು ಸೋತ ಕಾರಣ ಕ್ಷೇತ್ರದ ಅಭಿವೃದ್ದಿಗೆ ಹಿನ್ನೆಡೆ ಆಯಿತು. ಜನ ಚುನಾವಣೆಯಲ್ಲಿ ಒಳ್ಳೆ ಕೆಲಸ ಮರೆಯುತ್ತಾರೆ. ಜನ ನಿದ್ದೆ ಮಂಪರಿನಲ್ಲಿ ಇದ್ದಂತೆ ಮತ ಹಾಕುತ್ತಾರೆ ಎಂದು ಜರಬಂಡಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯದಲ್ಲಿ ಎಂ.ಟಿ.ಬಿ ನಾಗರಾಜ್ ನೋವು ತೋಡಿಕೊಂಡರು.
ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತ ಮಿಗಿಲಾದದ್ದು. ನನಗೆ ಜನ್ಮ ಕೊಟ್ಟ ನನ್ನ ಪ್ರೀತಿಯ ತಾಯಿ ಅವರ ಹೆಸರಿನಲ್ಲಿ, ನಾನು ಜನ್ಮ ಪಡೆದ ಊರು ಚಿಕ್ಕಬಳ್ಳಾಪುರದಲ್ಲಿ ಪ್ರಾರಂಭಿಸಿರುವ ಮನೆ ಮನೆಗೂ ಉಚಿತ ಆರೋಗ್ಯ ಸೇವೆ ನೀಡುವ ಕಾರ್ಯಕ್ರಮ ‘ಶಾಂತಾ ಮೊಬೈಲ್ ಕ್ಲಿನಿಕ್’.
ನಿಮ್ಮ ಆರೋಗ್ಯಕ್ಕಾಗಿ, ನಮ್ಮ ಸೇವೆ.#ShanthaMobileClinic pic.twitter.com/ExywNRazpV
— Dr Sudhakar K (@mla_sudhakar) November 26, 2022
ತಾಯಿ ಹೆಸರಿನಲ್ಲಿ ವೈಯಕ್ತಿಕ ಮೊಬೈಲ್ ಕ್ಲಿನಿಕ್ ಆರಂಭ: ಡಾ.ಕೆ.ಸುಧಾಕರ್
ಇನ್ನು ಜರಬಂಡಹಳ್ಳಿ ಗ್ರಾಮದಲ್ಲಿ ಹೋಬಳಿ ಹಾಗೂ ಪಂಚಾಯತಿವಾರು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪೌಂಡೇಷನ್ನಿಂದ ವೈಯಕ್ತಿಕ ಮೊಬೈಲ್ ಕ್ಲಿನಿಕ್ ಆರಂಭ ಮಾಡಲಾಯಿತು. ಬಳಿಕ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕ್ಲಿನಿಕ್ ಆರಂಭವಾಗಿದೆ. ಮಹಿಳೆಯರಿಗೆ ಇತ್ತಿಚಿಗೆ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದೆ. ಆರಂಭದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಸಂಪೂರ್ಣ ಗುಣಮುಖರಾಗಬಹುದು. ಮೊಬೈಲ್ ಕ್ಲಿನಿಕ್ನಲ್ಲಿ ಲ್ಯಾಬ್ ಔಷಧಿ ಚಿಕಿತ್ಸೆ ಲಭ್ಯವಿದೆ. ಸೂಕ್ತ ಚಿಕಿತ್ಸೆ ಸಿಗದೆ ನನ್ನ ತಾಯಿ ಶಾಂತಾ ಮೃತಪಟ್ಟಿದ್ದರು. ಸದ್ಯ ತಾಯಿ ಹೆಸರಿನಲ್ಲಿ ಈಗ ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:40 pm, Sat, 26 November 22