ಮಗಳು ಚೆನ್ನಾಗಿರಲಿ ಅಂತ ಆಕೆಯ ತಂದೆ ತಾಯಿ 50 ಲಕ್ಷ ರೂಪಾಯಿ ಮೌಲ್ಯದ ಜಮೀನು ಮಾರಿ, ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು. ಆದ್ರೆ ಕೈಹಿಡಿದ ಗಂಡ (Husband), ತನ್ನ ಪತ್ನಿಯ (Wife) ಬದಲು, ಬೇರೆ ಮಹಿಳೆಯ ಜೊತೆ ಅನೈತಿಕ ಸಂಬಂಧ (Illicit Relation) ಬೆಳೆಸಿ, ಪತ್ನಿಗೆ ಕಿರುಕುಳ ನೀಡ್ತಿದ್ದನಂತೆ. ಇದರಿಂದ ಮನನೊಂದ ಆ ಗೃಹಿಣಿ ಗಂಡನ ಮನೆಯಲ್ಲೆ ನೇಣಿಗೆ (Suicide) ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಎಸ್ ಗುಂಡ್ಲುಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಹಾಗೂ ಅನಸೂಯಮ್ಮ ರೈತ ದಂಪತಿ, ತಾವು ಕಷ್ಟಪಟ್ಟಂತೆ ತಮ್ಮ ಮಗಳು ಮೋನಿಕಾ ಕಷ್ಟ ಪಡಬಾರದು ಎಂದೆಣೆಸಿ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಸಂತೇ ಬೀದಿ ಬಡಾವಣೆಯ ಗುರುಮೂರ್ತಿ ಎನ್ನುವವರಿಗೆ ಮದುವೆ ಮಾಡಿ ಕೊಟ್ಟಿದ್ರು. ಮಗಳ ಸಂತೋಷಕ್ಕಾಗಿ ಇರೊ 50 ಲಕ್ಷ ರೂಪಾಯಿ ಮೌಲ್ಯದ ಜಮೀನನನ್ನು ಮಾರಾಟ ಮಾಡಿ, ಮಗಳು ಹಾಗೂ ಆಳಿನ ಮೈಮೇಲೆ ಚಿನ್ನ ಹಾಕಿ ಅದ್ದೂರಿಯಾಗಿ ಮದುವೆ ಮಾಡಿದ್ದರು.
ಆದ್ರೆ ಈಗ ಮಗಳು ಗಂಡನ ಮನೆಯಲ್ಲೆ ಸಾವಿಗೆ ಶರಣಾಗಿದ್ದು, ಆಕೆಯ ಗಂಡ ಬೇರೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ತಮ್ಮ ಮಗಳಿಗೆ ಕಿರುಕುಳ ನೀಡ್ತಿದ್ದ ಅದರಿಂದಲೇ ತಮ್ಮ ಮಗಳು ನೇಣಿಗೆ ಶರಣಾಗಿದ್ದಾಳೆ ಅಂತ ಮೋನಿಕಾ ತಂದೆ ರಾಮಕೃಷ್ಣಪ್ಪ ಆರೋಪಿಸಿದ್ದಾನೆ.
ಇನ್ನು ಮೋನಿಕಾ ಹಾಗೂ ಗುರುಮೂರ್ತಿಗೆ ಮದುವೆಯಾಗಿ ಬರೋಬ್ಬರಿ 13 ವರ್ಷಗಳೆ ಕಳೆದಿದ್ದು, 11 ವರ್ಷದ ವಿಷ್ಣುಪ್ರಿಯಾ ಎಂಬ ಮಗಳು ಇದ್ದಾಳೆ. ಆದ್ರೆ ಗುರುಮೂರ್ತಿ ತನ್ನ ಹೆಂಡತಿ ಮತ್ತು ಮಗಳ ಮುಖ ನೋಡಿಕೊಂಡು ಸುಖ ಸಂಸಾರ ಮಾಡದೆ… ಬೇರೆ ಮಹಿಳೆಯ ಹಿಂದೆ ಬಿದ್ದಿದ್ದನಂತೆ. ಇದ್ರಿಂದ ನೊಂದು ಮೋನಿಕಾ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ. ಇದ್ರಿಂದ ಬಾಗೇಪಲ್ಲಿ ಠಾಣೆ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಗಳು ಮೋನಿಕಾ ಸಾವಿನ ಮನೆ ಸೇರಿದ್ದಾಳೆ. 11 ವರ್ಷದ ಮುದ್ದಾದ ಮಗಳನ್ನು ಬಿಟ್ಟು ಮೋನಿಕಾ ಮೃತಪಟ್ಟಿದ್ದು, 11 ವರ್ಷದ ಮೊಮ್ಮಗಳ ಜವಾಬ್ದಾರಿ ಮೋನಿಕಾ ತಂದೆ ತಾಯಿ ಮೇಲೆ ಇದೆ. ಇದ್ರಿಂದ ನಾಲ್ಕು ಜನ ಹಿರಿಯರು ಸೇರಿ, ಆಗಿದ್ದು ಆಗಿ ಹೋಗಿದೆ. ಪೊಲೀಸರು ತನಿಖೆ ಮಾಡಿಕೊಳ್ಳಲಿ, ಆದ್ರೆ ಗುರುಮೂರ್ತಿಗೆ ಸೇರಿದ್ದ ಮನೆ, ನಿವೇಶನ ಹಾಗೂ ಜಮೀನನ್ನು ಆತನ ಮಗಳ ಹೆಸರಿಗೆ ನೋಂದಣಿ ಮಾಡಿಸಲಿ ಎಂದು ತಿರ್ಮಾನಿಸಿದ್ದಾರೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)