ಆ್ಯಸಿಡ್ ಬೆದರಿಕೆ: ರಕ್ಷಣೆ ಕೋರಿ ಪತ್ರ ಸಮೇತ ಪೊಲೀಸ್ ಮೆಟ್ಟಿಲೇರಿದ ಪೌರಾಯುಕ್ತೆ ಅಮೃತಾ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡರಿಗೆ ಆ್ಯಸಿಡ್ ದಾಳಿ ಬೆದರಿಕೆ ಪತ್ರ ಬಂದ ಬೆನ್ನಲ್ಲೇ ರಕ್ಷಣೆ ನೀಡುವಂತೆ ಶಿಡ್ಲಘಟ್ಟ ಟೌನ್ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆ ಬಗ್ಗೆ ಪೊಲೀಸರಿಗೆ ಅಮೃತಾಗೌಡ ದೂರು ನೀಡಿದ್ದರು.

ಚಿಕ್ಕಬಳ್ಳಾಪುರ, ಜನವರಿ 23: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ (Amrutha Gowda) ಆ್ಯಸಿಡ್ ಹಾಕುವುದಾಗಿ ಬೆದರಿಕೆ ಬೆನ್ನಲ್ಲೇ ರಕ್ಷಣೆ ನೀಡುವಂತೆ ಪತ್ರ ಸಮೇತ ಪೊಲೀಸರಿಗೆ ಮನವಿ ಮಾಡಿದ್ದಾರೆ. ಸದ್ಯ ಜೀವ ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಅಮೃತಾಗೌಡ ಆ್ಯಸಿಡ್ ದಾಳಿ ಬೆದರಿಕೆ ಪತ್ರ ಹಿನ್ನೆಲೆ ರಕ್ಷಣೆ ನೀಡುವಂತೆ ಶಿಡ್ಲಘಟ್ಟ ಟೌನ್ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ ಹಾಕಿದ್ದರು. ಈ ಬಗ್ಗೆ ಅಮೃತಾಗೌಡ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದಂತೆ ತಲೆ ಮರೆಸಿಕೊಂಡಿರುವ ರಾಜೀವ್ ಗೌಡ, ಇನ್ನು ಪತ್ತೆ ಆಗಿಲ್ಲ. ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ಇತ್ತ ಪೌರಾಯುಕ್ತೆಗೆ ಬೆದರಿಕೆ ಪತ್ರಯೊಂದು ಬಂದಿದ್ದು, ಆ್ಯಸಿಡ್ ದಾಳಿ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆ ಇದೀಗ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ನಾಳೆ ರಾಜೀವ್ ಗೌಡ ಭವಿಷ್ಯ ನಿರ್ಧಾರ
ರಾಜೀವ್ ಗೌಡಗೆ ಕಾನೂನಿನ ಉರುಳು ಬಿಗಿಯಾಗುತ್ತಿದೆ. ಪೌರಾಯುಕ್ತೆ ಅಮೃತಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದ ರಾಜೀವ್ ಗೌಡ, ತನ್ನ ಮೇಲಿನ ಎಫ್‌ಐಆರ್ ರದ್ದು ಮಾಡಬೇಕು ಅಂತ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಆ ಅರ್ಜಿಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದೆ. ತನಿಖೆ ಮುಂದುವರಿಯಲಿ ಎಂದು ಆದೇಶ ನೀಡುವ ಮೂಲಕ ರಾಜೀವ್ ಗೌಡಗೆ ಮೊದಲ ಶಾಕ್ ನೀಡಿದೆ.
ರಾಜೀವ್ ಗೌಡ ಪರ ವಕೀಲರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೂ ನಿರೀಕ್ಷಣಾ ಜಾಮೀನಿಗಾಗಿ ಮೊದಲೇ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಎರಡನೇ ವಿಚಾರಣೆ ಇಂದು ನಡೆಯಿತು. ಸರ್ಕಾರಿ ಅಭಿಯೋಜಕರು ಸಲ್ಲಿದ್ದ ಆಕ್ಷೇಪಣೆಗಳಿಗೆ ರಾಜೀವ್ ಗೌಡ ಪರ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿದರು.
ಇದನ್ನೂ ಓದಿ: ರಾಜೀವ್ ಗೌಡ ಪರ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪತ್ರ: ಆ್ಯಸಿಡ್ ಎರಚುವುದಾಗಿ ಎಚ್ಚರಿಕೆ
ಸದ್ಯ ನ್ಯಾಯಾಲಯ, ವಾದ-ಪ್ರತಿವಾದ ಆಲಿಸಿದ್ದು, ಜನವರಿ 24ರಂದು ಆದೇಶ ಕಾಯ್ದಿರಿಸಿದೆ. ರಾಜೀವ್ ಗೌಡಗೆ ನಿರೀಕ್ಷಣಾ ಜಾಮೀನು ಸಿಗುತ್ತಾ, ಇಲ್ಲಾ ಜೈಲು ಪಾಲಾಗುತ್ತಾರಾ ಎನ್ನುವುದು ನಾಳೆ ಗೊತ್ತಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:12 pm, Fri, 23 January 26
