ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿದ್ದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ (Chikkaballapur District Hospital) ನಿರ್ವಹಣೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರಿ ಮೆಡಿಕಲ್ ಕಾಲೇಜಿಗೆ ವಹಿಸಿದ್ದೆ ತಡ, ಆಸ್ಪತ್ರೆಯಲ್ಲಿ ಕರ್ತವ್ಯಲೋಪ, ವೈದ್ಯರ ನಿರ್ಲಕ್ಷ್ಯ, ವೈದ್ಯರುಗಳ ಒಳಜಗಳ, ಲಂಚಾವತಾರಗಳನ್ನು ಟಿವಿ9 ಕನ್ನಡ ಬಿಡಿಬಿಡಿಯಾಗಿ ಬಯಲು ಮಾಡಿದ್ದನ್ನು ನೋಡಿದ್ದೀರಿ.. ಕೇಳಿದ್ದೀರಿ.. ಆದರೆ ಈಗ ಆಸ್ಪತ್ರೆಯಲ್ಲಿ ನಡೆದಿರುವ ಮತ್ತೊಂದು ಕರ್ಮಕಾಂಡವನ್ನು (Raslila) ಟಿವಿ9 ಕನ್ನಡ ಡಿಜಿಟಲ್ ಸಾಕ್ಷಾಧಾರಗಳ ಸಮೇತ (System Engineer) ನಿಮ್ಮ ಮುಂದೆ ಇಡುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ ಸಿಸ್ಟಂ ಇಂಜನಿಯರ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ್ ಎನ್ನುವವರು ದಿನಾಂಕ 22-11-2023 ರಂದು ಬುಧವಾರ ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಆಸ್ಪತ್ರೆಯ ಕೊಠಡಿ ಸಂಖ್ಯೆ 149 ರಲ್ಲಿ ಮಹಿಳೆಯೊಬ್ಬರ ಜೊತೆ ರಾಸಲೀಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಸಿಸ್ಟಂ ಇಂಜನಿಯರ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ್, ರಾಸಲೀಲೆಗೂ ಮುನ್ನ ಎಲೆಕ್ಟ್ರಿಕಲ್ ಕೊಠಡಿಗೆ ತೆರಳಿ ಎಲ್ಲಾ ಸಿ.ಸಿ. ಟಿವಿ ಕ್ಯಾಮರಾಗಳನ್ನು ಸ್ಥಗಿತಗೊಳಿಸಿದ್ದಾನಂತೆ. ನಂತರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಿ ಗ್ರೂಪ್ ಗುತ್ತಿಗೆ ನೌಕರನ ಮೂಲಕ ಮಹಿಳೆಯನ್ನು ಕರೆದುಕೊಂಡು ಕೊಠಡಿ ಸಂಖ್ಯೆ 149ಗೆ ತೆರಳಿ ಒಳಗೆ ರಾಸಲೀಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಮಂಜುನಾಥ ಮಹಿಳೆಯೊಬ್ಬಳ ಜೊತೆ ಕೊಠಡಿಯಲ್ಲಿ ರಾಸಲೀಲೆ ನಡೆಸುವುದನ್ನು ಕಂಡ ಕೆಲವು ಸಿಬ್ಬಂದಿಗಳು ಹೊರಗಡೆಯಿಂದ ಚಿಲಕ ಹಾಕಿ, ಇನ್ನಿತರೆ ಸಿಬ್ಬಂದಿ ಹಾಗೂ ಪೊಲೀಸರನ್ನು ಕರೆಯಲು ಆರ್.ಎಂ.ಒ. ಕೊಠಡಿಯತ್ತ ತೆರಳಿದ್ದರು. ಅಷ್ಟರಲ್ಲಿ ಮಂಜುನಾಥ ಬಾಬು ಎನ್ನುವವರನ್ನು ಕರೆಯಿಸಿಕೊಂಡು ಕೊಠಡಿಯ ಚಿಲಕ ತೆಗೆಸಿ ಮಹಿಳೆಯ ಜೊತೆ ಓಡಿಹೋಗಿದ್ದಾನೆ.
ಮಂಜುನಾಥನ ರಾಸಲೀಲೆ ಹಾಗೂ ಪರಾರಿ ದೃಶ್ಯವನ್ನು ಕಂಡ ಆಸ್ಪತ್ರೆಯಲ್ಲಿದ್ದ ಕೆಲವು ಸಿಬ್ಬಂದಿಗಳಲ್ಲಿ ದಿನಾಂಕ 23-11-2023 ರಂದು 10ಕ್ಕೂ ಹೆಚ್ಚು ಜನ ಸಿಬ್ಬಂದಿಗಳು ನಿವಾಸಿ ವೈದ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಆಸ್ಪತ್ರೆಯ ಡೀನ್ ಡಾ. ಮಂಜುನಾಥ್‍ರವರಿಗೆ ಲಿಖಿತ ದೂರು ನೀಡಿದ್ದಾರೆ. ಡೀನ್ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಆರ್.ಎಂ.ಒ.ಗೆ ಸೂಚಿಸಿದ್ದಾರೆ. ವರದಿ ಬಂದಿದೆಯಾದರೂ ಮಂಜುನಾಥನ ಮೇಲೆ ಕ್ರಮ ಕೈಗೊಂಡಿಲ್ಲ.
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಡೀನ್ ಆಗಿರುವ ಡಾ.ಮಂಜುನಾಥ್ ಹಾಗೂ ಸಿಸ್ಟಂ ಇಂಜನಿಯರ್ ರಾಸಲೀಲೆ ಮಾಡಿದ ಮಂಜುನಾಥನಿಗೂ ನಿಕಟ ಸಂಪರ್ಕವಂತೆ, ಒಬ್ಬರಿಗೊಬ್ಬರು ಅತ್ಯಾಪ್ತರು. ಇದರಿಂದಾಗಿ ದೇವಾಲಯದಂತಿರುವ ಆಸ್ಪತ್ರೆಯಲ್ಲಿ ಸಿಸ್ಟಂ ಇಂಜನಿಯರ್ ಮಂಜುನಾಥ ಮಾಡಬಾರದ ಕೆಟ್ಟ ಕೆಲಸ ಮಾಡಿದರೂ ಕಾಲೇಜಿನ ಡೀನ್ ಡಾ.ಮಂಜುನಾಥ್ ಆಸ್ಪತ್ರೆಯ ಬದಲು ಮೆಡಿಕಲ್ ಕಾಲೇಜಿಗೆ ತನ್ನ ಆಪ್ತನನ್ನು ನಿಯೋಜನೆ ಮಾಡಿಕೊಂಡಿದ್ದಾರೆ.
ಈ ಮೊದಲು ಜಿಲ್ಲಾಸ್ಪತ್ರೆಯ ಎಆರ್‍ಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ, ಮಹಿಳೆಯರ ಜೊತೆ ಅಸಭ್ಯ ವರ್ತನೆ ಮಾಡಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಇದರಿಂದ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿಗಳು ಹಾಗೂ ಹಿಂದಿನ ಶಸ್ತ್ರ ಚಿಕಿತ್ಸಕರು ಮಂಜುನಾಥನಿಗೆ ಕೆಲಸದಿಂದ ತೆಗೆದಿದ್ದರು.
ಇದನ್ನೂ ಓದಿ: ಸ್ಟೂಡೆಂಟ್ ಜೊತೆ ಶಿಕ್ಷಕಿ ರೊಮ್ಯಾಂಟಿಕ್ ಫೋಟೋ ಶೂಟ್, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್
ಆದರೆ ಮೆಡಿಕಲ್ ಕಾಲೇಜಿನ ಡೀನ್ ಆಗಿ ಬಂದ ಡಾ.ಮಂಜುನಾಥ್‍ರವರು ರಾಸಲೀಲೆಯ ಮಂಜುನಾಥನನ್ನು ತಮ್ಮ ಅತ್ಯಾಪ್ತರನ್ನಾಗಿ ಮಾಡಿಕೊಂಡಿದ್ದು, ಆಸ್ಪತ್ರೆಯ ಆಡಳಿತ ಮಂಡಳಿಯ ವಿರೋಧ ಲೆಕ್ಕಿಸದೇ ಕಂಪ್ಯೂಟರ್ ಗೊತ್ತಿಲ್ಲದ ಮಂಜುನಾಥನನ್ನು ಸಿಸ್ಟಂ ಇಂಜನಿಯರ್ ಆಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಸಿಕೊಂಡಿದ್ದಾರೆ. ಇದರಿಂದ ರಾಸಲೀಲೆ ಮಂಜುನಾಥನಿಗೂ ಡೀನ್ ಡಾ.ಮಂಜುನಾಥ್‍ರವರಿಗೂ ಅದೇನು ಸಂಬಂಧವೋ ರಹಸ್ಯವಾಗಿ ಉಳಿದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ