ಚಿಕ್ಕಬಳ್ಳಾಪುರ: ಕಳಂಕ ಮರೆಮಾಚಲು ‘ಇಂಡಿಯಾ’ ಟೀಮ್ ಕಟ್ಟಿದ್ದಾರೆ; ಮಾಜಿ ಸಚಿವ ಡಾ.ಕೆ ಸುಧಾಕರ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 07, 2023 | 3:20 PM

ಈಗ ಇದನ್ನು ವಿರೋಧಿಸುವ ಕಾಂಗ್ರೆಸ್‌ ನಾಯಕರು, ಒಂದು ವರ್ಷದ ಹಿಂದೆ ತಮ್ಮ ಯಾತ್ರೆಗೆ ಭಾರತ್ ಜೋಡೋ ಎಂಬ ಹೆಸರನ್ನೇ ಇಟ್ಟಿದ್ದರು. ಕಾಂಗ್ರೆಸ್​ನ ಸಂಸದರು, ಶಾಸಕರು, ಮುಖ್ಯಮಂತ್ರಿಗಳು, ಮಂತ್ರಿಗಳು ಸ್ವೀಕರಿಸಿರುವ ಪ್ರಮಾಣ ವಚನದಲ್ಲಿ ಸಹ ಭಾರತದ ಸಂವಿಧಾನಕ್ಕೆ ಬದ್ಧರಾಗಿರುತ್ತೇವೆ ಎಂಬ ಪದಪ್ರಯೋಗ ಇದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ಕಳಂಕ ಮರೆಮಾಚಲು ‘ಇಂಡಿಯಾ’ ಟೀಮ್ ಕಟ್ಟಿದ್ದಾರೆ; ಮಾಜಿ ಸಚಿವ ಡಾ.ಕೆ ಸುಧಾಕರ್
ಡಾ ಕೆ ಸುಧಾಕರ್​
Follow us on

ಚಿಕ್ಕಬಳ್ಳಾಪುರ, ಸೆ.07: ನಮ್ಮ ದೇಶಕ್ಕೆ ಸಾವಿರಾರು ವರ್ಷಗಳಿಂದಲೂ ಭಾರತ ಎಂಬ ಹೆಸರಿದೆ. ಮೊಘಲರು, ಬ್ರಿಟಿಷರು, ಪೋರ್ಚುಗೀಸರು ಮುಂತಾದ ವಿದೇಶಿಯರು ಭಾರತಕ್ಕೆ ಇಂಡಿಯಾ, ಹಿಂದೂಸ್ತಾನ ಹೀಗೆ ಕಾಲಕಾಲಕ್ಕೆ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಆದರೆ ಕನ್ನಡ, ಹಿಂದಿ, ತೆಲುಗು ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಅನೇಕ ಶತಮಾನಗಳಿಂದ ಭಾರತ ಎಂಬ ಪದ ಬಳಕೆ ಇದೆ. ಹಾಗಾಗಿ ಭಾರತ ಎಂಬ ಪದಪ್ರಯೋಗಕ್ಕೆ ಆಕ್ಷೇಪಣೆ ವ್ಯಕ್ತಪಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ (Dr. k Sudhakar) ಟೀಕಿಸಿದರು.

ಭಾರತ ಹೆಸರಿಗೆ ಕಾಂಗ್ರೆಸ್‌ ನಾಯಕರು ವಿರೋಧಕ್ಕೆ ಡಾ.ಕೆ.ಸುಧಾಕರ್‌ ಆಕ್ರೋಶ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ ಎಂದು ಕರೆಯುವುದು ನಿಜ. ಆದರೆ, ನಮ್ಮ ದೇಶಕ್ಕೆ ಹಿಂದಿನಿಂದಲೂ ‘ಭರತ ವರ್ಷ, ಭರತ ಖಂಡʼ ಎಂಬ ಹೆಸರಿದೆ. ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆಯಲ್ಲಿ ‘ಭಾರತ ಜನನಿಯ ತನುಜಾತೆʼ ಎಂದೇ ಇದೆ. ರವೀಂದ್ರನಾಥ ಠ್ಯಾಗೋರರು ಬರೆದ ರಾಷ್ಟ್ರಗೀತೆಯಲ್ಲಿ ‘ಭಾರತ ಭಾಗ್ಯವಿಧಾತʼ ಎಂದಿದೆ. ನಮ್ಮ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಗೆ ಭಾರತ ರತ್ನ ಎಂಬ ಹೆಸರಿದೆ. ನೆಹರೂ – ಗಾಂಧಿ ಪರಿವಾರದ ಮೂರು ಜನರು ಈ ಪ್ರಶಸ್ತಿ ಪಡೆದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ‘ಭಾರತ ಮಾತೆಗೆ ಜೈʼ ಎಂದರೇ ಹೊರತು ‘ಇಂಡಿಯಾ ಮಾತೆಗೆ ಜೈ’ ಎನ್ನಲಿಲ್ಲ.

ಇದನ್ನೂ ಓದಿ:ಸಿಎಂ ರಾಜಕೀಯ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಜಾ

ಈಗ ಇದನ್ನು ವಿರೋಧಿಸುವ ಕಾಂಗ್ರೆಸ್‌ ನಾಯಕರು, ಒಂದು ವರ್ಷದ ಹಿಂದೆ ತಮ್ಮ ಯಾತ್ರೆಗೆ ಭಾರತ್ ಜೋಡೋ ಎಂಬ ಹೆಸರನ್ನೇ ಇಟ್ಟಿದ್ದರು. ಕಾಂಗ್ರೆಸ್​ನ ಸಂಸದರು, ಶಾಸಕರು, ಮುಖ್ಯಮಂತ್ರಿಗಳು, ಮಂತ್ರಿಗಳು ಸ್ವೀಕರಿಸಿರುವ ಪ್ರಮಾಣ ವಚನದಲ್ಲಿ ಸಹ ಭಾರತದ ಸಂವಿಧಾನಕ್ಕೆ ಬದ್ಧರಾಗಿರುತ್ತೇವೆ ಎಂಬ ಪದಪ್ರಯೋಗ ಇದೆ. ಆದರೆ, ಈಗ ಕೇಂದ್ರ ಸರ್ಕಾರ ಭಾರತ ಎಂಬ ಹೆಸರಿಗೆ ಆದ್ಯತೆ ನೀಡಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂದರೆ, ಇದರಲ್ಲೂ ಕಾಂಗ್ರೆಸ್‌ ನಾಯಕರು ರಾಜಕೀಯ ಲಾಭ ಹುಡುಕುತ್ತಿರುವುದು ಸ್ಪಷ್ಟವಾಗಿದೆ ಎಂದರು.  ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಸ್ವಾವಲಂಬಿ ದೇಶವಾಗಿಸುವ ಕಡೆಗೆ ಒತ್ತು ನೀಡಿದ್ದಾರೆ. ಇಂಡಿಯಾ ಎಂಬ ಹೆಸರನ್ನು ವಿದೇಶಿಯರು ಹೆಚ್ಚಾಗಿ ಬಳಸುವುದರಿಂದ ಅದು ನಮ್ಮದು ಎಂದೆನಿಸುವುದಿಲ್ಲ. ಇದರ ಬದಲಾಗಿ ಭಾರತ ಎಂದು ಕರೆದರೆ ನಮ್ಮತನವನ್ನು ಎತ್ತಿ ತೋರಿದಂತಾಗುತ್ತದೆ. ಭಾರತ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕೆ ಹೊರತು, ಅದರಲ್ಲಿ ಮುಜುಗರ ಪಡುವಂಥದ್ದೇನೂ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಎಂಬ ಹೆಸರನ್ನು ಇಟ್ಟುಕೊಂಡಿದೆ. ಈ ಹೆಸರಿಗೆ ಬಿಜೆಪಿ ಹೆದರಿದೆ ಎಂದುಕೊಳ್ಳುವುದು ಮೂರ್ಖತನ. ವಿರೋಧ ಪಕ್ಷಗಳ ಈ ಮೈತ್ರಿಕೂಟದಲ್ಲಿರುವ ನಾಯಕರೇ ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದು, ಅವರ ನಡುವೆಯೇ ಸಮಸ್ಯೆಗಳು ಬಗೆಹರಿದಿಲ್ಲ. ಹಿಂದಿನ ಯುಪಿಎ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಮುಖ ತೋರಿಸಿಕೊಳ್ಳಲಾಗದೆ ಯುಪಿಎ ಹೆಸರನ್ನು ಬಿಟ್ಟು ಇಂಡಿಯಾ ಹೆಸರನ್ನು ಅಂಟಿಸಿಕೊಂಡಿದೆ. ಯಾವುದೇ ಟೀಕೆ ಬಾರದಿರಲಿ ಎಂಬ ಹೆದರಿಕೆಯಿಂದಲೇ ಈ ಕೂಟಕ್ಕೆ ಇಂಡಿಯಾ ಎಂಬ ಹೆಸರಿಡಲಾಗಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ಈ ದುಷ್ಟರ ಕೂಟಕ್ಕೆ ಅಂಜುವ ಅಗತ್ಯವಿಲ್ಲ ಎಂದರು.

ಇದನ್ನೂ ಓದಿ:ಇಂಡಿಯಾ-ಭಾರತ ವಿವಾದ: ಈ ಕುರಿತು ಹೇಳಿಕೆ ನೀಡದಂತೆ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

ಸನಾತನ ಧರ್ಮದ ನಿರ್ಮೂಲನೆಯೇ ಇಂಡಿಯಾ ಕೂಟದ ಗುರಿ

ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದೇ ‘ಇಂಡಿಯಾʼ ಮೈತ್ರಿಕೂಟದ ಗುರಿ ಎಂಬುದನ್ನು ಉದಯನಿಧಿ ಸ್ಟಾಲಿನ್‌ ಅವರ ಹೇಳಿಕೆ ಸ್ಪಷ್ಟಪಡಿಸಿದೆ. ಸನಾತನ ಧರ್ಮ ಈ ದೇಶದ ಪರಂಪರೆಯ ಬುನಾದಿಯಾಗಿದ್ದು, ಯಾರೇ ನಾಯಕರು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಟೀಕೆ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡಬಾರದು. ರಾಜ್ಯದ ಕಾಂಗ್ರೆಸ್‌ ನಾಯಕರು ಕೂಡ ಸ್ಟಾಲಿನ್‌ ಅವರ ಹೇಳಿಕೆಗೆ ಬೆಂಬಲ ನೀಡಿ ಸನಾತನ ಧರ್ಮಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದೂ ಎಂಬುದು ಧರ್ಮ ಎನ್ನುವುದಕ್ಕಿಂತ ಹೆಚ್ಚಾಗಿ, ಅದೊಂದು ಜೀವನ ಪದ್ಧತಿ ಎಂದು ಸುಪ್ರಿಂ ಕೋರ್ಟ್‌ ಹೇಳಿದೆ. ಅಂದರೆ ಪ್ರಾಂತ್ಯ, ಜಾತಿ, ಭಾಷೆಯ ವೈವಿಧ್ಯತೆ ಮೀರಿ ಎಲ್ಲಾ ಭಾರತೀಯರು ಸಾವಿರಾರು ವರ್ಷಗಳಿಂದ ರೂಢಿಸಿಕೊಂಡಿ ಬಂದಿರುವ ಜೀವನ ಕ್ರಮವೇ ಸನಾತನ ಧರ್ಮ. ಮೊದಲು ಸನಾತನ ಹಿಂದೂ ಧರ್ಮದ ಮಹತ್ವವನ್ನು ಕಾಂಗ್ರೆಸ್‌ ನಾಯಕರು ಅರಿತುಕೊಳ್ಳಬೇಕು ಎಂದು ಸಚಿವ ಸುಧಾಕರ್ ಸುದೀರ್ಘ ಲೇಖನ ಬರೆದು ಹಂಚಿಕೊಂಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ