ಚಿಕ್ಕಬಳ್ಳಾಪುರ, ಜುಲೈ 27: ವರ್ಷದ 12 ತಿಂಗಳೂ ಪೂರ್ತಿ ಕಂತು ಹಣ ಕಟ್ಟಿದರೆ… ಅದಕ್ಕೆ 25 ಪರ್ಸೆಂಟ್ ಲಾಭ ಸೇರಿಸಿ, ಅಸಲು ಹಣವನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ಮರಳಿ ಕೊಡುವುದಾಗಿ ನಂಬಿಸಿದ ಉತ್ತರ ಭಾರತ ಮೂಲದ ಖತರ್ನಾಕ್ ಲೇಡಿಯೊಬ್ಬಳು… ಬರೋಬ್ಬರಿ ಮೂರು ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿ ಇನ್ನೇನು ವರಮಹಾಲಕ್ಷ್ಮಿ ಹಬ್ಬ ಬರುವಷ್ಟರಲ್ಲಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಕನ್ನಂಪಲ್ಲಿ ಬಡಾವಣೆ ಹಾಗೂ ಸುತ್ತಮುತ್ತಲ ಪ್ರದೇಶಗಳ ಜನರು ಈಗ ಮೋಸಹೋಗಿದ್ದಾರೆ. ಮೂಲತಃ ಉತ್ತರ ಭಾರತ ಅಸ್ಸಾಂ ಮೂಲದ ಶ್ರೀಮತಿ ಪಪ್ಪಿಸಿಂಗ್ ಎಸ್ಕೇಪ್ ಆಗಿರುವ ಮಹಿಳೆ. ಸುಮಾರು 10 ವರ್ಷಗಳ ಹಿಂದೆ ಪಪ್ಪಿಸಿಂಗ್ ಮತ್ತು ಆಕೆಯ ಗಂಡ ಬೊಪ್ಪಿಸಿಂಗ್ ಚಿಂತಾಮಣಿ ನಗರದ ಕನ್ನಂಪಲ್ಲಿ ಬಡಾವಣೆಗೆ ಆಗಮಿಸಿದ್ದಾರೆ.
ಸ್ಥಳಿಯರ ಮನೆ ಹಾಗೂ ಅಂಗಡಿಯನ್ನು ಬಾಡಿಗೆ ಪಡೆದು ದಿನಸಿ ವ್ಯಾಪಾರ ಆರಂಭಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅನಧಿಕೃತವಾಗಿ ಶ್ರೀ ದುರ್ಗಾಪರಮೇಶ್ವರಿ ಉಳಿತಾಯ ಚೀಟಿ ಎಂಬ ಹೆಸರಿನಲ್ಲಿ ಚೀಟಿ ವ್ಯವಹಾರ ಪ್ರಾರಂಭ ಮಾಡಿದ್ದಾರೆ. ಇತ್ತೀಚೆಗೆ ಸ್ಥಳೀಯರ ಜೊತೆ ವಿಶ್ವಾಸ ಬೆಳಸಿಕೊಂಡು ಪಟಾಕಿ ಚೀಟಿ, ವರಮಹಾಲಕ್ಷ್ಮಿ ಹಬ್ಬದ ಚೀಟಿ ಸೇರಿದಂತೆ ಫೈನಾನ್ಸ್ ಆರಂಭಿಸಿದ್ದಾರೆ.
ಕಳೆದ ವರ್ಷ ದಿನಾಂಕ 22-08-2022 ರಂದು ಶ್ರೀ ದುರ್ಗಾಪರಮೇಶ್ವರಿ ಉಳಿತಾಯ ಚೀಟಿ ಎಂಬ ಹೆಸರಿನಲ್ಲಿ ಚೀಟಿ ವ್ಯವಹಾರವನ್ನು ಪ್ರಾರಂಭ ಮಾಡಿದ್ದಾರೆ. ಚೀಟಿಯಲ್ಲಿ ಪ್ರತಿ ತಿಂಗಳೂ ಕನಿಷ್ಠ 500, 1000, 2000, 5000, 10,000 ರೂಗಳನ್ನು 12 ತಿಂಗಳ ಕಾಲ ಕಟ್ಟುವಂತೆ, ನಂತರ ವರಲಕ್ಷ್ಮೀ ಹಬ್ಬದ ಮಾಹೆಯಲ್ಲಿ ಗ್ರಾಹಕರು ಕಟ್ಟುವ ಹಣಕ್ಕೆ 12,000 ಕ್ಕೆ ವಾರ್ಷಿಕ 3,000 ರೂಗಳನ್ನು ಸೇರಿಸಿ 15,000 ರೂಗಳನ್ನು ವಾಪಸ್ಸು ಕೊಡುವುದಾಗಿ ನಂಬಿಸಿ ಈಗ ಹಬ್ಬ ಬರುವ ಮುನ್ನವೇ ದಂಪತಿ ಎಸ್ಕೇಪ್ ಆಗಿದ್ದಾರೆ.
ಬಾಡಿಗೆ ವಾಸವಿದ್ದ ಮನೆ ಹಾಗೂ ಅಂಗಡಿಗಳಿಗೆ ಬೀಗ ಜಡಿದು ವಂಚಕಿ ಶ್ರೀಮತಿ ಪಪ್ಪಿಸಿಂಗ್ ಹಾಗೂ ಆಕೆಯ ಗಂಡ ಬೊಪ್ಪಿಸಿಂಗ್ ನಾಪತ್ತೆಯಾಗಿದ್ದರೆ, ಹಣ ಕಟ್ಟಿದ ಸುಮಾರು 40 ಮಂದಿ ಚಿಂತಾಮಣಿ ಪೊಲೀಸರ ಮೊರೆ ಹೋಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ