ಅತಿಯಾದ ಮಳೆ: ಮುಂದಿನ ದಿನಗಳಲ್ಲಿ ಟೊಮೇಟೊ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ
ಬೆಲೆ ಏರಿಕೆಯಿಂದ ಗ್ರಾಹಕರು ಟೊಮೇಟೊ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಅಡುಗೆ ಮನೆಯಲ್ಲಿ ಟೊಮೇಟೊ ಕಾಣಸಿಗುತ್ತಿಲ್ಲ. ಆದರೆ ಟೊಮೇಟೊ ಬೆಲೆ ಏರಿಕೆಯಿಂದ ರೈತರಿಗೆ ಸಾಕಷ್ಟು ಲಾಭವಾಗಿದ್ದು ಹಿರಿ ಹಿರಿ ಹಿಗ್ಗಿದ್ದಾರೆ. ಈ ಬೆಲೆ ಏರಿಕೆ ಹೀಗೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಂಗಳೂರು: ಬೆಲೆ ಏರಿಕೆಯಿಂದ ಗ್ರಾಹಕರು ಟೊಮೇಟೊ (Tomato) ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಅಡುಗೆ ಮನೆಯಲ್ಲಿ ಟೊಮೇಟೊ ಕಾಣಸಿಗುತ್ತಿಲ್ಲ. ಆದರೆ ಟೊಮೇಟೊ ಬೆಲೆ ಏರಿಕೆಯಿಂದ (Tomato Price Hike) ರೈತರಿಗೆ ಸಾಕಷ್ಟು ಲಾಭವಾಗಿದ್ದು ಹಿರಿ ಹಿರಿ ಹಿಗ್ಗಿದ್ದಾರೆ. ಈ ಬೆಲೆ ಏರಿಕೆ ಹೀಗೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಪ್ರಿಲ್-ಮೇ ತಿಂಗಳಲ್ಲಿ ಬೇಸಿಗೆಯಿಂದ ಬೆಳೆ ಹಾನಿಯಾಗಿದ್ದ ಪರಿಣಾಮ ಬೆಲೆ ಏರಿಕೆಯಾಗಿತ್ತು. ಇದೀಗ ಅತಿಯಾದ ಮಳೆಯಿಂದ ಟೊಮೇಟೊ ಬೆಳೆಗೆ ಭಾರಿ ಹೊಡೆತ ಬಿದಿದ್ದು, ಕೈಗೆ ಬಂದಿದ್ದು ಬಾಯಿಗೆ ಬರದಂತಾಗಿದೆ. ಹೀಗಾಗಿ ಅತಿಯಾದ ಮಳೆಯಿಂದ ಕಟಾವಿಗೆ ಬಂದ ಬಳೆ ನಾಶವಾಗುತ್ತಿದ್ದು, ಇದರಿಂದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಾಗಿ ಟೊಮೇಟೊ ಬೆಳೆಯಲಾಗುತ್ತದೆ. ಸರಿ ಸುಮಾರು 81,000 ಹೆಕ್ಟೇರ್ ಭೂಮಿಯಲ್ಲಿ ರೈತರು ಟೊಮೇಟೋ ಬೆಳೆಯುತ್ತಾರೆ.
ಜೂನ್ ತಿಂಗಳಿನಿಂದ ಮುಂಗಾರು ಬಿತ್ತನೆ ಕಾರ್ಯ ಆರಂಭವಾಗಿದ್ದು, ಆಗಸ್ಟ್ ಮೂರನೇ ವಾರದಲ್ಲಿ ಬೆಳೆ ಮಾರುಕಟ್ಟೆಗೆ ಬರಲಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯದಿಂದ ರಾಜ್ಯಾದ್ಯಂತ ಶೇ.70ರಷ್ಟು ಟೊಮೇಟೊ ಬೆಳೆ ಹಾನಿಯಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಅತಿಯಾದ ಬಿಸಿಲು, ಮಳೆ ಮತ್ತು ಕೀಟಗಳ ಕಾಟದಿಂದ ಅಪಾರ ನಷ್ಟವನ್ನು ಅನುಭವಿಸಿದರು ಎಂದು ಕೋಲಾರದ ತೋಟಗಾರಿಕೆ ಉಪನಿರ್ದೇಶಕ ಕೆ.ಆರ್.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: Tomato Price Hike: ಟೊಮೆಟೊ ಬೆಲೆ ಏರಿಕೆ; ಲಕ್ಷ, ಕೋಟಿ ರೂಪಾಯಿಗಳಲ್ಲಿ ಆದಾಯ ಗಳಿಸುತ್ತಿದ್ದಾರೆ ಕರ್ನಾಟಕದ ರೈತರು
ಕೋಲಾರ ಜಿಲ್ಲೆಯಲ್ಲಿ 6,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೇಟೊ ಸಸಿಗಳನ್ನು ನಾಟಿ ಮಾಡಲಾಗಿದೆ. ಕೆಲವೇ ವಾರಗಳಲ್ಲಿ ಫಸಲು ಕಟಾವಿಗೆ ಬರಲಿದೆ ಎಂದರು.
ಜಂಟಿ ನಿರ್ದೇಶಕ ಧನರಾಜ್ ಮಾತನಾಡಿ, 25,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಪರಿಸ್ಥಿತಿ ಅನುಕೂಲಕರವಾಗಿದೆ. ಆದರೆ, ಹೆಚ್ಚು ಮಳೆಯಾದರೆ ಬೆಳೆ ಹಾನಿಯಾಗುವ ಸಂಭವವಿದೆ. ಮುಂಗಾರು ಬಿತ್ತನೆ ಜೂನ್ ಎರಡನೇ ವಾರದಲ್ಲಿ ಕೊನೆಗೊಂಡಿದ್ದು, ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ಟೊಮೇಟೊ ಕಟಾವಿಗೆ ಬರುತ್ತದೆ. ಇದು ಮಾರುಕಟ್ಟೆಯಲ್ಲಿ ಟೊಮೇಟೋ ಅಭಾವವನ್ನು ಕಡಿಮೆ ಮಾಡಬಹುದು ಎಂದರು.
ಟೊಮೇಟೊ ಗುಣಮಟ್ಟವನ್ನು ಅವಲಂಬಿಸಿ ಬೆಲೆ ನಿರ್ಧರಿಸಲಾಗುತ್ತದೆ. ಒಂದು ಕ್ವಿಂಟಲ್ ಉತ್ತಮ ಗುಣಮಟ್ಟದ ಟೊಮೇಟೊ 7 ಸಾವಿರ ರೂ. ಆಗುತ್ತದೆ. ಈಗ ಉತ್ತಮ ಗುಣಮಟ್ಟದ ಟೊಮೇಟೊ ಕೆಜಿಗೆ 100 ರಿಂದ 120 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅತಿಯಾದ ಮಳೆಯಿಂದ ಬೆಳೆ ನಾಶವಾದರೇ ಆಗಸ್ಟ್‌ನಲ್ಲಿ ಟೊಮೇಟೊ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:44 am, Fri, 28 July 23