ನಂದಿನಿ ಹಾಲಿಗೆ ನೀರು ಕಲಬೆರಕೆ: ವಿಸ್ತರಣಾಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ ಅಮಾನತು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 29, 2025 | 4:08 PM

ಚಿಕ್ಕಬಳ್ಳಾಪುರದ ಚಿಮುಲ್ ಡೈರಿಯಲ್ಲಿ ಹಾಲಿಗೆ ನೀರು ಬೆರೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಡಿಕೆರೆ ಹಾಲಿನ ಡೇರಿ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಚಿಮುಲ್ ವಿಸ್ತರಣಾಧಿಕಾರಿ ಕೆ.ನಾರಾಯಣಸ್ವಾಮಿರನ್ನು ಅಮಾನತು ಮಾಡಲಾಗಿದೆ. ತನಿಖೆಯಲ್ಲಿ ಸುಮಾರು 10,000 ಲೀಟರ್ ನೀರು ಬೆರೆಸಿರುವುದು ಬಯಲಾಗಿದೆ. ಇದು ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ.

ನಂದಿನಿ ಹಾಲಿಗೆ ನೀರು ಕಲಬೆರಕೆ: ವಿಸ್ತರಣಾಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ ಅಮಾನತು
ನಂದಿನಿ ಹಾಲಿಗೆ ನೀರು ಕಲಬೆರಕೆ: ವಿಸ್ತರಣಾಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ ಅಮಾನತು
Follow us on

ಚಿಕ್ಕಬಳ್ಳಾಪುರ, ಜನವರಿ 28: ನಂದಿನಿ ಹಾಲು (Milk) ಹಾಗೂ ಹಾಲಿನ ಉತ್ಪನ್ನಗಳು ಅಂದರೆ ಜನರಿಗೆ ನಂಬಿಕೆ. ಆದರೆ ಅಂತಹ ನಂದಿನಿ ಹಾಲಿಗೆ ಸ್ವತಃ ಹಾಲಿನ ಡೈರಿಯ ಸಿಬ್ಬಂದಿಯೇ ನೀರು ಮಿಶ್ರಣ ಮಾಡಿ ನಂದಿನಿ ಹಾಲಿಗೆ ಅಪಚಾರ ಮಾಡಿದ್ದರು. ಈ ಕುರಿತು ಜನವರಿ 18ರಂದು ಟಿವಿ9 ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಚಿಮುಲ್ ತನಿಖೆ ಮಾಡಿತ್ತು. ತನಿಖೆಯಲ್ಲಿ ಸಿಬ್ಬಂದಿಗಳ ಕಳ್ಳಾಟ ಬಯಲಾಗಿದ್ದು, ತಪ್ಪು ಮಾಡಿದವರನ್ನು ಈಗ ಅಮಾನತು ಮಾಡಲಾಗಿದೆ.

ಜಿಲ್ಲೆಯ ಚಿಂತಾಮಣಿ ತಾಲೂಕು ಮಾಡಿಕೆರೆ ಗ್ರಾಮದ ಹಾಲಿನ ಬಿ.ಎಂ.ಸಿ ಡೈರಿಯಲ್ಲಿ ಸಿಬ್ಬಂದಿಗಳೇ ರೈತರು ತಂದು ಹಾಕುವ ಹಾಲಿಗೆ ನೀರು ಕಲಬೆರಕೆ ಮಾಡುತ್ತಿದ್ದರು. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಎಂಡಿ ಶ್ರೀನಿವಾಸಗೌಡ ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ ಅಕ್ರಮ ಅವ್ಯವಹಾರ ಬಯಲಾಗಿದ್ದು, ಚಿಮುಲ್ ವಿಸ್ತರಣಾಧಿಕಾರಿ ಕೆ.ನಾರಾಯಣಸ್ವಾಮಿ ಸೇರಿದಂತೆ ಮಾಡಿಕೆರೆ ಹಾಲಿನ ಡೇರಿ ಕಾರ್ಯದರ್ಶಿ, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಡೈರಿ ಸಿಬ್ಬಂದಿಯಿಂದಲೇ ನಂದಿನಿ ಹಾಲಿಗೆ ನೀರು ಬೆರಸಿ ವಂಚನೆ

ಇನ್ನೂ ಚಿಮುಲ್ ಅಧಿಕಾರಿಗಳ ತಂಡ ನಡೆಸಿದ ಸಮಗ್ರ ತನಿಖೆಯಲ್ಲಿ, ರೈತರು ತಂದು ಹಾಕುವ ಪರಿಶುದ್ಧ ಹಾಲಿಗೆ ಇದುವರೆಗೂ ಹತ್ತು ಸಾವಿರದ 182 ಲೀಟರ್ ನೀರು ಬೆರೆಸಿರುವುದು ಬಯಲಾಗಿದೆ. ಇದರ ಮೌಲ್ಯ ಬರೋಬ್ಬರಿ 3,53,376 ರೂ. ಆಗಿದೆ. ಇನ್ನೂ ಹಾಲಿಗೆ ಮಿಶ್ರಣ ಮಾಡಿರುವ ನೀರಿಗೆ ಕ್ಷೀರ ಸಿರಿ ಯೋಜನೆಯಡಿ 50,939 ರೂ. ಪ್ರೋತ್ಸಾಹಧನವನ್ನು ಅಕ್ರಮವಾಗಿ ಪಡೆದುಕೊಂಡಿರುವುದು ಬಯಲಾಗಿದೆ. ಒಟ್ಟು 4,04,675 ರೂ. ಅಕ್ರಮವಾಗಿ ಅನಧಿಕೃತವಾಗಿ ಹಣ ಪಡೆದುಕೊಂಡಿರುವುದು ಬಯಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹಾಲು ಉತ್ಪಾದನೆಯಲ್ಲಿ ಕುಂಠಿತ: ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರಾ ರೈತರು?

ಶುದ್ಧ ಹಾಲಿಗೆ ನೀರು ಮಿಶ್ರಣ ಮಾಡಿ ಲೂಟಿ ಹೊಡೆದಿರುವ ಹಣವನ್ನ ಮರಳಿ ಒಕ್ಕೂಟಕ್ಕೆ ಕಟ್ಟುವಂತೆ ಚಿಕ್ಕಬಳ್ಳಾಪುರ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಎಂ.ಡಿ ಶ್ರೀನಿವಾಸಗೌಡ ಆದೇಶ ಮಾಡಿದ್ದು, ವಜಾಗೊಂಡಿರುವ ಸಿಬ್ಬಂದಿ, ಅಧಿಕಾರಿಗಳು ಏನು ಮಾಡುತ್ತಾರೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:33 pm, Tue, 28 January 25