ಅವರಿಬ್ಬರೂ ಪರಸ್ಪರ ಇಷ್ಟಪಟ್ಟು ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಂಡಿದ್ದರು. ಇಬ್ಬರ ಹಾಲು ಜೇನಿನಂಥ ಸಂಸಾರಕ್ಕೆ ಮೂರು ವರ್ಷದ ಮಗ ಸಾಕ್ಷಿಯಾಗಿದ್ದ. ನಾಳೆ ಶುಕ್ರವಾರ ನೂತನ ಗೃಹ ಪ್ರವೇಶ ಮಾಡಬೇಕಿತ್ತು. ಅಷ್ಟರಲ್ಲೆ… ಈ ದೀಪಾವಳಿ ಅವರ ಬದುಕಿನಲ್ಲಿ ತರಬಾರದ ಸಂಕಷ್ಟ, ಕಗ್ಗತ್ತಲು ತಂದಿಟ್ಟಿದೆ.
ಆಕೆಯ ಹೆಸರು ಸುಪ್ರಿಯಾ, ಬಿಕಾಂ ಪದವೀಧರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಮಂಡಿಬೆಬೆಲೆ ನಿವಾಸಿ. ತಂದೆ ಈಶ್ವರಪ್ಪ -ತಾಯಿ ರಾಧಮ್ಮ. ರೈತರಾದರೂ ಮಗಳನ್ನು ಮುದ್ದಾಗಿ ಸಾಕಿ ವಿದ್ಯಾಭ್ಯಾಸ ಮಾಡಿಸಿದ್ದರು. ಸುಪ್ರೀಯಾಳನ್ನು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ವಿನಾಯಕ ಬಡಾವಣೆಯ ನಿವಾಸಿ ವೆಂಕಟೇಶ ಎನ್ನುವಾತನಿಗೆ ಕೊಟ್ಟು ಮದುವೆ ಮಾಡಿದ್ರು. ಇಬ್ಬರೂ ಅನೋನ್ಯತೆಯಿಂದ ಇದ್ದರು. ಆದ್ರೆ ನಿನ್ನೆ ಸುಪ್ರಿಯಾ ಗಂಡನ ಮನೆಯಲ್ಲಿ ಮಗುವನ್ನು ಬಿಟ್ಟು ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಇದರಿಂದ ಸುಪ್ರಿಯಾ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ. ಸುಪ್ರಿಯಾ ಗಂಡ ನೂತನವಾಗಿ ಮನೆ ನಿರ್ಮಾಣ ಮಾಡಿದ್ದು, ನಾಳೆ ಶುಕ್ರವಾರ ಮನೆ ಗೃಹ ಪ್ರವೇಶ ಇತ್ತು. ಜೊತೆಗೆ, ದೀಪಾವಳಿ ಹಬ್ಬ ಇರುವ ಕಾರಣ ಕುಟುಂಬದ ಮಂದಿ ಸಂತಸ ಸಡಗರ ಸಂಭ್ರಮದಿಂದ ಇದ್ದರು. ಆದ್ರೆ ಸುಪ್ರಿಯಾ ಮೃತಪಟ್ಟಿರುವ ಕಾರಣ ಆಕೆಯ ತಂದೆ ತಾಯಿಯು, ಮೃತಳ ಅತ್ತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ವರದಕ್ಷಿಣೆ ತರಲು ಹೇಳಿದ್ದರು. ನಾವು ಹಣ ಇಲ್ಲ ಅಂತಾ ಹೇಳಿದ್ದೆವು. ಮನೆಯಲ್ಲಿ ಅತ್ತೆ ಸೊಸೆ ಜಗಳ ಇತ್ತು. ಅದರಿಂದಲೇ… ಸುಪ್ರೀಯಾ ಸಾವಿನ ಮನೆ ಸೇರಿದ್ದಾಳೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತಳ ಗಂಡ ವೆಂಕಟೇಶ ಮನೆಯಲ್ಲಿ ಯಾವುದೆ ಹೇಳಿಕೊಳ್ಳುವಂಥ ಸಮಸ್ಯೆ ಇರಲಿಲ್ಲ, ಸಣ್ಣ ಪುಟ್ಟ ಸಮಸ್ಯೆ ಬಿಟ್ರೆ ಏನೂ ಇರಲಿಲ್ಲ ಅಂತ ಹೇಳುತ್ತಾರೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)
ಇನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಲಾಗಿತ್ತು. ಶುಕ್ರವಾರ ಗೃಹ ಪ್ರವೇಶ, ಬಂಧು ಬಳಗಕ್ಕೆ ಗೃಹ ಪ್ರವೇಶ ಆಹ್ವಾನ ಪತ್ರ ನೀಡಲಾಗಿತ್ತು. ಆದ್ರೂ ಸುಪ್ರಿಯಾ ಯಾಕೆ ಸಾವಿನ ಮನೆ ಸೆರಿದ್ದಾಳೆ? ಆಕೆಯೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಳಾ? ಇಲ್ಲ ಆಕೆಯ ಅತ್ತೆ ಗಂಡ ನೇಣು ಬಿಗಿದು ಆತ್ಮಹತ್ಯೆ ಕಥೆ ಸೃಷ್ಟಿ ಮಾಡಿದ್ದಾರಾ? ಗೊತ್ತಿಲ್ಲ! ಸದ್ಯಕ್ಕೆ ಚಿಂತಾಮಣಿ ನಗರ ಠಾಣೆ ಪೊಲೀಸರು, ವರದಕ್ಷಣೆ ಕಿರುಕುಳ ಹಾಗೂ ಆತ್ಮಹತ್ಯೆ ಪ್ರಚೋದನೆ ಆರೋಪದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.