ಗನ್‌ ಜತೆ ಆಟವಾಡುವಾಗ ಮಿಸ್ ಫೈರ್, 7 ವರ್ಷದ ಮಗುವಿನ ಹೃದಯಕ್ಕೆ ಹೊಕ್ಕಿದ ಗುಂಡು

| Updated By: ರಮೇಶ್ ಬಿ. ಜವಳಗೇರಾ

Updated on: Apr 11, 2024 | 11:03 PM

ಏರ್ ಗನ್​ ಜೊತೆ ಆಟವಾಡುವಾಗ ಮಿಸ್​ ಫೈರ್ ಆಗಿ ಏಳು ವರ್ಷದ ಮಗು ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳಿಗೆ ಆಟ ಆಡಲು ಯಾವ ವಸ್ತುಗಳು ಕೊಡಬೇಕು, ಯಾವುದನ್ನು ಕೊಡಬಾರದು ಎನ್ನುವ ಪ್ರಜ್ಞೆ ಇರಬೇಕು. ಅದು ಇಲ್ಲ ಅಂದ್ರೆ ಇಂತಹ ಅನಾಹುತಗಳು ಸಂಭವಿಸುತ್ತವೆ.

ಗನ್‌ ಜತೆ ಆಟವಾಡುವಾಗ ಮಿಸ್ ಫೈರ್, 7 ವರ್ಷದ ಮಗುವಿನ ಹೃದಯಕ್ಕೆ ಹೊಕ್ಕಿದ ಗುಂಡು
ಪ್ರಾತಿನಿಧಿಕ ಚಿತ್ರ
Follow us on

ಚಿಕ್ಕಮಗಳೂರು, (ಏಪ್ರಿಲ್ 11): ಪೋಷಕರ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ. ಹೌದು.. ಆಟವಾಡುವಾಗ ಏರ್​ ಗನ್ (Air Gun) ಜೊತೆ ಆಟವಾಡುವಾಗ ಮಿಸ್ ಫೈರ್ ಆಗಿ ಏಳು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ಏರ್‌ ಗನ್‌ (Air Gun) ಇಟ್ಟುಕೊಂಡು ಆಟ ಆಡುವಾಗ ಬಾಲಕ ಟ್ರಿಗರ್‌ ಒತ್ತಿದ್ದಾನೆ. ಗನ್ ಮಿಸ್‌ ಫೈರ್‌ (misfire) ಆಗಿ ಗುಂಡು ಬಾಲಕನ ದೇಹದೊಳಗೆ ಹೊಕ್ಕಿದೆ. 7 ವರ್ಷದ ಬಾಲಕ ವಿಷ್ಣು ಮೃತ ದುರ್ದೈವಿ.

ಕಾಫಿ ತೋಟದಲ್ಲಿ ಮಂಗಗಳನ್ನ ಓಡಿಸಲು ಬಳಸುವ ಏರ್ ಗನ್ ಜೊತೆ ವಿಷ್ಣು ಮನೆ ಮುಂದೆ ಆಟವಾಡುತ್ತಿದ್ದ. ಈ ವೇಳೆ ವಿಷ್ಣು ಅಚಾನಕ್ ಆಗಿ ಟ್ರಿಗರ್​ ಒತ್ತಿದ್ದಾನೆ. ಪರಿಣಾಮ ಏರ್​ ಗನ್ ಫೈರ್ ಆಗಿದ್ದು, ನೇರವಾಗಿ ​ಗನ್​ನೊಳಗಿದ್ದ ಬಾಲ್ಸ್ ವಿಷ್ಣುವಿನ ಹೃದಯ ಭಾಗಕ್ಕೆ ಹೊಕ್ಕಿದೆ. ಪೋಷಕರು ಮನೆಯಲ್ಲಿ ಇದ್ದಾಗಲೇ ಈ ದುರ್ಘಟನೆ ಸಂಭವಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ವಿಷ್ಣವಿನ ಮೃತದೇಹವನ್ನು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದೇಹ ರವಾನೆ ಮಾಡಲಾಗಿದೆ. ಇನ್ನು ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದು ಸಣ್ಣ ನಿರ್ಲಕ್ಷ್ಯ ಮುದ್ದಾದ ಮಗುವಿನ ಪ್ರಾಣಪಕ್ಷಿ ಹಾರಿಹೋಗಿದೆ. ನೋಡಿ ಒಂದು ಸಣ್ಣ ನಿರ್ಲಕ್ಷ್ಯದಿಂದ ಏನೆಲ್ಲಾ ದುರಂತ ಸಂಭವಿಸುತ್ತವೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆ. ಈ ಪ್ರಕರಣದಿಂದ ಪೋಷಕರು ಎಚ್ಚೆತ್ತುಕೊಳ್ಳಬೇಕು. ಮಕ್ಕಳ ಕೈಯಲ್ಲಿ ಯಾವ ವಸ್ತು ಕೊಡಬೇಕು. ಯಾವುದನ್ನು ಕೊಡಬಾರದು ಎನ್ನುವುದನ್ನು ಕಲಿಯಬೇಕು.

Published On - 10:46 pm, Thu, 11 April 24