ಚಿಕ್ಕಮಗಳೂರಿನಲ್ಲಿ 7ನೇ ತರಗತಿ ವಿದ್ಯಾರ್ಥಿನಿಗೆ ಹೃದಯಘಾತ; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 20, 2023 | 8:00 PM

ಆ ವಿದ್ಯಾರ್ಥಿನಿ ಇನ್ನೂ ಬಾಳಿ ಬದುಕಬೇಕಾದವಳು, ನೂರಾರು ಕನಸಿನ ಬುತ್ತಿ ಹೊತ್ತು ಶಾಲೆಗೆ ಹೊರಟವಳು ಸೇರಿದ್ದು ಮಾತ್ರ ಬಾರದ ಲೋಕಕ್ಕೆ!ಶಾಲೆಯ ಮುಂಭಾಗದಲ್ಲಿ ಆಸ್ಪತ್ರೆ ಇದ್ರೂ ಉಳಿಯಲಿಲ್ಲ. ಅಷ್ಟಕ್ಕೂ ಆ ಗ್ರಾಮದ ವಿದ್ಯಾರ್ಥಿನಿಗೆ ಏನಾಯ್ತು? ಇಲ್ಲಿದೆ

ಚಿಕ್ಕಮಗಳೂರಿನಲ್ಲಿ 7ನೇ ತರಗತಿ ವಿದ್ಯಾರ್ಥಿನಿಗೆ ಹೃದಯಘಾತ; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಮೃತ ವಿದ್ಯಾರ್ಥಿನಿ
Follow us on

ಚಿಕ್ಕಮಗಳೂರು, ಡಿ.20: ಜಿಲ್ಲೆಯ ಮೂಡಿಗೆರೆ(Mudigere) ತಾಲೂಕಿನ ಜೋಗಣ್ಣನಕೆರೆ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ಸಂಭವಿಸಿದೆ. ಈ ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿನಿ ಹೃದಯಘಾತ(Heart attack) ಕ್ಕೆ ಬಲಿಯಾಗಿದ್ದಾಳೆ. 7 ನೇ ತರಗತಿ ಓದುತ್ತಿರುವ ಸೃಷ್ಟಿ, ಎಂದಿನಂತೆ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದಾಗ ದಾರದಹಳ್ಳಿ ಗ್ರಾಮದ ಶಾಲೆಯ ಮುಂಭಾಗದಲ್ಲೇ ತಲೆ ತಿರುಗಿ ಕುಸಿದು ಬಿದ್ದಿದ್ದಳು. ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಹಪಾಠಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಲೆಯ ಮುಂಭಾಗದಲ್ಲೇ ಕಾಣುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೃಷ್ಟಿಯನ್ನು ಕರೆದೊಯ್ದಿದ್ದರು. ಆದರೆ, ಅಲ್ಲಿ ವೈದ್ಯರು ಇಲ್ಲದ ಹಿನ್ನಲೆ ತಡ ಮಾಡದೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲಾಗಲೇ ಸೃಷ್ಟಿ ಕೊನೆಯುಸಿರೆಳೆದಿದ್ದರು.

ಆಸ್ಪತ್ರೆಗೆ ಬಂದ ಪೋಷಕರಿಗೆ ಸಿಕ್ಕಿದ್ದು ಮಗಳ ಸಾವಿನ ಸುದ್ದಿ

ಇನ್ನು ಸೃಷ್ಟಿ ಹೃದಯಾಘಾತದಿಂದ ಸಾವನ್ನಪ್ಪಿರುವ ಮಾಹಿತಿಯನ್ನ ವೈದ್ಯರಿಂದ ಕೇಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅತೀ ಚಿಕ್ಕ ವಯಸ್ಸಿಗೆ ಹೃದಯಘಾತ ಹೇಗಾಯಿತು ಎನ್ನುವ ಪ್ರಶ್ನೆ ಪೋಷಕರಲ್ಲಿ ಮೂಡಿದೆ. ಜೋಗಣ್ಣನಕೆರೆ ಗ್ರಾಮದ ಅರ್ಜುನ್ ಹಾಗೂ ಸುಮಾ ದಂಪತಿಯ ನಾಲ್ವರು ಮಕ್ಕಳ ಪೈಕಿ ಸೃಷ್ಟಿ ಮೂರನೆಯವಳಾದ ಸೃಷ್ಟಿ 7ನೇ ತರಗತಿ ಓದುತ್ತಿದ್ದಳು. ಆದ್ರೆ, ಬರ ಸಿಡಿಲಿನಂತೆ ಎರಗಿದ ಪುಟ್ಟ ಬಾಲಕಿಯ ಸಾವಿನ ಸುದ್ದಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಕಣ್ಣೀರಿನ ಕಡಲಿನಲ್ಲಿ ತೇಲುವಂತೆ ಮಾಡಿದೆ. ಸೃಷ್ಟಿಗೆ ಆಗಾಗ ಸಣ್ಣಪುಟ್ಟ ತಲೆ ಸುತ್ತು ಬರುತ್ತಿತ್ತು. ಆದ್ರೆ, ಆರೋಗ್ಯವಾಗಿ ಇದ್ದಳು ಯಾವುದೇ ಸಮಸ್ಯೆ ಇರಲಿಲ್ಲವಂತೆ. ದುರಂತ ಅಂದರೆ, ಹೃದಯಘಾತದಿಂದ ವಿದ್ಯಾರ್ಥಿನಿ ಸಾವನ್ನಪ್ಪಿರುವುದು ಗ್ರಾಮಕ್ಕೆ ಗ್ರಾಮವೇ ಬರೆಸಿಡಿಲು ಬಡಿದಂತಾಗಿದೆ.

ಇದನ್ನೂ ಓದಿ:ಮನೆ ಮಗುವಿನಂತೆ ಸಾಕಿದ ನಾಯಿ ಹೃದಯಘಾತದಿಂದ ಸತ್ತಾಗ ಕಲಬುರಗಿಯ ಕುಟುಂಬ ದುಃಖಿಸಿದ್ದು ಅಷ್ಟಿಷ್ಟಲ್ಲ!

ಒಟ್ಟಾರೆ ಶಾಲೆಯ ಪಕ್ಕದಲ್ಲಿ ಆಸ್ಪತ್ರೆ ಇದ್ದರೂ ತುರ್ತು ಸಂಧರ್ಭಕ್ಕೆ ಆಗದ ಪ್ರಯೋಜನ, ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಪುಟ್ಟ ವಯಸ್ಸಿಗೆ ಹೃದಯಾಘಾತ ಎನ್ನುವ ವಿಷಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಯುವ ಸಮೂಹ ಹಾಗೂ ಸಂಬಂಧಪಟ್ಟ ಸರ್ಕಾರವು ಈ ಬಗ್ಗೆ ಕೂಲಂಕುಶ ಪ್ರಯೋಗ ನಡೆಸಬೇಕಿದೆ. ಬದುಕಿ ಬಾಳಬೇಕಾದ ಬಾಲಕಿ ಸಾವಿಗೀಡಾಗಿದ್ದು ಮಾತ್ರ ದುರಂತದ ಸಂಗತಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ