Karnataka Covid: ಪೋಷಕರಲ್ಲಿ ಕೊರೊನಾ ಆತಂಕ, ಖಾಸಗಿ ಶಾಲೆಗಳು ಹೈ ಅಲರ್ಟ್; ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ

ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದಂತೆ, ಕರ್ನಾಟಕದಲ್ಲೂ ಕೊರೋನಾ ಪ್ರಕರಣಗಳು ಏರಿಕೆಯಾಗಲು ಆರಂಭವಾಗಿದೆ. ಸದ್ಯ ರಾಜ್ಯದಲ್ಲಿ 92 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಖಾಸಗಿ ಶಾಲೆಗಳ ಒಕ್ಕೂಟವು ಹೈ ಅಲರ್ಟ್ ಆಗಿದೆ. ಈ ನಡುವೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಿದ್ದಾರೆ.

Karnataka Covid: ಪೋಷಕರಲ್ಲಿ ಕೊರೊನಾ ಆತಂಕ, ಖಾಸಗಿ ಶಾಲೆಗಳು ಹೈ ಅಲರ್ಟ್; ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ
ಪೋಷಕರಲ್ಲಿ ಕೊರೊನಾ ಆತಂಕ, ಖಾಸಗಿ ಶಾಲೆಗಳು ಹೈ ಅಲರ್ಟ್; ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ (ಸಾಂದರ್ಭಿಕ ಚಿತ್ರ)
Follow us
| Updated By: Rakesh Nayak Manchi

Updated on: Dec 21, 2023 | 9:27 AM

ಬೆಂಗಳೂರು, ಡಿ.21: ನೆರೆಯ ರಾಜ್ಯ ಕೇರಳ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ (Covid) ಪ್ರಕರಣಗಳು ಹೆಚ್ಚುತ್ತಿದ್ದು, ಕರ್ನಾಟಕದಲ್ಲಿ ಈವರೆಗೆ 92 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಭೆಯಲ್ಲಿ ಭಾಗಿಯಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥರು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರ ಜೊತೆ ಚರ್ಚೆ ನಡೆಸಲಿದ್ದಾರೆ.

ನೆರೆಯ ಕೇರಳ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗಡಿ ಜಿಲ್ಲೆಯಲ್ಲಿ ಟೆಸ್ಟ್ ಹೆಚ್ಚಳಕ್ಕೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಇಂದಿನ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, TAC ಸಮಿತಿ ಸದಸ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಇಂದಿನ ಸಭೆಯಲ್ಲಿ ಏನೆಲ್ಲ ಚರ್ಚೆ ಆಗಬಹುದು?

  • ನೆರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಮ್ಮ ರಾಜ್ಯದ ಗಡಿ ಜಿಲ್ಲೆಗಳ ಬಗ್ಗೆ ಚರ್ಚೆ
  • ಸೋಂಕು ಹೆಚ್ಚಾದಲ್ಲಿ ಆಸ್ಪತ್ರೆಗಳ ಬೇಡಿಕೆ ಹೆಚ್ಚಾಗಲಿದೆ ಇದಕ್ಕೆ ಬೇಕಾದ ಎಲ್ಲಾ ಔಷಧ, ಉಪಕರಣಗಳ ಖರೀದಿ ಸಂಬಂಧ ಚರ್ಚೆ
  • ಈ ಹಂತದಲ್ಲಿ ತುರ್ತಾಗಿ ಏನೆಲ್ಲ ಔಷಧ ಉಪಕರಣಗಳ ಖರೀದಿ ಮಾಡಬೇಕು ಅದಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಬಗ್ಗೆ ಚರ್ಚೆ
  • ICU ಬೆಡ್, ಆಕ್ಸಿಜನ್ ಬೆಡ್ ವ್ಯವಸ್ಥೆ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಹೇಗಿದೆ? ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವೆಲ್ಲ ಸೌಲಭ್ಯಗಳು ಸದ್ಯಕ್ಕೆ ಸಿಗಲಿದೆ
  • ತುರ್ತಾಗಿ ಈಗ ಏನೆಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯಗಳು ಬೇಕು ಎಂದು ಮಾಹಿತಿ ಪಡೆಯಲಿರುವ ಸಿಎಂ
  • ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ RTPCR ಗೆ ದರ ನಿಗದಿ ಬಗ್ಗೆಯೂ ಚರ್ಚೆ
  • ಈಗ ಕೋವಿಡ್ ಪಾಸಿಟಿವ್ ಬಂದವರಿಗೆ ಏನೆಲ್ಲ ಚಿಕಿತ್ಸಾ ಕ್ರಮಗಳನ್ನ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ

ಕೋವಿಡ್ ಟೆಸ್ಟ್ ಹೆಚ್ಚಿಸಲು ಮುಂದಾದ ಬಿಬಿಎಂಪಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಭೀತಿ ಹಿನ್ನೆಲೆ ಜನರ ತಪಾಸಣೆಯನ್ನು ಹೆಚ್ಚಿಸಲು ಬಿಬಿಎಂಪಿ ಮುಂದಾಗಿದೆ. ಪ್ರತಿನಿತ್ಯ 1500 ಕೊರೊನಾ ಸೋಂಕು ಪರೀಕ್ಷೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, 1050 ಆರ್‌ಟಿಪಿಸಿಆರ್‌ ಹಾಗೂ 450 ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲು ಪ್ಲಾನ್ ಮಾಡಲಾಗಿದೆ.

ಬಿಬಿಎಂಪಿಯ 144 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದ್ದು, ನಾಳೆ ಖಾಸಗಿ ಆಸ್ಪತ್ರೆಗಳೊಂದಿಗೆ ಪಾಲಿಕೆ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿನ ಹಾಸಿಗೆ ಸಂಖ್ಯೆ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಮಾಹಿತಿ ಸಂಗ್ರಹ ಮಾಡಲಾಗುತ್ತದೆ. ವೈರಸ್ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆಗೆ ಪ್ಲಾನ್ ಮಾಡಲಾಗುತ್ತದೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳಿಂದ Tv9ಗೆ ಮಾಹಿತಿ ಲಭ್ಯವಾಗಿದೆ.

ಪೋಷಕರಲ್ಲಿ ಆತಂಕ, ಖಾಸಗಿ ಶಾಲೆಗಳು ಹೈ ಅಲರ್ಟ್

ರಾಜ್ಯದಲ್ಲಿ JN.1 ವೈರಸ್ ಭೀತಿ ಹಿನ್ನೆಲೆ ಬೆಂಗಳೂರು ನಗರದ ಶಾಲೆಗಳ ಮಕ್ಕಳು ಹಾಗೂ ಪೋಷಕರಿಗೆ ಆತಂಕ ಶುರುವಾಗಿದೆ. ‌ರಾಜಧಾನಿಯಲ್ಲಿ‌ ಕೋವಿಡ್​ಗೆ‌ ಈಗಾಗಲೇ ಮೂವರು ಸೋಂಕಿತರು ಸಾವನ್ನಪ್ಪಿದೆ. ಹೀಗಾಗಿ ಮಕ್ಕಳಿಗೆ ಕೊರೋನಾ ವಕ್ಕರಿಸಿದಂತೆ ನೋಡಿಕೊಳ್ಳಲು ಖಾಸಗಿ ಶಾಲೆಗಳಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ.

ಈ ಹಿಂದಿನ ಕೊರೊನಾ ಅಲೆಯಲ್ಲಿ ಆರ್ಥಿಕ ಹೊಡೆತ ತಿಂದಿದ್ದ ಖಾಸಗಿ ಶಾಲೆಗಳಿಗೆ ಇದೀಗ ಮತ್ತೊಮ್ಮೆ ಭೀತಿ ಎದುರಾಗಿದೆ. ಅಲ್ಲದೆ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಚಿಂತನೆ ನಡೆಸಲಾಗುತ್ತಿದ್ದು, ಕೆಲವು ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪೋಷಕರಿಗೆ ಶಾಲೆ ಆಡಳಿತ ಮಂಡಳಿಗಳು ಸಂದೇಶ ರವಾನಿಸಿದ್ದಾರೆ.

JN.1 ವೈರಸ್ ರಾಕೆಟ್ ವೇಗದಲ್ಲಿ ಹರಡುವ ಹಿನ್ನೆಲೆ ಮಕ್ಕಳ ಬಗ್ಗೆ ಜಾಗೃತಿಗೆ ಕೆಲ ಖಾಸಗಿ ಶಾಲೆಗಳು ನಿರ್ಧಾರ ಮಾಡಿದ್ದು, ಮಕ್ಕಳಿಗೆ ‌ಮಾಸ್ಕ್ ಹಾಕಿ ಕಳುಹಿಸಿ, ತಮ್ಮ ಮಕ್ಕಳಿಗೆ ಜ್ವರ, ಕೆಮ್ಮು, ಶೀತ ಇದ್ದರೆ ಶಾಲೆಗೆ ಕಳುಹಿಸದಂತೆ ಸೂಚನೆ ನೀಡಿದ್ದಾರೆ.

ಖಾಸಗಿ ಶಾಲಾ ಒಕ್ಕೂಟ ಹೈ ಅಲರ್ಟ್

ರೂಪಾಂತರಿಯ ಉಪಟಳ ಹಿನ್ನೆಲೆ ಕ್ಯಾಮ್ಸ್ ಶಾಲಾ ಒಕ್ಕೂಟ ಹೈ ಅಲರ್ಟ್ ಆಗಿದ್ದು, ತನ್ನ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಮಾರ್ಗಸೂಚಿ ಪಾಲನೆ ಮಾಡಲು ಸೂಚನೆ ನೀಡಿದೆ. ಹಾಗಾದರೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೊಟ್ಟ ಸೂಚನೆ ಏನು? ಇಲ್ಲಿದೆ ಮಾಹಿತಿ.

  • JN.1 ಬಗ್ಗೆ ಕೆಲ ಸುಳ್ಳು ಸುದ್ದಿಯನ್ನು ನಂಬಬಾರದು, ಮಕ್ಕಳಲ್ಲಿ ಗಾಬರಿ ಹುಟ್ಟಿಸಬಾರದು
  • ಶಾಲೆಗೆ ಬರುವ ಮಕ್ಕಳ ದೇಹದ ಉಷ್ಣಾಂಶ ಪರಿಷಲನೆ ಮಾಡಬೇಕು
  • ಮಕ್ಕಳು ಶಾಲೆ ಎಂಟ್ರಿ ಆಗುವಾಗ ಸ್ಯಾನಿಟೈಸರ್ ಹಾಕಬೇಕು
  • ಶಾಲಾ ಆವರಣ ಸ್ಯಾನಿಟೈಸ್ ಮಾಡ್ತಾ ಇರಬೇಕು, ಸ್ವಚ್ಛವಾಗಿ ಇಡಬೇಕು
  • ಆರೋಗ್ಯ ಸಮಸ್ಯೆ ಇರುವ ಮಕ್ಕಳು ಮಾಸ್ಕ್ ಧರಿಸುವಂತೆ ಸೂಚನೆ
  • ಶಾಲೆಗೆ ಬಂದ ಮೇಲೆ ಮಕ್ಕಳು ಹುಷಾರು ತಪ್ಪಿದರೆ ತಕ್ಷಣ ಅಂತಹ ಮಕ್ಕಳ ಐಸೋಲೇಟ್ ಮಾಡಬೇಕು, ಪೋಷಕರ ಗಮನಕ್ಕೆ ತರಬೇಕು
  • ಅನಾರೋಗ್ಯದ ಮಕ್ಕಳಟೆಸ್ಟ್ ಅಥವಾ ಕ್ಲಾಸ್ ಮಿಸ್ ಆಗುತ್ತೆ ಅಂತ ಪೋಷಕರು ಮಕ್ಕಳ ಶಾಲೆಗೆ ಕಳುಹಿಸದ ಹಾಗೇ ಎಚ್ಚರ ವಹಿಸಬೇಕು
  • ರಜಾ ದಿನಗಳಲ್ಲಿ ಮಕ್ಕಳನ್ನು ಜನಸಂಧಣಿ ಜಾಗಕ್ಕೆ ಕರೆದುಕೊಂಡು ಹೋಗುವುದನ್ನ ಪೋಷಕರು ನಿಲ್ಲಿಸಬೇಕು
  • ಶಾಲಾ ಪ್ರವಾಸ ಕರೆದುಕೊಂಡು ಹೋದರೆ ಅಗತ್ಯ ಮುಂಜಾಗ್ರತೆ ವಹಿಸಲೇಬೇಕು, ಆಕ್ಸಿಜನ್ ಕಿಟ್ ಸಮೇತ ಹೋಗಬೇಕು. ಬೇರೆ ರಾಜ್ಯ ಹಾಗೂ ದೇಶಕ್ಕೆ ಹೋಗಿ ಬಂದ ಮಕ್ಕಳ ಮೇಲೆ ಹದ್ದಿನ ಕಣ್ಣಿಡಬೇಕು

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್

ಹೊರ ರಾಜ್ಯದ ಟ್ರಾವೆಲ್ ಹಿಸ್ಟರಿ ಇಲ್ಲದ ನಾಲ್ವರಿಗೆ ಕೊರೋನಾ ಪಾಸಿಟಿವ್ ಕಂಡುಬಂದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಜಿಲ್ಲೆಯ ಇರುವ 103 ಸರ್ಕಾರಿ ಆಸ್ಪತ್ರೆ ಹಾಗೂ 6 ಖಾಸಗಿ ಆಸ್ಪತ್ರೆಗಳಿಗೆ ಅಲರ್ಟ್ ಆಗಿರುವಂತೆ ಸೂಚನೆ ನೀಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 490 ಬೆಡ್, ಖಾಸಗಿಯಲ್ಲಿ 202 ಬೆಡ್, 87 ವೆಂಟಿಲೇಟರ್, ಜಂಬೋ ಆಕ್ಸಿಜನ್ ಸಿಲಿಂಡರ್ 907, 10 ಲೀಟರ್ ಆಕ್ಸಿಜನ್ ಸಿಲಿಂಡರ್, 260 ಸ್ಟಾಕ್ ಇದ್ದು, ಒಟ್ಟು 21 ಆಂಬುಲೆನ್ಸ್​ಗಳು ಸನ್ನದ್ಧವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ