ಉಡುಪಿ: ಕೂಡು ಕುಟುಂಬ ಸೇರಿದ ಇಬ್ಬರು ಅನಾಥ ಯುವತಿಯರು, ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಡಿಸಿ, ಎಸ್ಪಿ, ನ್ಯಾಯಾಧೀಶರು
ಕೂಡಿ ಬಂದ ಕಂಕಣ ಭಾಗ್ಯ - ಉಡುಪಿಯಲ್ಲಿ ನಿನ್ನೆ ಬುಧವಾರ ನಡೆದ ಅಪರೂಪದ ಮದುವೆಗೆ ಡಿಸಿ, ಎಸ್ಪಿ, ನ್ಯಾಯಾಧೀಶರು ಸಾಕ್ಷಿಯಾದರು. ಸರ್ಕಾರದ 20 ಸಾವಿರ ರೂ ಅನುದಾನ ಹಾಗೂ ದಾನಿಗಳ ಸಹಕಾರದಿಂದ ಮದುವೆ ಸಂಭ್ರಮ ಮನೆ ಮಾಡಿತ್ತು.
ಖುಣಾನುಬಂಧ ರೂಪೇಣ ಪಶು, ಪತ್ನಿ, ಸುತಾಲಯ ಅನ್ನೋ ಮಾತಿದೆ. ಋಣವಿಲ್ಲದೆ ಯಾವ ಬಂಧಗಳೂ ಬೆಸೆಯಲಾರವು. ಎಲ್ಲೋ ಕೂಡು ಕುಟುಂಬದಲ್ಲಿ ಬೆಳೆದ ಯುವಕ ಇನ್ನೆಲ್ಲೋ ಅನಾಥಳಾಗಿ ನಾಲ್ಕು ಗೋಡೆಗಳ ನಡುವೆ ಬೆಳೆದ ಯುವತಿ. ಈಗ ಸತಿ-ಪತಿಗಳಾಗಿ ಒಂದಾಗಿದ್ದಾರೆ. ಈ ಅಪರೂಪದ ಕಂಕಣ ಭಾಗ್ಯದ ಆ ಸುಂದರ ಕ್ಷಣ ಝಲಕ್ ಇಲ್ಲಿದೆ.
ಮನುಷ್ಯರು ಎಷ್ಟೇ ದೂರವಿದ್ದರು ಕೂಡ, ಮನಸ್ಸುಗಳು ಹತ್ತಿರವಾಗಿ ಬದುಕಲು ಋಣ ಇರಬೇಕು ಎಲ್ಲೋ ಇದ್ದ ಇಬ್ಬರು ಒಂದಾಗಲು ಕಾರಣವಂತೂ ಇದ್ದೆ ಇರುತ್ತೆ. ಹೀಗೆ ಎಲ್ಲೋ ಕೂಡು ಕುಟುಂಬದಲ್ಲಿ ಬೆಳೆದ ಯುವಕರು ಈಗ ಅನಾಥ ಯುವತಿಯರಿಗೆ ಬಾಳನ್ನ ನೀಡಿ ಹಸನಾಗಿಸಿದ್ದಾರೆ. ಹೌದು ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿ ವಧು ಸಿಗದ ಹಿನ್ನೆಲೆಯಲ್ಲಿ ಅನಾಥ ಹೆಣ್ಣು ಮಕ್ಕಳ ಪಾಲನೆ ಮಾಡುವ ಸ್ಟೇಟ್ ಹೋಂ ಸಂಪರ್ಕಿಸಿ ವಧುವನ್ನ ಅರಸಿ ಕೈಹಿಡಿದಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಉಡುಪಿ ನಗರದ ನಿಟ್ಟೂರು ಭಾಗದಲ್ಲಿರುವ ರಾಜ್ಯ ಮಹಿಳಾ ನಿಲಯ.
ಹೌದು, ರಾಜ್ಯ ಮಹಿಳಾ ನಿಲಯ ನಿನ್ನೆ ಬುಧವಾರ ಅಕ್ಷರಶಃ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಹಿಂದಿನ ದಿನ ಮಂಗಳವಾರ ಮೆಹೆಂದಿ, ಅರಿಶಿನ ಶಾಸ್ತ್ರ ನಡೆದರೆ ಬುಧವಾರ ಮದುವೆಯ ಧಾರ್ಮಿಕ ವಿಧಿ ವಿಧಾನಗಳು ನಡೆದವು. ೧೧:೨೦ ರ ಶುಭ ಮುಹೂರ್ತದಲ್ಲಿ ಶೀಲಾ ಹಾಗೂ ಕುಮಾರಿ ಈ ಇಬ್ಬರು ಅನಾಥ ಯುವತಿಯರ ಕಂಕಣ ಭಾಗ್ಯ ಕೂಡಿ ಬಂದು ಕೂಡು ಕುಟುಂಬವನ್ನ ಸೇರಿದ್ದಾರೆ.
ಅರ್ಚಕ ವೃತ್ತಿ ಮಾಡುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಳಂಜೆ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಶ್ರೀಧರ ಭಟ್ಟ ವಧು ಕುಮಾರಿಯ ಕೈಹಿಡಿದರೆ, ಮೊಳಹಳ್ಳಿಯ ಕೃಷಿಕ ಗಣೇಶ ಶಾಸ್ತ್ರಿ ಶೀಲಾ ಎಂಬ ಯುವತಿಯನ್ನ ವಿವಾಹ ಮಾಡಿಕೊಂಡಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಡಿಸಿ, ಎಸ್ಪಿ, ನ್ಯಾಯಾಧೀಶರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಾಕ್ಷಿಯಾದರು. ವರನ ಕುಟುಂಬಸ್ಥರು, ದಾನಿಗಳು ಕೂಡ ವಧು ವರರನ್ನ ಹರಸಿ ಉಡುಗೊರೆ ನೀಡುವ ಮೂಲಕ ಹಾರೈಸಿದ್ರು. ಸರ್ಕಾರದ ೨೦ ಸಾವಿರ ರೂ ಅನುದಾನ ಹಾಗೂ ದಾನಿಗಳ ಸಹಕಾರದಿಂದ ಮದುವೆ ಸಂಭ್ರಮ ಮನೆ ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 am, Thu, 21 December 23