ಸಿಡಿಲು ಬಡಿದ ಮರದ ಬುಡದಲ್ಲಿದ್ದ ಹುತ್ತದ ಬಳಿ ಇತ್ತಾ ನಿಗೂಢ ಸಂಪತ್ತು? ದಟ್ಟಕಾನನದ ಮಧ್ಯೆ ಆ 15 ಜನ ಮಾಡಿದ್ದಾದರೂ ಏನು?

| Updated By: ಸಾಧು ಶ್ರೀನಾಥ್​

Updated on: Jun 24, 2023 | 7:36 AM

ಸಿಡಿಲು ಬಡಿದ ಮರ ಹಾಗೂ ಹುತ್ತ ಇದ್ದ ಜಾಗಕ್ಕೆ ದಿಗ್ಬಂಧನ ಹಾಕಿದ್ದಾರೆ. ಭರ್ಜರಿ ಗುಂಡಿಯನ್ನೂ ತೋಡಿದ್ದಾರೆ. ಎಲ್ಲಾ ನಿಧಿ ಆಸೆಗಾಗಿ. ಆದ್ರೆ, ಇನ್ನೇನು ಪಾಪ ನಿಧಿ ಸಿಗ್ತಿತ್ತೋ ಏನೋ... ಆದರೆ ಅಷ್ಟರಲ್ಲಿ...

ಸಿಡಿಲು ಬಡಿದ ಮರದ ಬುಡದಲ್ಲಿದ್ದ ಹುತ್ತದ ಬಳಿ ಇತ್ತಾ ನಿಗೂಢ ಸಂಪತ್ತು? ದಟ್ಟಕಾನನದ ಮಧ್ಯೆ ಆ 15 ಜನ ಮಾಡಿದ್ದಾದರೂ ಏನು?
ಸಿಡಿಲು ಬಡಿದ ಮರದ ಬುಡದಲ್ಲಿದ್ದ ಹುತ್ತದ ಬಳಿ ಇತ್ತಾ ನಿಗೂಢ ಸಂಪತ್ತು?
Follow us on

ಸಿಡಿಲು ಬಡಿದು ಒಣಗಿ ನಿಂತ ಮರ. 10 ಅಡಿ ಎತ್ತರದ ಹುತ್ತ. ಹುತ್ತದ ಬುಡದಲ್ಲಿದ್ದ ಅತ್ತಿ ಮರಕ್ಕೆ ದಿಗ್ಭಂಧ ಮಾಡಿ ದೇವರ ನಿರ್ಮಾಣ. ಸಿಡಿಲು ಬಡಿದ ಮರ ಹಾಗು 15 ಅಡಿ ಅಗಲದ ಪ್ರದೇಶಕ್ಕೆ ಮೂರು ಬಣ್ಣದ ದಾರ ಕಟ್ಟಿ ಪೂಜೆಪುನಸ್ಕಾರ. ಅದೂ ಸಾಲದು ಅಂತಾ ಜೀವಂತ ಕೋಳಿ ಬಲಿ, ಎಳೆ ಕುಂಬಳಕಾಯಿ, ನಿಂಬೆಹಣ್ಣು, ಮೊಟ್ಟೆ, ಅರಿಶಿನ, ಕುಂಕುಮ… ಹೋಗೆ ಹೇಳೋಕೆ ಒಂದೋ-ಎರಡೋ. ಅಮಾವಾಸ್ಯೆ ಹುಣ್ಣಿಮೆಯ ಹಿಂದೆಮುಂದೆ ಎರಡು ತಿಂಗಳಿಂದ ಆ 15 ಜನ ಮಾಡಿದ್ದಾದ್ರು ಏನ್ ಗೊತ್ತಾ? ಚಿಕ್ಕಮಗಳೂರು (chikmagalur forest) ಸಮೀಪದ ಕೆಸರಿಕೆ (ಮುಳ್ಳಾರೆ) ಗ್ರಾಮದ ದಟ್ಟಕಾನನದ ಮಧ್ಯದಲ್ಲಿ 15 ಅಡಿ ಅಗಲ, 35 ಅಡಿ ಆಳದ ಗುಂಡಿ ತೋಡಿ, ಮಾಡಿದ್ದಾದ್ರು ಏನು, ಏಕೆ ಗೊತ್ತಾ… ಈ ಸ್ಟೋರಿ ನೋಡಿ. ಇಲ್ನೋಡಿ… ಸಿಡಿಲು ಬಡಿದು ನಿಂತ ಮರ. ಈ ಕಡೆ ನೋಡಿ… 10 ಅಡಿ ಎತ್ತರದ ಹುತ್ತದ ಮಣ್ಣು. ಅಲ್ಲೊಮ್ಮೆ ನೋಡಿ… ಕಾಡಿನ ಮಧ್ಯೆ ವಾಮಾಚಾರದ ಪೂಜೆ. ದಿಗ್ಬಂಧನ. ವಾಮಾಚಾರದ ಸಾಮಗ್ರಿಗಳು. ಜೊತೆಗೆ, ಸಿರೆಂಜು, ಎಣ್ಣೆ, ಮಿಕ್ಸಿಂಗ್‍ಗೆ ನೀರು. ಆಲ್ ಮೋಸ್ಟ್ ಈಗಾಗಲೇ ನಿಮ್ಗೆ ಅರ್ಥ ಆಗಿದೆ ಅನ್ನಿಸುತ್ತದೆ. ಎಕ್ಸಾಕ್ಟ್​​​​ಲೀ… ಇದು ನಿಧಿ  ಆಸೆಗಾಗಿ (treasure) ಮಾಡಿರುವ ವಾಮಾಚಾರದ ಪೂಜೆ (superstition).

ಆದರೆ ಪೂಜೆಯನ್ನು ಭಯಂಕರವಾಗಿಯೇ ಮಾಡಿದ್ದಾರೆ. ದಟ್ಟಕಾನನದ ಮಧ್ಯೆ ಪೂಜೆ ಮಾಡ್ತಾರೆ ಅಂದ್ರೆ ಕಾರಣ ದೊಡ್ಡದೇ ಇರಬೇಕಲ್ವಾ? ಎಸ್… ಇವ್ರು ಯಾರೋ ಭಯಂಕರ ಖತರ್ನಾಕ್ ಕೇಡಿಗಳೇ ಇರಬೇಕು. ಅದಕ್ಕೆ ಸರಿಯಾಗಿ ಸಿಡಿಲು ಬಡಿದ ಮರ, ಹುತ್ತವನ್ನೇ ಹುಡುಕಿದ್ದಾರೆ. ಯಾಕಂದ್ರೆ ಸಿಡಿಲು ಬಡಿದ ಮರದ ಪಕ್ಕದಲ್ಲಿ ಹುತ್ತ ಇದ್ದರೆ ಅದರ ಕೆಳಗೆ ನಿಧಿ ಇರುತ್ತೆ ಅನ್ನೋದು ಕೆಲವರ ನಂಬಿಕೆ.

ಅದಕ್ಕಾಗಿ ದಟ್ಟಕಾನನದ ಮಧ್ಯೆಯ ಈ ಜಾಗವನ್ನೇ ಆಯ್ದುಕೊಂಡಿದ್ದಾರೆ. ಸಿಡಿಲು ಬಡಿದ ಮರ ಹಾಗೂ ಹುತ್ತ ಇದ್ದ ಜಾಗಕ್ಕೆ ದಿಗ್ಬಂಧನ ಹಾಕಿದ್ದಾರೆ. 15 ಅಡಿ ಅಗಲ, 35 ಅಡಿ ಆಳದ ಭರ್ಜರಿ ಗುಂಡಿ ತೋಡಿದ್ದಾರೆ. ಎಲ್ಲಾ ನಿಧಿ ಆಸೆಗಾಗಿ. ಆದ್ರೆ, ಇನ್ನೇನು ಪಾಪ ನಿಧಿ ಸಿಗ್ತಿತ್ತೋ ಏನೋ… ಅಷ್ಟರಲ್ಲಿ ಸ್ಥಳೀಯರಿಗೆ ಅನುಮಾನ ಬಂದು ದಾಳಿ ಮಾಡುತ್ತಿದ್ದಂತೆ ಮಧ್ಯರಾತ್ರಿ 12 ಗಂಟೆಯ ಕಾಡಿನ ಕಗ್ಗತ್ತಲಲ್ಲಿ ಎದ್ವೋ ಬಿದ್ವೋ ಅಂತ ಆ ಖತರ್ನಾಕ್​ ಗ್ಯಾಂಗ್​​ ಓಡಿಹೋಗಿದೆ.

ನಿಧಿಗಾಗಿ ಇವ್ರು 15 ಅಡಿ ಅಗಲ, 35 ಅಡಿ ಆಳದ ಗುಂಡಿಯನ್ನ ಒಂದೇ ರಾತ್ರಿಗೆ ತೆಗೆದಿಲ್ಲ. ಈ ಕೃತ್ಯಕ್ಕೆ ಇವರು ತೆಗೆದುಕೊಂಡ ಸಮಯ ಎರಡು ತಿಂಗಳು. ಎರಡು ತಿಂಗಳಿಂದ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ಹಿಂದೆ-ಮುಂದೆ ಮಾತ್ರ ಗುಂಡಿ ತೆಗೆದು, ನಿಧಿ ಹುಡುಕಿದ್ದಾರೆ. ಯಾರಾದ್ರು ನೋಡುತ್ತಾರೆ ಅಂತ ರಾತ್ರಿ 10ಕ್ಕೆ ಕೆಲಸ ಸ್ಟಾರ್ಟ್ ಮಾಡಿ ಬೆಳಗ್ಗೆ 5ಕ್ಕೆ ಜಾಗ ಖಾಲಿ ಮಾಡ್ತಿದ್ರು.

ಮಣ್ಣನ್ನ ತೆಗೆದು ಮೇಲೆ ಹಾಕೋಕೆ ರಾಟೆ ಮಾಡಿಕೊಂಡಿದ್ದರು. ನೆಲ ಅಗೆದು ಸುಸ್ತಾದಾಗ ಎಣ್ಣೆ ಪಾರ್ಟಿ ಕೂಡ ಮಾಡ್ತಿದ್ರು. ಸಿರೇಂಜ್, ನೀಡಲ್​​ ಎಲ್ಲಾ ಅಲ್ಲಿ ಬಿದ್ದರುವುದನ್ನು ನೋಡಿದ್ರೆ ಡ್ರಗ್ಸ್ ತೆಗೆದುಕೊಳ್ತಿದ್ರಾ ಎಂಬ ಅನುಮಾನವೂ ಮೂಡಿದೆ. ಅನುಮಾನಗೊಂಡ ಸ್ಥಳೀಯರು ರಾತ್ರಿಯಾಗುವುದನ್ನೇ ಕಾದು ರಾತ್ರಿ ಸಮಯದಲ್ಲಿ ಲೈಟ್ ಬರುವ ದಿಕ್ಕಿನತ್ತಲೇ ಬಂದಿದ್ದಾರೆ. ಊದುಬತ್ತಿ ವಾಸನೆಯೂ ಅಲ್ಲಿಂದ ಬಂದಿದೆ. ನೆಲ ಅಗೆಯುವ ಶಬ್ದ ಕೇಳಿದೆ. ಹತ್ತಿರ ಬಂದು ಯಾರು ಎನ್ನುತ್ತಿದ್ದಂತೆ ಎಲ್ಲರೂ ಎಸ್ಕೇಪ್ ಆಗಿಬಿಟ್ಟಿದ್ದಾರೆ. ಈ ಗುಂಡಿ, ಆ ಪೂಜೆ, ಅಲ್ಲಿದ್ದ ವಸ್ತುಗಳನ್ನ ಕಂಡು ಸ್ಥಳಿಯರೇ ಬೆಚ್ಚಿಬಿದ್ದಿದ್ದಾರೆ.

ಒಟ್ಟಾರೆ, ಮಲೆನಾಡಲ್ಲಿ ನಿಧಿಗಾಗಿ ಗುಂಡಿ ತೋಡಿದ್ದಾರೆ. ದೇವಸ್ಥಾನ ಅಗೆದಿದ್ದಾರೆ. ಪಾಳುಬಿದ್ದ ದೇವಾಲಯದಲ್ಲಿ ದೇವರನ್ನೂ ಬಿಟ್ಟಿಲ್ಲ, ಎತ್ತಿ ಹೊರಹಾಕಿದ್ದಾರೆ. ಆದ್ರೆ, ಈ ರೀತಿ ಹುಚ್ಚಾಪಟ್ಟೆ ಕಾಡಿನಲ್ಲಿ ಹೀಗೆಲ್ಲಾ ಗುಂಡಿ ತೋಡಿ, ನಿಧಿ ಶೋಧ ನಡೆಸಿರುವುದು ತುಸು ಸೋಜಿಗವೇ. ಆದ್ರೆ, ಯಾರೋ ಭಯಂಕರ ಐನಾತಿ ಆಸಾಮಿಗಳೇ ಈ ರೀತಿಯ ನಿಧಿ ಹಿಂದೆ ಬಿದ್ದಿದ್ದಾರೆ. ಒಂದೇ ಜಾಗದಲ್ಲಿ ಅಷ್ಟು ಆತ್ಮವಿಶ್ವಾಸದಲ್ಲಿ ಹೀಗೆ ಗುಂಡಿ ತೋಡಿದ್ದಾರೆ ಅಂದರೆ ಅಲ್ಲಿ ಏನೋ ಇದ್ದೇಇದೆ ಅಂತಾ ಈಗಲೂ ಅನ್ನಿಸುತ್ತೆ. ಅದಕ್ಕೆ ಹಾಗೇ ಒಂದೇ ಜಾಗದಲ್ಲಿ ಗುಂಡಿ ತೋಡಿದ್ದಾರೆ. ಆದ್ರೆ, ಸ್ಥಳೀಯರು ಆ ಮೈಗಳ್ಳರ ಆಸೆಗೆ ತಣ್ಣೀರೆರಚಿದ್ದಾರೆ ಎಂದು ಕಾರ್ಯಾಚರಣೆ ನಡೆಸಿದ ಸ್ಥಳೀಯರೊಬ್ಬರು ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:15 am, Sat, 24 June 23