ಎಸಿಬಿ ಬಲೆಗೆ ಶೃಂಗೇರಿ ತಹಶೀಲ್ದಾರ್, ಗಾಂಜಾ ಮಾರುತ್ತಿದ್ದವರ ಬಂಧನ, ಶಾಸಕ ಬೋಪಯ್ಯಗೆ ಬ್ಲಾಕ್ಮೇಲ್
ಈ ಹಿಂದೆಯೂ ಅಂಬುಜಾ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಮನೆ ಹಕ್ಕು ಪತ್ರ, ಅಕ್ರಮ ಖಾತೆ ಮಾಡಿಕೊಡಲು ಲಂಚಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರು.
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಹಶೀಲ್ದಾರ್ ಅಂಬುಜಾ ಗುರುವಾರ ಎಸಿಬಿ (Anti Corruption Bureau – ACB) ಬಲೆಗೆ ಬಿದ್ದರು. ಈ ಹಿಂದೆಯೂ ಅಂಬುಜಾ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಮನೆ ಹಕ್ಕು ಪತ್ರ, ಅಕ್ರಮ ಖಾತೆ ಮಾಡಿಕೊಡಲು ಲಂಚಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರು. ಲಂಚ ಪಡೆದು ಅಕ್ರಮವಾಗಿ ನೂರಾರು ಜನರಿಗೆ ಖಾತೆ ಮತ್ತು ಹಕ್ಕುಪತ್ರ ಮಾಡಿಕೊಟ್ಟಿರುವ ಆರೋಪ ಅಂಬುಜಾ ಅವರ ವಿರುದ್ಧ ಮೊದಲಿನಿಂದಲೂ ಕೇಳಿಬಂದಿತ್ತು.
ಗಾಂಜಾ ಮಾರುತ್ತಿದ್ದವರ ಬಂಧನ ನೆಲಮಂಗಲ: ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರುತ್ತಿದ್ದ ಮಹೇಶ್ವರನ್, ರಾಜನ್ ಅವರನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹ 50 ಸಾವಿರ ಮೌಲ್ಯದ 1.2 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇವರು ಸ್ಕೂಟಿ ಡಿಕ್ಕಿಯಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು ಎಂದು ದೂರಲಾಗಿದೆ.
ಅಪರಿಚಿತನಿಂದ ಬೋಪಯ್ಯಗೆ ಬ್ಲ್ಯಾಕ್ಮೇಲ್ ಮಡಿಕೇರಿ: ಅಪರಿಚಿತನಿಂದ ಬ್ಲ್ಯಾಕ್ಮೇಲ್ ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಡಿಕೇರಿ ಠಾಣೆಗೆ ದೂರು ನೀಡಿದ್ದಾರೆ. ಚೆನ್ನೈ ಎಸಿಬಿ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದ ವ್ಯಕ್ತಿಯು, ನಿಮ್ಮ ವಿರುದ್ಧ ಹಲವು ದೂರುಗಳಿವೆ. ದಾಳಿ ತಡೆಯಲು ₹ 1 ಕೋಟಿ ಲಂಚ ಕೊಡಬೇಕು ಎಂದು ಬ್ಲ್ಯಾಕ್ಮೇಲ್ ಮಾಡಿದ್ದ ಎಂದು ದೂರಲಾಗಿದೆ.
ಕಬ್ಬಿನ ಹೊಲಕ್ಕೆ ಬೆಂಕಿ ಧಾರವಾಡ: ಕಲಘಟಗಿ ಬಳಿ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಭಸ್ಮವಾಗಿದೆ. ಅಕ್ಕಪಕ್ಕದ ಹೊಲಗಳಿಗೂ ಬೆಂಕಿ ವ್ಯಾಪಿಸಿದೆ. ಪೊಲೀಸರು ಸಕಾಲದಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಇದನ್ನೂ ಓದಿ: Crime News: ಬಾಡಿಗೆ ಮನೆ ನೋಡುವ ನೆಪದಲ್ಲಿ ಮಚ್ಚು ತೋರಿಸಿ ಮಹಿಳೆಯ ಕತ್ತಿನಲ್ಲಿದ್ದ ಸರಗಳವು ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಕಳವಾದ ಕಾರು ಫಾಸ್ಟ್ಟ್ಯಾಗ್ ಸಹಾಯದಿಂದ ಹುಬ್ಬಳ್ಳಿಯಲ್ಲಿ ಪತ್ತೆ!