ಚಿಕ್ಕಮಗಳೂರು, ಆಗಸ್ಟ್ 16: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಮುಂದಿನ ವರ್ಷದಿಂದ ರದ್ದುಗೊಳಿಸುವುದಾಗಿ ಮಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಮಾಜಿ ಸಚಿವ ಸಿಟಿ ರವಿ (CT Ravi) ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ರಾಜ್ಯ ಸರ್ಕಾರದ ನಡೆಯ ಬಗ್ಗೆ ಟೀಕ ಪ್ರಹಾರ ಮುಂದುವರಿಸಿರುವ ಅವರು, ಯಾವ ಕಾರಣಕ್ಕಾಗಿ ಎನ್ಇಪಿ ತಿರಸ್ಕರಿಸುತ್ತಿದ್ದೀರಿ ಎಂದು ಸ್ಪಷ್ಟಪಡಿಸಿ. ಸಮಗ್ರ ಶಿಕ್ಷಣ ನೀತಿಯನ್ನು ನೀವು ವಿರೋಧಿಸುತ್ತಿರಾ ಎಂದು ಪ್ರಶ್ನಿಸಿದ್ದಾರೆ. ಎನ್ಇಪಿ ರದ್ದತಿಯ ನಿರ್ಧಾರವನ್ನು ಗಮನಿಸಿದರೆ, ಸರ್ಕಾರಕ್ಕೆ ಕಸ್ತೂರಿ ರಂಗನ್ ಅವರ ಬಗ್ಗೆ ವಿರೋಧವಿದೆಯೋ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧವೋ ಎಂಬುದು ತಿಳಿಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಪ್ರಸ್ತುತ ನಡೆಯನ್ನು ಗಮನಿಸುತ್ತಿದ್ದರೆ ಗುಲಾಮಿ ಮನಸ್ಥಿತಿಯಿಂದ ಹೊರಬರಲು ಸಿದ್ಧವಿಲ್ಲದಂತೆ ಕಾಣುತ್ತದೆ. ಮೆಕಾಲೆ ಹಾಗೂ ಕಾರ್ಲ್ ಮಾರ್ಕ್ಸ್ ಪ್ರಭಾವವನ್ನೇ ಮುನ್ನಡಿಸಿಕೊಂಡು ಹೊಗುವಂತೆ ತೋರುತ್ತಿದೆ ಎಂದು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಸಿಟಿ ರವಿ ಕಿಡಿ ಕಾರಿದರು. ನಿಮ್ಮ ಈ ನಡೆ ರಾಷ್ಟ್ರದ ಹಿತಕ್ಕೆ ಘಾತಕವಾಗುವ ಸಾಧ್ಯತೆಯಿದೆ ಎಂದು ಟೀಕಿಸಿದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜಕೀಯ ಗುರು ಎಂದು ಬಿಜೆಪಿ ನಾಯಕ ಎಸ್ಟಿ ಸೋಮಶೇಖರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಯಿಸಿದ ಸಿಟಿ ರವಿ, ನನಗೆ ಗೊತ್ತಿದ್ದಂತೆ ಕಾಂಗ್ರೆಸ್ಗೆ ಯಾರೂ ವಾಪಸ್ ಆಗುವವರಿಲ್ಲ. ಆದರೆ ಒಮ್ಮೆ ಅನುಮಾನ ಬಂದರೆ ಎಲ್ಲರನ್ನೂ ಅಪನಂಬಿಕೆಯಿಂದ ನೋಡಬೇಕಾಗುತ್ತದೆ. ಡಿಕೆ ಶಿವಕುಮಾರ್ ಇವರ ಗುರುವಾಗಿರಬಹುದು ಅದರಲ್ಲೇನು ತಪ್ಪಿಲ್ಲ. ಯಾವುದೇ ಸಂಪರ್ಕವಿಲ್ಲದೆ ಅವರು ಹೀಗೆ ಹೇಳಲು ಸಾಧ್ಯವಿಲ್ಲ, ಒಂದೋ ಇವರಿಗೆ ಮಾಹಿತಿ ಇರಬೇಕು ಅಥವಾ ಯಾರೋ ಸಂಪರ್ಕದಲ್ಲಿರಬಹುದು. ಇವರ ನಡೆಯನ್ನು ಗಮನಿಸಿದರೆ ಇವರು ಗುರುವಿನ ಮಾತನ್ನು ಮೀರಿದಂತೆ ಅಥವಾ ಗುರುವೇ ಇವರಿಗೆ ಸಂಪೂರ್ಣ ಬೆಂಬಲ ಕೊಟ್ಟಂತೆ ಕಾಣುತ್ತಿದೆ ಎಂದು ಆರೋಪಿಸಿದರು. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ, ಸರಿಯಾಗಿದ್ದರೆ ಇವರ ವರ್ತನೆಯ ಕುರಿತು ಯಾರೂ ಪತ್ರ ಬರೆದು, ಶಾಸಕಾಂಗ ಸಭೆ ಕರೆಯುತ್ತಿರಲಿಲ್ಲ. ಆದ್ದರಿಂದ ಯಾರ ಮಾತನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ; ಮಾತೃ ಭಾಷೆಯಲ್ಲಿ ಶಿಕ್ಷಣ ಒದಗಿಸುವುದು ತಪ್ಪಾ? ಎನ್ಇಪಿ ರದ್ದತಿ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಟಿ ರವಿ ಪ್ರಶ್ನೆ
ಸಿಟಿ ರವಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಶಿವಕುಮಾರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ರೋಗಿಯೂ ಅಲ್ಲ, ರೋಗದ ಬಗ್ಗೆ ತಿಳಿಯಲು ಅವರು ಡಾಕ್ಟರೂ ಅಲ್ಲ. ಅಜ್ಜಯ್ಯನ ಹೇಳಿಕೆಯೂ ನನ್ನದಲ್ಲ ಎಂದು ಟಾಂಗ್ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ