
ಚಿಕ್ಕಮಗಳೂರು, ಜುಲೈ 26: ಚಾರ್ಮಾಡಿ ಫಾಟಿಯ (Charmadi Ghat) ನಿಷೇಧಿತ ಪ್ರದೇಶದಲ್ಲಿ ಟ್ರೆಕ್ಕಿಂಗ್ಗೆ ತೆರಳಿದ 103 ಮಂದಿ ಪ್ರವಾಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾರ್ಮಾಡಿ ಘಾಟಿ ಪ್ರದೇಶದ ಬಿದಿರುತಳ (ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿದೆ) ಅರಣ್ಯ ಪ್ರದೇಶಕ್ಕೆ ಟ್ರೆಕ್ಕಿಂಗ್ ನಿಷೇಧ ಇದ್ದು, ಬೆಂಗಳೂರು (Bengaluru) ಮೂಲದ 103 ಜನ ಪ್ರವಾಸಿಗರು ಅಲ್ಲಿಗೆ ತೆರಳಿದ್ದರು. ಸ್ಥಳೀಯರು ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಅವರನ್ನೆಲ್ಲ ಬಾಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡು ಬಸ್, ಮೂರು ಪಿಕಪ್ ವಾಹನಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಕಂಪನಿಯ ಉದ್ಯೋಗಿಗಳು ಟೂರಿಸ್ಟ್ ಪ್ಯಾಕೇಜ್ ಅಡಿಯಲ್ಲಿ ಪ್ರವಾಸಕ್ಕೆ ತೆರಳಿದ್ದರು. ಬಿದಿರುತಳ ಗ್ರಾಮ, ಚಿಕ್ಕಮಗಳೂರು ಜಿಲ್ಲೆಯ ಕೊನೆಯ ಗ್ರಾಮವಾಗಿದೆ. ಪ್ರಕರಣ ಸಂಬಂಧ 103 ಜನರ ವಿರುದ್ಧ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ.
ನಿಷೇಧಿತ ಪ್ರದೇಶಕ್ಕೆ ಚಾರಣಕ್ಕೆ ಕರೆದೊಯ್ದಿದ್ದ ಸ್ಥಳೀಯರ 6 ಪಿಕಪ್ ವಾಹನಗಳ ಮೇಲೂ ಕೇಸ್ ದಾಖಲು ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ಭಾಗದಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಭದ್ರಾ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಒಳಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರೆದಿದ್ದು. ತುಂಗಾ, ಭದ್ರಾ ನದಿಗಳ ಒಳ ಹರಿವಿನಲ್ಲಿ ಭಾರಿ ಏರಿಕೆಯಾಗುತ್ತಿದೆ. ಮಲೆನಾಡಲ್ಲಿ ಮಳೆಯಾದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೆರೆ ಆತಂಕ ಸೃಷ್ಟಿಯಾಗಿದೆ.
ಇದನ್ನೂ ಓದಿ: ಬಂಡಾಜೆ ಜಲಪಾತ ನೋಡಲು ರುದ್ರ ರಮಣೀಯ; ಆದರೆ ಪ್ರವಾಸಿಗರ ಹುಚ್ಚಾಟಗಳು ಅನಪೇಕ್ಷಣೀಯ
ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಚಿಕ್ಕಮಗಳೂರು ತಾಲೂಕಿನ ದೇವದಾನ ಗ್ರಾಮದಲ್ಲಿನ ಮನೆ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಷರೀಫ್ ಎಂಬುವರ ಮನೆ ಸಂಪೂರ್ಣ ಜಖಂಗೊಂಡಿದೆ. ದವಸ ಧಾನ್ಯ, ಗೃಹಪಯೋಗಿ ವಸ್ತುಗಳು ಸಂಪೂರ್ಣ ನಾಶವಾಗಿವೆ. ಶೌರ್ಯ ವಿಪತ್ತು ತಂಡ ಮರ ತೆರವುಗೊಳಿಸಿತು.
Published On - 2:56 pm, Sat, 26 July 25