Chikkamagaluru: ಕಾರ್ಯಕರ್ತರ ಪ್ರತಿಭಟನೆಗೆ ಯಡಿಯೂರಪ್ಪ ಗರಂ; ವಿಜಯಸಂಕಲ್ಪ ಯಾತ್ರೆ ರದ್ದುಗೊಳಿಸಿ ವಾಪಸ್

|

Updated on: Mar 16, 2023 | 3:59 PM

ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಂಡಿದ್ದು ಇದರಿಂದ ಸಿಟ್ಟಾದ ಮಾಜಿ ಮುಖ್ಯಮಂತ್ರಿ ಬಿಎಎಸ್ ಯಡಿಯೂರಪ್ಪ ವಿಜಯಸಂಕಲ್ಪ ಯಾತ್ರೆ ರದ್ದುಗೊಳಿಸಿ ಚಿಕ್ಕಮಗಳೂರಿಗೆ ವಾಪಸಾಗಿದ್ದಾರೆ.

ಚಿಕ್ಕಮಗಳೂರು: ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ (MP Kumaraswamy) ವಿರುದ್ಧ ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಂಡಿದ್ದು ಇದರಿಂದ ಸಿಟ್ಟಾದ ಮಾಜಿ ಮುಖ್ಯಮಂತ್ರಿ ಬಿಎಎಸ್ ಯಡಿಯೂರಪ್ಪ (BS Yediyurappa) ವಿಜಯಸಂಕಲ್ಪ ಯಾತ್ರೆ ರದ್ದುಗೊಳಿಸಿ ಚಿಕ್ಕಮಗಳೂರಿಗೆ ವಾಪಸಾಗಿದ್ದಾರೆ. ಮೂಡಿಗೆರೆ ಪಟ್ಟಣದಲ್ಲಿ ವಿಜಯಸಂಕಲ್ಪ ಯಾತ್ರೆ ಆರಂಭವಾಗುತ್ತಿದ್ದಂತೆಯೇ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಶಾಸಕ ಸಿಟಿ ರವಿ, ವಿಧಾನಪರಿಷತ್ ಸದಸ್ಯ ಪ್ರಾಣೇಶ್​ಗೆ ಮುತ್ತಿಗೆ ಹಾಕಿದ್ದಾರೆ. ಕುಮಾರಸ್ವಾಮಿಗೆ ಟಿಕೆಟ್​ ನೀಡದಂತೆ ಆಗ್ರಹಿಸಿದ್ದಾರೆ. ಜತೆಗೆ, ರಸ್ತೆ ತಡೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತು ವಿಜಯೇಂದ್ರ ಮಧ್ಯೆ ನಡೆಯುತ್ತಿರುವ ಶೀತಲ ಸಮರದ ನಡುವೆಯೇ ಈ ಘಟನೆ ನಡೆದಿದೆ.

ಇದಕ್ಕೂ ಮುನ್ನ ಮಾತನಾಡಿದ ಯಡಿಯೂರಪ್ಪ, ವಿಜಯಸಂಕಲ್ಪ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನೂರಕ್ಕೆ ನೂರರಷ್ಟು 140 ಸ್ಥಾನ ಗೆದ್ದು ಪಡೆದು ಸರ್ಕಾರ ರಚಿಸುತ್ತೇವೆ. ಪ್ರವಾಸ ಮಾಡಿರುವ 50 ಕ್ಷೇತ್ರಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮೂಡಿಗೆರೆ ಶಾಸಕರ ವಿರುದ್ಧ ಕಾರ್ಯಕರ್ತರ ಬಂಡಾಯಕ್ಕೆ ಸಂಬಂಧಿಸಿ ಸೂಕ್ಷ್ಮವಾದ ತೀರ್ಮಾನವನ್ನು ಪಕ್ಷ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಗೆಲ್ಲುವ ಪಕ್ಷದಲ್ಲಿ ಈ ರೀತಿಯ ಬಂಡಾಯ ಎಲ್ಲ ಇರುತ್ತದೆ. ನಮ್ಮ ಕೇಂದ್ರ ನಾಯಕರು ಎಲ್ಲವನ್ನೂ ಬಗೆಹರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: BSY in Yadgir: ಸೋಮಣ್ಣ ಅಥವಾ ಬೇರೆ ಯಾವುದೇ ಸಚಿವ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿಲ್ಲವೆಂದ ಬಿಎಸ್ ಯಡಿಯೂರಪ್ಪ

ಚಿಕ್ಕಮಗಳೂರಿನಲ್ಲಿ ವೀರಶೈವ ಲಿಂಗಾಯತರು ಸಿಟಿ ರವಿ ವಿರುದ್ಧ ಸಿಡಿದೆದ್ದಿರುವ ಬೆನ್ನಲ್ಲೇ ಈ ಘಟನೆಯೂ ನಡೆದಿದೆ. ಪದೇಪದೇ ಮಾಜಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಹೇಳಿಕೆಗಳಿಗೆ ಪರೋಕ್ಷವಾಗಿ ಟಾಂಗ್​ ಕೊಡುತ್ತಿರುವುದಕ್ಕೆ ವೀರಶೈವ ಲಿಂಗಾಯತ ಸಂಘಟನೆ ಕೋಪಗೊಂಡಿದ್ದು, ಸಿಟಿ ರವಿ ಚುನಾವಣೆ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕಬೇಕು. ‘ಕಿತ್ತೋದ ಸಿ.ಟಿ ರವಿ’ ಎಂದು ಘೋಷಣೆ ಕೂಗಬೇಕು ಪತ್ರಿಕಾ ಪ್ರಕಟಣೆ ಮೂಲಕ ಕರೆ ಕೊಟ್ಟಿದೆ. ಅಲ್ಲದೇ ಲಿಂಗಾಯತ ಸಮಾಜಕ್ಕೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಒಂದು ವಾರದಲ್ಲಿ ನಿಮ್ಮ ಮನೆಗೆ ಬಂದು ಹೋರಾಟ ಮಾಡುತ್ತೇವೆ ಎಂದು ಸಿಟಿ ರವಿಗೆ ಎಚ್ಚರಿಕೆ ನೀಡಿದೆ.

ಈ ಮಧ್ಯೆ ಸಿಟಿ ರವಿ ಹೇಳಿಕೆ ಬಗ್ಗೆ ಬಿಎಸ್​ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಅವರು ಹಾಗೆಲ್ಲ ಹೇಳಿಕೆ ನೀಡಬಾರದು. ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಆ ರಿತಿಯ ಯಾರೂ ಮಾತನಾಡಬಾರದು. ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಎಲ್ಲರ ಸಹಕಾರವೂ ಮುಖ್ಯ. ಸಿಟಿ ರವಿ ಆ ರೀತಿಯ ಹೇಳಿಕೆ ನೀಡಿದ್ದಾರೆ ಎಂದಾದರೆ ಅದು ತಪ್ಪು. ಅವರನ್ನು ಕರೆಸಿಕೊಂಡು ಮಾತನಾಡುವೆ ಎಂದು ಬಿಎಸ್​ವೈ ಹೇಳಿದ್ದಾರೆ. ಲಿಂಗಾಯತರ ಮತ ಬೇಕಾಗಿಲ್ಲ ಎಂಬರ್ಥದಲ್ಲಿ ಸಿಟಿ ರವಿ ಮಾತನಾಡಿದ್ದಾರೆ ಎಂದು ಸಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ