ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಿಸಲು ಸಜ್ಜಾದ ಚಿಕ್ಕಮಗಳೂರು ಅರಣ್ಯ ಇಲಾಖೆ: ಪ್ಲ್ಯಾನ್ ಏನು?

ಕಾಫಿನಾಡು ಚಿಕ್ಕಮಗಳೂರಿನಲ್ಲಿ 80 ಸಾವಿರ ಹೆಕ್ಟೇರ್​ಗೂ ಹೆಚ್ಚು ಅರಣ್ಯ ಪ್ರದೇಶವಿದ್ದು, ಕಾಡ್ಗಿಚ್ಚಿನಿಂದ ತಪ್ಪಿಸಲು ಅರಣ್ಯ ಇಲಾಖೆ ಸಜ್ಜಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಅಲರ್ಟ್ ಆಗಿದೆ. 180 ಎಕರೆ ಅರಣ್ಯ ಪ್ರದೇಶ ಈಗಾಗಲೇ ಸುಟ್ಟುಹೋಗಿದೆ. ಅರಣ್ಯ ಇಲಾಖೆ 30 ಫೈರ್ ವಾಚರ್‌ಗಳನ್ನು ನೇಮಿಸಿ ತರಬೇತಿ ನೀಡಿದೆ.

ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಿಸಲು ಸಜ್ಜಾದ ಚಿಕ್ಕಮಗಳೂರು ಅರಣ್ಯ ಇಲಾಖೆ: ಪ್ಲ್ಯಾನ್ ಏನು?
ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಿಸಲು ಸಜ್ಜಾದ ಚಿಕ್ಕಮಗಳೂರು ಅರಣ್ಯ ಇಲಾಖೆ: ಪ್ಲ್ಯಾನ್ ಏನು?
Edited By:

Updated on: Feb 17, 2025 | 9:12 PM

ಚಿಕ್ಕಮಗಳೂರು, ಫೆಬ್ರವರಿ 17: ಚಿಕ್ಕಮಗಳೂರು ಮೊದಲೇ ಅರಣ್ಯ ಪ್ರದೇಶಗಳಿಂದ ಕೂಡಿದ ಜಿಲ್ಲೆಯಾಗಿದ್ದು ಅರಣ್ಯ ವಿಭಾಗ ಒಂದರಲ್ಲೇ ಬರೋಬ್ಬರಿ 80 ಸಾವಿರ ಹೆಕ್ಟೇರ್​ಗೂ ಹೆಚ್ಚು ಅರಣ್ಯ ಪ್ರದೇಶವಿದೆ.‌ ಇಷ್ಟೊಂದು ಹೇರಳವಾಗಿ ಅರಣ್ಯ ಸಂಪತ್ತು ಇದ್ದರು ಕೂಡಾ ಬೇಸಿಗೆ ಆರಂಭವಾಗುವ ಮೊದಲೇ ನಾಲ್ಕೈದು ಕಡೆ ಕಾಡ್ಗಿಚ್ಚು (fire) ಕಾಣಿಸಿಕೊಂಡಿದೆ. ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿದ್ದ ಸಸ್ಯ ಸಂಪತ್ತು ಸೇರಿದಂತೆ ಅಪರೂಪದ ಗಿಡ ಮೂಲಿಕೆಗಳೆಲ್ಲವೂ ಸುಟ್ಟು ಭಸ್ಮವಾಗಿದ್ದವು. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವ ಮೂಲಕ ಅಲರ್ಟ್ ಆಗಿದೆ. ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶಗಳಲ್ಲಿ 45 ಸಾವಿರ ಹೆಕ್ಟೇರ್ ಮೀಸಲು ಅರಣ್ಯ, ಡೀಮ್‌ಡ್ ಅರಣ್ಯ ಪ್ರದೇಶವನ್ನ ಸಂರಕ್ಷಣೆ ಮಾಡುವುದು ಇಲಾಖೆಯ ಕರ್ತವ್ಯವಾಗಿದ್ದು, ಅರಣ್ಯ ರಕ್ಷಣೆಗಾಗಿ ಫೈರ್ ವಾಚರ್‌ಗಳಿಗೆ ತರಬೇತಿ ನೀಡಲಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳೇ ಹೇಳುವಂತೆ ಜಿಲ್ಲೆಯಲ್ಲಿ ಇದುವರೆ 50 ಕ್ಕೂ ಹೆಚ್ಚು ಬೆಂಕಿ ಪ್ರಕರಣಗಳಲ್ಲಿ 180 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದ್ದು, ಕಾಡಿಗೆ ಬೀಳುವ ಕಾಡ್ಗಿಚ್ಚು ತಪ್ಪಿಸಲು ಫೈರ್ ವಾಚರ್ ಗಳನ್ನ ನೇಮಕ ಮಾಡಿಕೊಂಡು ಅವರಿಗೆ ತರಬೇತಿ ಕೊಡುವುದರ ಜೊತೆಗೆ, ಬೆಂಕಿ ಬೀಳದಂತೆ ನಿಗಾ ವಹಿಸುತ್ತಿದೆ. 30 ಜನ ಫೈರ್ ವಾಚರ್ ನೇಮಕ ಮಾಡಿಕೊಳ್ಳಲಾಗಿದೆ. ಅದರ ಜೊತೆ ಜೊತೆಗೆ ಎಡಿಸಿ ಕ್ಯಾಂಪ್ ನಲ್ಲಿರುವ 14 ಮಂದಿಯ ಜೊತೆಗೆ ಅತೀ ತುರ್ತು ಸಂದರ್ಭದಲ್ಲಿ ಇ.ಟಿ.ಎಫ್ ಸಿಬ್ಬಂದಿಗಳನ್ನೂ ಕೂಡ ಬಳಸಿಕೊಳ್ಳಲಾಗುತ್ತಿದೆ‌.

ಇದನ್ನೂ ಓದಿ: ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು ಹೀಗೆ

ಇನ್ನೂ ಹಗಲು, ರಾತ್ರಿ ಎರಡೂ ಪಾಳಿಯಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಫೈರ್ ಟವರ್​ಗಳನ್ನೂ ನಿರ್ಮಾಣ ಮಾಡಲಾಗಿದೆ. ಇದರ ಹೊರತಾಗಿ ಕಾಡಿಗೆ ಬೆಂಕಿ ಕೊಡೋದ್ರಿಂದ ನಮಗೆ ಒಳ್ಳೆಯದಾಗುತ್ತೆ ಎಂಬ ನಂಬಿಕೆಯಿಂದಾಗಿ ಅಲ್ಲಲ್ಲಿ ಬೆಂಕಿ ಹಾಕುವ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದವು. ಬೀದಿ ನಾಟಕಗಳ ಮೂಲಕ ಜನರಿಗೆ‍, ಶಾಲಾ ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿಯೂ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಕಿಡಿಗೇಡಿಗಳ ಕೃತ್ಯದಿಂದ ಪಶ್ಚಿಮ ಘಟ್ಟಗಳ ಸಾಲಿನ ಅರಣ್ಯಕ್ಕೆ ಬೆಂಕಿ, ತನಿಖೆಯಲ್ಲಿ ಬಯಲು

ಒಟ್ನಲ್ಲಿ ಬೇಸಿಗೆ ಆರಂಭಕ್ಕೂ ಮೊದಲೇ ಕಾಡಲ್ಲಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆಯಾದರೂ ಸೀಸನ್​ಗೂ ಮೊದಲೇ ಬೆಂಕಿಯ ಕೆನ್ನಾಲಗೆಗೆ ನೂರಾರು ಎಕರೆ ಅರಣ್ಯ, ಅಪರೂಪದ ಗಿಡಮೂಲಿಕೆಗಳು ನಾಶವಾಗಿದ್ದು ಮಾತ್ರ ವಿಪರ್ಯಾಸ.

ಕರ್ನಾಟದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:45 pm, Mon, 17 February 25