
ಚಿಕ್ಕಮಗಳೂರು, ನವೆಂಬರ್ 28: ಕಾಫಿನಾಡು ಚಿಕ್ಕಮಗಳೂರಲ್ಲಿ ಚಿರತೆ ಹಾವಳಿಗೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಬಾಲಕಿಯ ಹೊತ್ತೊಯ್ದು ಚಿರತೆ ಬಲಿ ಪಡೆದ ಪ್ರಕರಣ ಮಾಸುವ ಮುನ್ನವೇ , 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಲಿಂಗದಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾಲಕ ಹೃದಯ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಮನೆಯ ಬಳಿ ನಿಂತಿದ್ದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದ್ದು, ಗಾಯಾಳು ಬಾಲಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ವಾರದ ಹಿಂದಷ್ಟೇ ಬೀರೂರು ಸಮೀಪದ ನವಿಲೇಕಲ್ಲು ಗುಡ್ಡ ಗ್ರಾಮದಲ್ಲಿ ಚಿರತೆ ದಾಳಿಗೆ 5 ವರ್ಷದ ಮಗು ಬಲಿಯಾಗಿತ್ತು. ಮನೆಯ ಹಿಂದೆ ನಿಂತಿದ್ದ ಬಾಲಕಿಯನ್ನು ತಂದೆಯ ಮುಂದೆಯೇ ಚಿರತೆ ಹೊತ್ತೊಯ್ದಿತ್ತು. ಘಟನೆಯಲ್ಲಿ ಕೂಲಿ ಕಾರ್ಮಿಕ ಬಸವರಾಜ ಎಂಬುವರ ಪುತ್ರಿ ಸಾನ್ವಿ (5) ಮೃತಪಟ್ಟಿದ್ದರು. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕುಮ್ಮತ್ತಗಿರಿ ನಿವಾಸಿಯ ಬಸವರಾಜ ಕುಟುಂಬ ಕೂಲಿ ಕೆಲಸಕ್ಕಾಗಿ ಇಲ್ಲಿಗೆ ಬಂದಿತ್ತು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ಈ ಹಿಂದೆಯೂ ಹಲವು ಬಾರಿ ಚಿರತೆ ದಾಳಿ ಬಗ್ಗೆ ಉಲ್ಲೇಖಿಸಿದ್ದ ಸ್ಥಳೀಯರು, ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಪೊಲೀಸ್ ಠಾಣೆಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ!
ನಿನ್ನೆಯಷ್ಟೇ ತರೀಕೆರೆ ತಾಲೂಕಿನ ಕೆಂಚಾಪುರ ಗ್ರಾಮದ ಮೇರಿಯಮ್ಮ ಎಂಬುವರ ಮನೆಯ ಸುತ್ತಮುತ್ತ ಚಿರತೆ ಓಡಾಟ ನಡೆಸಿರುವ ವಿಡಿಯೋ ವೈರಲ್ ಆಗಿತ್ತು. ಚಿರತೆ ನೀರು ಕುಡಿಯುತ್ತಿರುವ ದೃಶ್ಯವನ್ನ ಮನೆಯವರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಘಟನೆ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದ ಕೆಂಚಾಪುರ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದ್ದರು. ಈ ನಡುವೆಯೇ ಚಿರತೆ ಮತ್ತೊಂದು ಮಗುವಿನ ಮೇಲೆ ದಾಳಿ ನಡೆಸಿರೋದು ಆತಂಕ ಹೆಚ್ಚಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.