ಚಿಕ್ಕಮಗಳೂರು: ಮಕ್ಕಳ ಮೇಲೆ ‌ದಾಳಿ ಮಾಡಿದ್ದ ಚಿರತೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿ 

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಮಕ್ಕಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದೆ. ಇತ್ತೀಚೆಗೆ ಓರ್ವ ಬಾಲಕಿಯನ್ನ ಬಲಿ ಪಡೆದಿತ್ತು. ಅರಣ್ಯ ಸಿಬ್ಬಂದಿ ಗುಂಡೇಟಿಗೆ ಚಿರತೆ ಸಾವನ್ನಪ್ಪಿದೆ. ಚಿರತೆ ಸಾವಿನಿಂದಾಗಿ ತರೀಕೆರೆ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಚಿಕ್ಕಮಗಳೂರು: ಮಕ್ಕಳ ಮೇಲೆ ‌ದಾಳಿ ಮಾಡಿದ್ದ ಚಿರತೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿ 
ಚಿರತೆ
Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2025 | 8:27 AM

ಚಿಕ್ಕಮಗಳೂರು, ನವೆಂಬರ್​ 30: ಕಾಫಿನಾಡಿನ ತರೀಕೆರೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಮಕ್ಕಳ ಮೇಲೆ ‌ದಾಳಿ ಮಾಡಿ ಓರ್ವ ಬಾಲಕಿಯನ್ನ ಬಲಿ ಪಡೆದು ಮತ್ತೊಬ್ಬ ಬಾಲಕನ ಮೇಲೆ ‌ದಾಳಿ ಮಾಡಿದ್ದ ಚಿರತೆ (Leopard) ಅರಣ್ಯ ಇಲಾಖೆಯ ಕಾರ್ಯಚರಣೆ ವೇಳೆ ಸಾವನ್ನಪ್ಪಿದೆ (death). ಜೀವಂತ ಅಥವಾ ಜೀವ ರಹಿತವಾಗಿ ಹಿಡಿಯಲು ಆದೇಶಿಸಲಾಗಿತ್ತು. ಚಿರತೆ ಸೆರೆಗಾಗಿ ಸಿಬ್ಬಂದಿಗಳು ತೆರಳಿದ್ದ ವೇಳೆ ದಾಳಿಗೆ ಯತ್ನಿಸಿದ್ದು, ಗುಂಡು ಹಾರಿಸಿ‌ ಚಿರತೆ ಹತ್ಯೆ ಮಾಡಲಾಗಿದೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಚಿರತೆ ಉಪಟಳ ಮಿತಿಮೀರಿದೆ. ಕತ್ತಲಾಗುತ್ತಿದ್ದಂತೆ ಜನವಸತಿ ಪ್ರದೇಶ, ರಸ್ತೆಗಳಲ್ಲಿ ಕಾಣಿಸುತ್ತಿದ್ದ ಚಿರತೆ ತರೀಕೆರೆ ಅರಣ್ಯ ವ್ಯಾಪ್ತಿಯ ನವಿಲೇಕಲ್ಲು ಗುಡ್ಡದ ಬಳಿ ಕಾರ್ಮಿಕರ ಲೈನ್ ಮನೆಯ ಹಿಂಭಾಗ ಆಟವಾಡುತ್ತಿದ್ದ 5 ವರ್ಷದ ಸಾನ್ವಿಯನ್ನು ಅಪ್ಪನ ಎದುರೆ ಹೇಳಿದುಕೊಂಡು ಹೋಗಿ ಗುಡ್ಡದ ಮೇಲೆ ಕೊಂದು ಹಾಕಿತ್ತು.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ನಿಲ್ಲದ ಚಿರತೆ ಹಾವಳಿ: ಬಾಲಕನ ಮೇಲೆ ಭೀಕರ ದಾಳಿ; ಗಾಯಾಳು ಆಸ್ಪತ್ರೆಗೆ ದಾಖಲು

ಈ ಪ್ರಕರಣ ಮಾಸುವ ಮುನ್ನವೇ ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದ ಬಳಿ‌ ಸಂಜೆ ಶಾಲೆಯಿಂದ ಮನೆಗೆ ಬರುತ್ತಿದ್ದ 11 ವರ್ಷದ ಬಾಲಕ ಹೃದಯ್ ಮೇಲೆ ದಾಳಿ ಮಾಡಿ ಕುತ್ತಿಗೆ ಭಾಗಕ್ಕೆ ಬಾಯಿ ಹಾಕಿ ಎಳೆದುಕೊಂಡು ಹೋಗಲು ಪ್ರಯತ್ನಿಸಿತ್ತು. ಆದರೆ ಅದೃಷ್ಟವಶಾತ್ ಹೃದಯ್ ಪಾರಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಕ್ಕಳ ಮೇಲೆ ಹೆಚ್ಚು ದಾಳಿ ಮಾಡುವ ಚಿರತೆ ಸೆರೆಗೆ ನಿನ್ನೆ ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ‌ ಕಾರ್ಯಚರಣೆ ನಡೆಸಲು ಅರಣ್ಯ ಇಲಾಖೆ ಪ್ಲಾನ್ ಮಾಡಿತ್ತು. ಕಾರ್ಯಚರಣೆಗಾಗಿ ಕುಮ್ಕಿ ಆನೆಗಳನ್ನ ಕರೆಸಿತ್ತು. ಆದರೆ ಬೈರಾಪುರ ಬಳಿ ಓಡಾಟ ನಡೆಸುತ್ತಿದ್ದ ಚಿರತೆ ಕಾರ್ಯಚರಣೆ ವೇಳೆ ಸಾವನ್ನಪ್ಪಿದೆ.

ಬೈರಾಪುರ ಗ್ರಾಮದ ಹೊರವಲಯದ ಪಾಳು ಬಿದ್ದ ಲೈನ್ನಲ್ಲಿ ಅಡಗಿ ಕುಳಿತಿದ್ದ ಚಿರತೆ ಸೆರೆಗಾಗಿ ಸಿಬ್ಬಂದಿಗಳು ತೆರಳಿದ್ದಾಗ ಚಿರತೆ ದಾಳಿಗೆ ಯತ್ನಿಸಿದೆ. ಹೀಗಾಗಿ ಅರಣ್ಯ ಸಿಬ್ಬಂದಿ ತಮ್ಮ ಆತ್ಮರಕ್ಷಣೆಗಾಗಿ ಚಿರತೆಗೆ ಗುಂಡು ಹಾರಿಸಿ‌ದ್ದಾರೆ. ಇನ್ನು ಮಕ್ಕಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯನ್ನು ಜೀವಂತ ಅಥವಾ ಜೀವರಹಿತವಾಗಿ ಹಿಡಿಯಲು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದರು.

ಇದನ್ನೂ ಓದಿ: ನಿಮ್ ಮನೆಗೆ ಕಾಳಿಂಗ ಸರ್ಪ ಬಂತಾ? ಹಿಡಿಯೋಕೆ ಅರಣ್ಯ ಇಲಾಖೆನೇ ಮಾಡುತ್ತೆ ವ್ಯವಸ್ಥೆ! ಸರ್ಕಾರದಿಂದ ಮಹತ್ವದ ಕ್ರಮ

ಚಿಕ್ಕಮಗಳೂರು ತಾಲೂಕಿನ ಅಜ್ಜಂಪುರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದ ಸಚಿವ ಖಂಡ್ರೆ, ದಾಳಿ ಮಾಡುವ ಚಿರತೆಗಳ ಸೆರೆಗೆ ಸೂಚನೆ ನೀಡಿದ್ದರು. ನವಿಲೇಕಲ್ಲು ಗುಡ್ಡ, ಬೈರಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ 10ಕ್ಕೂ ಬೋನ್ ಅಳವಡಿಸಿದ್ದರು. ಆದರೆ ಬೋನಿಗೆ ಬೀಳದ ಚಾಲಾಕಿ ಚಿರತೆ ಆತಂಕ ಸೃಷ್ಟಿ ಮಾಡಿತ್ತು.

ಒಟ್ಟಿನಲ್ಲಿ ಮಕ್ಕಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿ ಮಾಡಿದ್ದ ಚಿರತೆ ಸಾವನ್ನಪ್ಪಿದ್ದು. ತರೀಕೆರೆ ತಾಲೂಕಿನ ‌ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:24 am, Sun, 30 November 25