Chikkamagaluru News: ಅರಣ್ಯ ಇಲಾಖೆ ಸಿಬ್ಬಂದಿಯಿಂದ ರೈತರ ಮೇಲೆ‌ ದೌರ್ಜನ್ಯ ಆರೋಪ, ಕೃಷಿ ಚಟುವಟಿಕೆ ನಡೆಸದಂತೆ ಧಮ್ಕಿ

| Updated By: ಆಯೇಷಾ ಬಾನು

Updated on: Jul 18, 2023 | 1:15 PM

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಗ್ರಾಮದ ರೈತರು ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವುದಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ತಡೆದಿದ್ದಾರೆ.

Chikkamagaluru News: ಅರಣ್ಯ ಇಲಾಖೆ ಸಿಬ್ಬಂದಿಯಿಂದ ರೈತರ ಮೇಲೆ‌ ದೌರ್ಜನ್ಯ ಆರೋಪ, ಕೃಷಿ ಚಟುವಟಿಕೆ ನಡೆಸದಂತೆ ಧಮ್ಕಿ
ರೈತರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಕಿರುಕುಳ
Follow us on

ಚಿಕ್ಕಮಗಳೂರು: ಒಂದು ಕಡೆ ಪಶ್ಚಿಮ ಘಟ್ಟಗಳ ಸಾಲು ಮತ್ತೊಂದು ಕಡೆ ದಟ್ಟ ಕಾಡುಗಳಿಂದ ಕೂಡಿರುವ ಕಾಫಿನಾಡು ಚಿಕ್ಕಮಗಳೂರು(Chikkamagaluru)  ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಮತ್ತು ಕೃಷಿ ಭೂಮಿಗಾಗಿ ಅರಣ್ಯ ಇಲಾಖೆ(Forest Department) ಮತ್ತು ರೈತರ(Farmers)  ನಡುವೆ ಸಂಘರ್ಷ ದಶಕಗಳಿಂದ ನಡೆಯುತ್ತಲೇ ಇದೆ. ಅರಣ್ಯವನ್ನ ಒತ್ತುವರಿ ಮಾಡಿರೋ ಆರೋಪದ ಮೇಲೆ ರೈತರ ಮೇಲೆ ನಿರಂತರವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಕಿರುಕುಳದ‌ ಆರೋಪಗಳು ಕೇಳಿ ಬರುತ್ತಿದೆ.

ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸದಂತೆ ತಡೆದ ಅರಣ್ಯ ಇಲಾಖೆ ಸಿಬ್ಬಂದಿ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಗ್ರಾಮದ ರೈತರು ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವುದಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ತಡೆದಿದ್ದಾರೆ. ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಕಳೆದ 20 ವರ್ಷಗಳಿಂದ ಉಳುವೆ ಮಾಡುತ್ತಿದ್ದ ಹೊಲದಲ್ಲಿ ಚಟುವಟಿಕೆ ನಡೆಸದಂತೆ ರೈತರನ್ನ ತಡೆಯಲಾಗಿದ್ದು. ರೈತರಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಕೃಷಿ ಚಟುವಟಿಕೆ ಮಾಡದಂತೆ ಧಮ್ಕಿ ಹಾಕಿರುವ ವಿಡಿಯೋ ವೈರಲ್ ಆಗಿದೆ.

ಹೈ ಕೋರ್ಟ್ ನಲ್ಲಿ ತೀರ್ಪು ಬರುವ ಮುನ್ನವೇ ಅರಣ್ಯ ಇಲಾಖೆಯಿಂದ ದೌರ್ಜನ್ಯ

ತರೀಕೆರೆ ತಾಲೂಕಿನ 500 ಕ್ಕೂ ಅಧಿಕ ಅರಣ್ಯ ಪ್ರದೇಶವನ್ನ ಒತ್ತುವರಿ ಮಾಡಲಾಗಿದೆ ಎಂಬ ವರದಿಯನ್ನ ಈ ಹಿಂದೆಯೇ ಅರಣ್ಯ ಇಲಾಖೆ ಸರ್ಕಾರಕ್ಕೆ ನೀಡಿತ್ತು. ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ನೂರಾರು ಎಕರೆ ಭೂಮಿಯನ್ನ ಅರಣ್ಯ ಇಲಾಖೆ ವಶ ಪಡಿಸಿಕೊಂಡಿದೆ. ಇನ್ನೂ 20 ವರ್ಷ ಗಳ ಹಿಂದೆಯೇ ಕೃಷಿ ಭೂಮಿಗೆ ತಾಲೂಕು ಕಚೇರಿಯಿಂದ ಸಾಗುವಳಿ ಪಡೆದಿರುವ ರೈತರು ಭೂಮಿ ಉಳಿಸಿಕೊಳ್ಳಲು ಹೈ ಕೋರ್ಟ್ ಮೆಟ್ಟಿಲೇರಿದ್ದು ,ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಹೈ ಕೋರ್ಟ್ ನಲ್ಲಿ ತೀರ್ಪು ಬರುವ ಮುನ್ನವೇ ತರೀಕೆರೆ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೃಷಿ ಚಟುವಟಿಕೆ ಮಾಡದಂತೆ ತಡೆಯುತ್ತಿದ್ದು ಧಮ್ಕಿ ಹಾಕಲಾಗಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ: ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಪಕ್ರರಣ: ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಪತ್ರ ಬರೆದ ಹುಬ್ಬಳ್ಳಿ ಜನ

ಜಿಲ್ಲೆಯಾದ್ಯಂತ ರೈತರಿಗೆ ಕಂಟಕವಾದ ಅರಣ್ಯ ಭೂಮಿ

ತರೀಕೆರೆ ತಾಲೂಕು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಮಸ್ಯೆ ಇದ್ದು. ದಶಕಗಳಿಂದ ಉಳುವೆ ಮಾಡಿರುವ ಕೃಷಿ ಭೂಮಿಯನ್ನ ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆಯುತ್ತಿದ್ದಾರೆ. ಅರಣ್ಯ ಇಲಾಖೆಯ ಕ್ರಮದ ವಿರುದ್ಧ ರೈತರು ಆತಂಕಗೊಂಡಿದ್ದು ಹೈ ಕೋರ್ಟ್ ನಲ್ಲಿ ಅರಣ್ಯ ಇಲಾಖೆಯ ವಿರುದ್ಧ ದಾವೆ ಹಾಕಿದ್ದು ಪ್ರಕರಣ ವಿಚಾರಣೆ ಹಂತದಲ್ಲಿದೆ.

ಸಾಗುವಳಿ ಪತ್ರ ಇದ್ರೂ ಅರಣ್ಯ ಭೂಮಿ ಅನ್ನುತ್ತಿರುವ ಸಿಬ್ಬಂದಿ

ತಾಲೂಕು ಕಚೇರಿಗಳಲ್ಲಿ ಜಮೀನಿಗೆ ಸಾಗುವಳಿ ಪತ್ರ ಪಡೆದಿರುವ ರೈತರ ಭೂಮಿಗಳನ್ನು ಅರಣ್ಯ ಭೂಮಿ ಎಂದು ತೆರವು ಮಾಡಲು ಅರಣ್ಯ ಇಲಾಖೆ ಮುಂದಾಗುತ್ತಿದೆ. ಇದು ರೈತರ ಆಕ್ರೋಶಕ್ಕೆ ‌ಕಾರಣವಾಗಿದೆ. ದಶಕಗಳಿಂದ ಕೃಷಿ ಭೂಮಿಯನ್ನ ನಂಬಿ ಬದುಕನ್ನ ಕಟ್ಟಿ ಕೊಂಡಿರುವ ರೈತರು ಅರಣ್ಯ ಇಲಾಖೆಯ‌ ಸಿಬ್ಬಂದಿ ದಿಢೀರ್ ಕ್ರಮಕ್ಕೆ ಕಂಗಾಲಾಗಿದ್ದಾರೆ. ಅರಣ್ಯ ಭೂಮಿ ಮತ್ತು ಕಂದಾಯ ಭೂಮಿ ವಿಷಯವಾಗಿ ಸಾಕಷ್ಟು ಗೊಂದಲವಿದ್ದು ಸರ್ಕಾರ ಬಗೆಹರಿಸುವ ಕೆಲಸ ಮಾಡಬೇಕಿದೆ.

 ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ