ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಬಳಿಯ ಕಲ್ಮುರುಡೇಶ್ವರ ದೇವಾಲಯದ ಆವರಣದಲ್ಲಿ 990ಕ್ಕೂ ಅಧಿಕ ಬಿಲ್ವಪತ್ರೆ ಮರಗಳಿವೆ. ಒದೊಂದು ಮರಗಳಿಗೂ ಸರಿಸುಮಾರು 800 ವರ್ಷಗಳ ಇತಿಹಾಸವಿದೆ. ಇನ್ನು ಈ ಬಿಲ್ವಪತ್ರೆ ಶಿವ ಭಕ್ತರಿಗೆ, ಸಾಕ್ಷಾತ್ ಶಿವನಿಗೂ ಕೂಡಾ ಪ್ರಿಯ. ಬಿಲ್ವ ಪತ್ರೆಯಲ್ಲೇ ಶಿವನನ್ನ ಪೂಜಿಸಬೇಕು ಎಂಬುದು ಅಸಂಖ್ಯಾತ ಶಿವ ಭಕ್ತರ ಕನಸು. ಭಕ್ತರ ಕನಸನ್ನು ಸಾಕಾರಗೊಳಿಸಲೆಂದೇ ಕಲ್ಮುರುಡೇಶ್ವರ ದೇವಾಲಯದಲ್ಲಿ ಬಿಲ್ವಪತ್ರೆ ಮರಗಳಿವೆ. ಇನ್ನೊಂದು ವಿಶೇಷವೆಂದರೆ ಅವುಗಳನ್ನು ಯಾರೊಬ್ಬರೂ ಕೂಡ ನೆಟ್ಟಿಲ್ಲ, ಬೆಳೆಸಿಲ್ಲ. ಈ ಬಿಲ್ವಪತ್ರೆಯ ವನ ಶಿವನ ತವರೆಂಬುದು ಭಕ್ತರ ನಂಬಿಕೆಯಾಗಿದೆ.
ಬಿಲ್ವಪತ್ರೆಯ ವನ ಹುಟ್ಟಿರುವುದಕ್ಕೆ ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಾರೆ. ಸುಮಾರು 800 ವರ್ಷಗಳ ಹಿಂದೆ ಸನ್ಯಾಸಿಯೊಬ್ಬರು ಇಲ್ಲಿನ ಮಠದ ಬಳಿ ತಪಸ್ಸಿಗೆ ಕುಳಿತ್ತಿದ್ದಾಗ ಪ್ರಶಾಂತತೆಗಾಗಿ ತನ್ನ ಕೊರಳಲ್ಲಿದ್ದ ರುದ್ರಾಕ್ಷಿ ಮಾಲೆಯನ್ನ ಋಷಿ ಮುನಿಗಳು ಚಿಮ್ಮಿದ್ದು, ಇದರಿಂದ ಬಿದ್ದ ರುದ್ರಾಕ್ಷಿಗಳಿಂದಲೇ ಸಾವಿರಾರು ಬಿಲ್ವಪತ್ರೆಯ ಮರಗಳು ಬೆಳೆದು ನಿಂತು, ಬಿಲ್ವಪತ್ರೆ ವನ ನಿರ್ಮಾಣವಾಗಿದೆ ಎಂಬುದು ಇಲ್ಲಿನ ಸ್ಥಳೀಯರ ನಂಬಿಕೆಯಾಗಿದೆ. ಇನ್ನೂ ಹಲವರು ವೀರಶೈವ ಧರ್ಮದ ಗುರುಗಳಾದ ಮರುಳಸಿದ್ದರು ಇಲ್ಲಿ ಐಕ್ಯರಾಗಿರುವುದರಿಂದ ಕಲ್ಮುರಡಿ ಮಠದ ಸುತ್ತಲೂ ಬಿಲ್ವಪತ್ರೆ ಮರಗಳು ಬೆಳೆದು ನಿಂತಿವೆ ಎಂದು ನಂಬಿಕೊಂಡಿದ್ದಾರೆ. ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಇಲ್ಲಿನ ಬಿಲ್ವಪತ್ರೆ ಮರಗಳನ್ನ ಯಾರೂ ಎಣಿಸಬಾರದಂತೆ. ಹಿರಿಯರ ಪ್ರಕಾರ ಇಲ್ಲಿನ ಮರಗಳನ್ನ ಯಾರೂ ನೆಟ್ಟು ಬೆಳೆಸಿಲ್ಲವಂತೆ. ಜೊತೆಗೆ ಇಲ್ಲಿರುವ ಮರಗಳಿಗೆ ಯಾರೂ ಗೊಬ್ಬರ, ನೀರನ್ನು ಹಾಕಿ ಪೋಷಣೆ ಮಾಡುತ್ತಿಲ್ಲ. ಆದರೂ ಕೂಡ ಇಲ್ಲಿ ಬಿಲ್ವಪತ್ರೆ ಮರಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ.
ಬಿಲ್ವಪತ್ರೆಯಿಂದಾಗುವ ಆರೋಗ್ಯ ಸಂಬಂಧಿ ಪ್ರಯೋಜನಗಳು
ಬಿಲ್ವಪತ್ರೆಯ ಕಾಯಿಯಿಂದ ಉಪ್ಪಿನ ಕಾಯಿ ತಯಾರಿಸಬಹುದು, ಅದೇ ಕಾಯಿಯನ್ನ ಜಜ್ಜಿ ಅದರಿಂದ ಎಣ್ಣೆಯನ್ನ ತೆಗೆದು ತಲೆಗೆ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ ಎಂಬ ಮಹತ್ವದ ಪ್ರಯೋಗಗಳೂ ಕೂಡಾ ನಡೆದಿವೆ. ಇನ್ನು ನಿತ್ಯವೂ ಬಿಲ್ವಪತ್ರೆಯ ಎಲೆಯನ್ನ ಸೇವಿಸುತ್ತಾ ಬಂದರೆ ಸಕ್ಕರೆ ಖಾಯಿಲೆ ಸೇರಿದಂತೆ ಹಲವು ಕಾಯಿಲೆಗಳು ಮಾಯವಾಗುತ್ತವೆೆ ಎಂಬುದು ವೈದ್ಯಕೀಯ ಲೋಕದಲ್ಲಿಯೂ ಸಾಭೀತಾಗಿದೆ. ಇನ್ನು ಈ ಜಾಗದಲ್ಲಿ ಈ ಮರಗಳು ಹುಟ್ಟಲೂ ವೈಜ್ಞಾನಿಕ ಕಾರಣ ನೋಡುವುದಾದರೆ ಇಲ್ಲಿನ ಮಣ್ಣಿನಲ್ಲಿ ಹೆಚ್ಚು ಗಂಧಕದ ಅಂಶವಿರುವುದರಿಂದ ಈ ಅಪರೂಪದ ಮರಗಳು ಇಲ್ಲಿ ಹುಟ್ಟಿವೆ ಎನ್ನಲಾಗುತ್ತಿದೆ. ಜೊತೆಗ ಈ ಮರಗಳನ್ನ ಜನಸಾಮಾನ್ಯರು ನೆಟ್ಟು ಬೆಳೆಸುವುದು ಅಸಾಧ್ಯ, ಈ ಮರದಡಿಯಲ್ಲಿ ವಿಹರಿಸಿದರೆ ಆರೋಗ್ಯ ವೃದ್ಧಿಯಾಗುತ್ತಂತೆ. ಅದಕ್ಕಾಗಿಯೇ ಸುತ್ತಮುತ್ತಲಿನ ಜನ, ಭಕ್ತರು ತಮ್ಮ ವಿಶ್ರಾಂತಿ ಸಮಯದಲ್ಲಿ ಇಲ್ಲಿಗೆ ಬಂದು ವಿಹರಿಸುತ್ತಾರೆ.
ಇದನ್ನೂ ಓದಿ:ಶಿವರಾತ್ರಿಗೆ ನರ್ತನ್ ಹೊಸ ಸಿನಿಮಾ ಘೋಷಣೆ; ‘ಭೈರತಿ ರಣಗಲ್’ ಆಗಿ ಬಂದ ಶಿವರಾಜ್ಕುಮಾರ್
ಶಿವರಾತ್ರಿ ಹಬ್ಬದಂದು ಕಲ್ಮುರುಡಿ ಮಠದತ್ತ ಭಕ್ತ ಸಾಗರ
ಶಿವರಾತ್ರಿಯ ಹಬ್ಬದಂದು ಜಾಗರಣೆ ಮಾಡುವ ಭಕ್ತರು ಶಿವನಿಗೆ ಬಿಲ್ವಪತ್ರೆಯನ್ನ ಸಮರ್ಪಿಸಲು ಹಾತೊರೆಯುತ್ತಾರೆ. ಎಲ್ಲೆಲ್ಲಿಂದಲೋ ಬಿಲ್ವಪತ್ರೆಯನ್ನ ತಂದು ಶಿವನಿಗೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಮಾಡಿದ ಪಾಪಗಳೆಲ್ಲವೂ ಪರಿಹಾರವಾಗುತ್ತೆ ಎನ್ನುವುದು ಭಕ್ತರ ನಂಬಿಕೆ. ಮೂರು ಎಲೆಗಳನ್ನ ಹೊಂದಿರುವ ಅಪರೂಪದ, ಅತೀ ಶ್ರೇಷ್ಠವೆನಿಸಿಕೊಂಡಿರುವ ಬಿಲ್ವಪತ್ರೆ ಕಲ್ಮುರುಡಿ ಮಠದಲ್ಲಷ್ಟೆ ಕಾಣಸಿಗುತ್ತದೆ. ಇದಕ್ಕಾಗಿಯೇ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಕೊಯ್ಯಲು ಭಕ್ತರ ದಂಡೇ ಕಲ್ಮುರುಡಿ ಮಠಕ್ಕೆ ಹರಿದುಬರುತ್ತದೆ.
ಬಿಲ್ವಪತ್ರೆಗಾಗಿ ಮುಗಿಬೀಳುವ ಭಕ್ತರು
ಶಿವರಾತ್ರಿಗೂ ಒಂದೆರಡು ದಿನಗಳ ಮುನ್ನವೇ ಇಲ್ಲಿನ ವನದಲ್ಲಿ ಬಿಲ್ವಪತ್ರೆಯನ್ನ ಕೊಯ್ಯುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗೆ ಕೊಯ್ದ ಬಿಲ್ವಪತ್ರೆಗಳನ್ನ ಮನೆಗಳಿಗೆ ಕೊಂಡೊಯ್ದು ಶೇಖರಣೆ ಮಾಡಿಟ್ಟು. ಶಿವರಾತ್ರಿಯ ದಿನದಂದು ಶಿವನಿಗೆ ಸಮರ್ಪಿಸುತ್ತಾರೆ. ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿರುವ ಕಲ್ಮುರುಡಿ ಮಠಕ್ಕೆ ಕೇವಲ ಚಿಕ್ಕಮಗಳೂರಿನ ಭಕ್ತರಷ್ಟೆ ಅಲ್ಲದೆ ರಾಜ್ಯದ ಮೂಲೆ-ಮೂಲೆಗಳಿಂದಲೂ ಭಕ್ತ ಸಾಗರವೇ ಹರಿದು ಬರುತ್ತದೆ. ಸಖರಾಯಪಟ್ಟಣ ಸುತ್ತಮುತ್ತಲಿನ ಗ್ರಾಮಸ್ಥರು ಯಾವುದೇ ಕೆಲಸ ಮಾಡಬೇಕಾದರೂ ಕಲ್ಮುರುಡೇಶ್ವರ ಪ್ರಸಾದ ಪಡೆದು, ಅನುಮತಿ ಕೇಳಿಯೇ ಮುಂದಿನ ಹೆಜ್ಜೆ ಇಡುವುದು ವಾಡಿಕೆಯಾಗಿದೆ. ಈ ಕ್ಷೇತ್ರದಲ್ಲಿ ಮರುಳಸಿದ್ದೇಶ್ವರರೂ ಐಕ್ಯವಾಗಿರುವುದರಿಂದ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ, ಕಾರ್ತೀಕ ಮಾಸದಲ್ಲಿ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಇಲ್ಲಿನ ಕಲ್ಮುರುಡೇಶ್ವರನಿಗೆ ಭಕ್ತರು ಬಿಲ್ವಪತ್ರೆಯನ್ನ ಸಮರ್ಪಿಸಿದರೆ, ನಿತ್ಯವೂ ಇವನಿಗೆ ಬಿಲ್ವಪತ್ರೆಯಿಂದಲೇ ಅಭಿಷೇಕ.
ಇದನ್ನೂ ಓದಿ:Mahashivratri: ಮಹಾಶಿವರಾತ್ರಿ ಹಿನ್ನೆಲೆ ನಾಡಿನ ವಿವಿಧ ಶಿವಾಲಯಗಳ ದರ್ಶನ: ಫೋಟೋ ಇಲ್ಲಿವೆ
ಪ್ರಸಾದ ರೂಪದಲ್ಲಿ ಬಿಲ್ವಪತ್ರೆ
ಬಿಲ್ವಪತ್ರೆಯನ್ನೇ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡುವುದು ಇಲ್ಲಿನ ಮತ್ತೊಂದು ವಿಶೇಷ. ಬಿಲ್ವಪತ್ರೆ ವನದಲ್ಲಿರುವ ಪತ್ರೆಯನ್ನ ಕೊಯ್ದು ಇತರರಿಗೆ ದಾನ ಮಾಡಿದರೆ ಒಳಿತಾಗುತ್ತೆಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ಚಿಕ್ಕಮಗಳೂರು, ಕಡೂರು ಸೇರಿದಂತೆ ಸುತ್ತಮುತ್ತಲಿನ ಜನ ವಾರಕ್ಕೊಮ್ಮೆ ಬಂದು ಪತ್ರೆ ಕೊಯ್ದು ದೇವಾಲಯ ಹಾಗೂ ನೆರೆಹೊರೆಯವರಿಗೆ ದಾನ ಮಾಡುತ್ತಾರೆ. ಶಿವರಾತ್ರಿಯ ದಿನದಂದು ಇಲ್ಲಿಗೆ ಬರುವ ಭಕ್ತರು ಬಿಲ್ವಪತ್ರೆ ವನದಲ್ಲಿಯೇ ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ. ನೈಸರ್ಗಿಕವಾಗಿ ಬೆಳೆದಿರುವ ಬಿಲ್ವಪತ್ರೆ ವನ ವರ್ಷ ಕಳೆದಂತೆ ಸಮೃದ್ಧಿಯಾಗುತ್ತಿದೆ. ಬೇರೆಡೆ ಪಾಲನೆ-ಪೋಷಣೆ ಮಾಡಿದರೂ ಬೆಳೆಯದ ಬಿಲ್ವಪತ್ರೆ ಮರಗಳು ಈ ನೆಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೆಳೆದು ನಿಂತಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.
ಇಷ್ಟಾರ್ಥ ಸಿದ್ಧಿಸುವ ಕಲ್ಮುರುಡೇಶ್ವರ
ಶಿವರಾತ್ರಿ ಬಂದರೆ ನವವಧುವಿನಂತೆ ಎಲೆಯುದುರಿ ಹಚ್ಚಹಸುರಿನಿಂದ ಕಂಗೊಳಿಸುವ ಪತ್ರೆಯ ದಳಗಳ ಜೊತೆಗೆ ವನದ ಪಕ್ಕದಲ್ಲೇ ಭಕ್ತರ ಇಷ್ಟಾರ್ಥ ಸಿದ್ಧಿಸುವ ಗುರು ಕಲ್ಮುರುಡೇಶ್ವರ ಸ್ವಾಮಿ ದೇವಸ್ಥಾನವೂ ಇದೆ. ಚಿಕ್ಕಮಗಳೂರಿನಿಂದ ಕಡೂರಿಗೆ ಸಾಗುವ ಮಾರ್ಗದಲ್ಲಿರುವ ಕಲ್ಮುರುಡಿ ಮಠದಲ್ಲಿ ಗುರು ಮರುಳಸಿದ್ಧರ ಜೀವಂತ ಸಮಾಧಿಯ ಮೇಲೆ ಬಸವಲಿಂಗ ಪ್ರತಿಷ್ಠಾಪನೆ ಮಾಡಲಾಗಿದ್ದು. ತ್ರಿಕಾಲ ಪೂಜೆ ನಡೆಯುತ್ತದೆ. ಈ ಸುತ್ತ ಮುತ್ತಲಿನ ಜನರು ಗುರುಗಳ ಗದ್ದುಗೆ ಮುಂದೆ ಕುಳಿತು ಅಪ್ಪಣೆ ಕೇಳುವ ಪದ್ದತಿಯುಂಟು. ಅತ್ಯಂತ ಜಾಗೃತ ಮತ್ತು ಆಧ್ಯಾತ್ಮಿಕ ಔನ್ನತ್ಯದ ಸ್ಥಳ ಇದಾಗಿದ್ದು, ಇಲ್ಲಿಗೆ ಬಂದು ಬೇಡಿಕೊಂಡರೆ ಭಕ್ತರ ಸಕಲ ಇಷ್ಟಾರ್ಥಗಳೂ ಫಲಿಸುತ್ತವೆ ಎನ್ನುವ ನಂಬಿಕೆ ಇಂದಿಗೂ ಕೂಡಾ ಇಲ್ಲಿನ ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ.
ವರದಿ: ಅಶ್ವಿತ್ ಟಿವಿ9 ಚಿಕ್ಕಮಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Sat, 18 February 23