ಚಿಕ್ಕಮಗಳೂರು, ಸೆಪ್ಟೆಂಬರ್ 4: ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ‘ಕೇವಲ ಫೌಂಡೇಷನ್’ ಹೆಸರಿನಲ್ಲಿ ಯೋಗ ತರಬೇತಿ ನೀಡುತ್ತಿದ್ದ ಯೋಗ ಗುರು ಪ್ರದೀಪ್ ಉಲ್ಲಾಳ್ (53) ಅತ್ಯಾಚಾರ ಎಸಗಿದ್ದಾರೆ ಎಂದು ಅನಿವಾಸಿ ಭಾರತೀಯ ವೈದ್ಯೆ ಮಾಡಿರುವ ಆರೋಪ ಸಂಬಂಧ ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರತಿ ‘ಟಿವಿ9’ಗೆ ಲಭ್ಯವಾಗಿದೆ. ಇದರ ಪ್ರಕಾರ, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ಪೂರ್ವ ಜನ್ಮದ ಕಥೆ ಹೇಳಿ ಯೋಗ ಗುರು ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ.
ಪೂರ್ವ ಜನ್ಮದಲ್ಲಿ ನಾವಿಬ್ಬರು ಪ್ರೇಮಿಗಳು ಎಂದು ಸಂತ್ರಸ್ತೆಯನ್ನು ನಂಬಿಸುತ್ತಿದ್ದ ಯೋಗ ಗುರು ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಪ್ರದೀಪ್ ಉಲ್ಲಾಳ್ಗೆ ವಿದೇಶದಲ್ಲಿ ನೂರಾರು ಶಿಷ್ಯರಿದ್ದಾರೆ. ಸಂತ್ರಸ್ತೆ ಎನ್ಆರ್ಐ ವೈದ್ಯೆ ಪ್ರದೀಪ್ ಜೊತೆ 2020 ರಿಂದ ಸಂಪರ್ಕದಲ್ಲಿದ್ದರು.
ಸದ್ಯ ವಿದೇಶಿ ಮಹಿಳೆಯರ ಮೇಲೆ ಯೋಗ ಗುರುವಿನಿಂದ ಅತ್ಯಾಚಾರ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಚಿನ್ ನೇತೃತ್ವದ ತಂಡದಿಂದ ತನಿಖೆ ನಡೆಯುತ್ತಿದೆ. ಗಂಭೀರ ಪ್ರಕರಣವಾಗಿ ಪರಿಗಣಿಸಿ ವಿಶೇಷ ತನಿಖೆ ನಡೆಸಲಾಗುತ್ತಿದ್ದು, ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಪ್ರಕರಣ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ‘ಕೇವಲ ಫೌಂಡೇಷನ್’ ಮೂಲಕ ಪ್ರದೀಪ್ ಯೋಗ ತರಬೇತಿ ನೀಡುತ್ತಿದ್ದಾರೆ. ಇಲ್ಲಿಗೆ ದೇಶ, ವಿದೇಶದ ಅನೇಕ ಮಂದಿ ಬಂದು ಯೋಗ ಶಿಕ್ಷಣ ಪಡೆಯುತ್ತಿದ್ದಾರೆ. ಆನ್ಲೈನ್ ಮೂಲಕವೂ ಯೋಗ ತರಬೇತಿ ನೀಡಲಾಗುತ್ತಿತ್ತು. ಪಂಜಾಬ್ ಮೂಲದ, ಅನಿವಾಸಿ ಬಾರತೀಯ ವೈದ್ಯೆಯೊಬ್ಬರು 2020ರಲ್ಲಿ ಅಮೇರಿಕಾದಲ್ಲಿ ವೃತ್ತಿಯಲ್ಲಿದ್ದ ಸಂದರ್ಭ ಅವರ ಸ್ನೇಹಿತರಿಂದ ‘ಕೇವಲ ಯೋಗ ಕೇಂದ್ರ’ದ ಬಗ್ಗೆ ಮಾಹಿತಿ ಪಡೆದು ಅಲ್ಪ ಹಣ ನೀಡಿ ಆನ್ ಲೈನ್ ತರಗತಿಗೆ ಸೇರಿಕೊಂಡಿದ್ದರು. ಬಳಿಕ ಇಲ್ಲಿಗೆ ಬಂದು ತರಗತಿಯಲ್ಲಿ ಪಾಲ್ಗೊಳ್ಳುವಂತೆ ಪ್ರದೀಪ್ ಹೇಳಿದ್ದಾರೆ. ಮಾತು ನಂಬಿ ಚಿಕ್ಕಮಗಳೂರಿಗೆ ಬಂದು ಆತನ ಕೇಂದ್ರಕ್ಕೆ ಭೇಟಿ ನೀಡಿ 20 ದಿನ ತರಗತಿಯಲ್ಲಿ ವೈದ್ಯೆ ಭಾಗಿಯಾಗಿದ್ದಾರೆ. ಈ ವೇಳೆ ಆ ವೈದ್ಯೆಯ ಜತೆಗೆ ಸಲುಗೆ ಬೆಳೆಸಿಕೊಂಡು ಇಬ್ಬರು ಕೂಡಾ ಆತ್ಮೀಯರಾಗಿದ್ದಾರೆ. ದೈಹಿಕವಾಗಿಯೂ ಆಕೆಯನ್ನು ಪ್ರದೀಪ್ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ.
ನಂತರ 2020-21ರಲ್ಲೂ ವೈದ್ಯೆ ಇಲ್ಲಿಗೆ ಬಂದು ಯೋಗ ತರಗತಿ ಸೇರಿದ್ದರು. ಈ ವೇಳೆ ಯೋಗದ ಜತೆಗೆ ದೈಹಿಕ ಸ೦ಬ೦ಧವೂ ಮು೦ದುವರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಯೋಗ ಗುರು ಇತರರ ಜತೆಗೂ ಇದೇ ರೀತಿ ಸಂಬಂಧ ಹೊಂದಿದ್ದನೆಂಬ ಆರೋಪ ಕೂಡ ಕೇಳಿಬಂದಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಟ್ರೆಕ್ಕಿಂಗ್ ನಕಲಿ ಟಿಕೆಟ್ ಮಾರಾಟ; DRFO ಸಸ್ಪೆಂಡ್
ಅತ್ಯಾಚಾರದ ಬಗ್ಗೆ ಆರೋಪಿಸಿ ವೈದ್ಯೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಯೋಗ ಗುರುವಿನಿಂದ ನನ್ನ ನಂಬಿಕೆಗೆ ದ್ರೋಹವಾಗಿದೆ. ಬಲವಂತವಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ಇದರ ಆಧಾರದಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ