ಚಿಕ್ಕಮಗಳೂರು ದತ್ತಪೀಠದಲ್ಲಿನ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ: ಮುಸ್ಲಿಂ ಮುಖಂಡರ ಪ್ರತಿಭಟನೆ

| Updated By: ವಿವೇಕ ಬಿರಾದಾರ

Updated on: Nov 21, 2024 | 12:56 PM

ಚಿಕ್ಕಮಗಳೂರಿನ ಬಾಬಾ ಬುಡನ್ ದರ್ಗಾದಲ್ಲಿನ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ ಮಾಡಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿದರು. ಈ ವಿಚಾರವಾಗಿ ಮುಸ್ಲಿಂ ಮುಖಂಡರು ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ. ಈ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಚಿಕ್ಕಮಗಳೂರು ದತ್ತಪೀಠದಲ್ಲಿನ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ: ಮುಸ್ಲಿಂ ಮುಖಂಡರ ಪ್ರತಿಭಟನೆ
ದತ್ತಪೀಠದಲ್ಲಿನ ಗೋರಿಗಳು
Follow us on

ಚಿಕ್ಕಮಗಳೂರು, ನವೆಂಬರ್​ 21: ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿನ (Dattapeeta) ಗೋರಿಗಳಿಗೆ ಅರ್ಚಕರು ಕುಂಕುಮ ಹಚ್ಚಿ, ಪೂಜೆ ಮಾಡಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಆರೋಪ ಮಾಡಿದ್ದಾರೆ. ಘಟನೆ ಖಂಡಿಸಿ ಶಾಖಾದ್ರಿ ಕುಟುಂಬಸ್ಥರು ದರ್ಗಾದ ಎದರು ಪ್ರತಿಭಟನೆ ಮಾಡಿದರು.

ಈ ಸಂಬಂಧ ಶಾಖಾದ್ರಿ ಕುಟುಂಬಸ್ಥರು ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಇನ್ನು, ಈ ಹಿಂದೆ ಸೆಪ್ಟೆಂಬರ್​ನಲ್ಲೂ ಇದೇ ರೀತಿಯಾದ ಘಟನೆ ನಡೆದಿದ್ದು, ಮುಸ್ಲಿಂ ಮುಖಂಡರು ಗ್ರಾಮಾಂತರ ಪೊಲೀಸ್ ‌ಠಾಣೆಯಲ್ಲಿ ದೂರು ನೀಡಿದ್ದರು.

ಈ ಸಂಬಂಧ ವಿಧಾನ ಪರಿಷತ್​ ಸದಸ್ಯ ಸಿ.ಟಿ ರವಿ ಮಾತನಾಡಿ, ದಾಖಲೆಯ ಪ್ರಕಾರ ಅದು ದತ್ತಾತ್ರೇಯ ಸ್ವಾಮಿಗಳಿರುವ ಜಾಗವಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ಗೋರಿ ಕಟ್ಟಿರುವುದು ಅಪರಾಧ. ಮೊದಲು ಗೋರಿಗಳನ್ನು ಎತ್ತಿಕೊಂಡು ಹೋಗಬೇಕು. ಹಿಂದೂಗಳ ಎಂಡೋಮೆಂಟ್​​​ನಲ್ಲಿ ,ದತ್ತಾತ್ರೇಯ ದೇವರ ಹೆಸರಿನ ಜಾಗದಲ್ಲಿ ಗೋರಿ ಕಟ್ಟಿ ಅಪರಾಧ ಮಾಡಲಾಗಿದೆ ಎಂದು ಹೇಳಿದರು.

ಗೋರಿ ಅಂತ ಜಗಳಕ್ಕೆ ಬರುವವರು, ಗೋರಿಗಳನ್ನು ತೆಗೆದುಕೊಂಡು ನಾಗೇನಹಳ್ಳಿಗೆ ಹೋಗಲಿ. ತೆಗೆದುಕೊಂಡು ಹೋಗ ಬೇಕಿರುವುದು ಕುಂಕುಮ ಅಲ್ಲ, ಗೋರಿಗಳನ್ನು. ಬಾಬಾ ಬುಡನ್ ದರ್ಗಾ ನಾಗೇನಹಳ್ಳಿಯ ಸರ್ವೇ ನಂಬರ್ 57ರಲ್ಲಿದೆ. ದತ್ತಾತ್ರೇಯ ಪೀಠ ಸರ್ವೆ ನಂಬರ್​ 198 ರಲ್ಲಿದೆ. ಅವರು ಗೋರಿಗಳನ್ನ ಸರ್ವೇ ನಂಬರ್ 57ರ ಬಾಬಾ ಬುಡನ್ ದರ್ಗಾಕ್ಕೆ ತೆಗೆದುಕೊಂಡು ಹೋಗಲಿ. ಬಾಬಾ ಬುಡನ್ ದರ್ಗಾ ಇರುವ ಜಾಗದಲ್ಲಿ ದತ್ತ ಪಾದುಕೆ ಇದ್ದರೆ ನಾವು ತೆಗೆದುಕೊಂಡು ಹೋಗುತ್ತೇವೆ ಎಂದರು.

ಇದನ್ನೂ ಓದಿ: ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲೂ ವಸ್ತ್ರ ಸಂಹಿತೆ ಜಾರಿಗೆ ಪಟ್ಟು

ಹಿಂದೆ ತಲೆ ಕಡಿಯಲು ಜಿಹದ್ ಕರೆ ಕೊಡುತ್ತಿದ್ದರು. ಈಗ ರಾಜಕೀಯ ಹಿಡಿಯಲು ಜಿಹಾದ್ ಕರೆ ಕೊಟ್ಟಿದ್ದಾರೆ. ಕಾಲಕ್ಕೆ ತಕ್ಕಂತೆ ಹಿಂದೂ ಸಮಾಜ ಉಳಿಯಲು ಇದನ್ನ ಎದುರಿಸಲೇಬೇಕು. ನಾವು ಉಳಿದುಕೊಳ್ಳಬೇಕು ಅಂದರೇ ಸಂಘಟಿತರಾಗಬೇಕು. ದೇಶದ ಮುಕ್ಕಾಲು ಭಾಗ ಇವರನ್ನು ನಂಬಿ ಕಳೆದುಕೊಂಡಿದ್ದೇವೆ. ಸಿಂಧೂ, ಗಾಂಧಾರ ಇಡೀ ಬಂಗಾಳದಲ್ಲಿ ಸನಾತನ ಧರ್ಮವೇ ಇತ್ತು ಎಂದು ತಿಳಿಸಿದರು.

ಸಂಪೂರ್ಣ ಹಿಂದೂ ಪೀಠಕ್ಕೆ ಆಗ್ರಹಿಸಿ ಡಿಸೆಂಬರ್ 6 ರಿಂದ 14 ರ ವರೆಗೆ ನಡೆಯಲಿರುವ ದತ್ತ ಜಯಂತಿ ನಡೆಯಲಿದೆ. ಇದಕ್ಕೂ ಈ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಿಂದೂ‌ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:51 pm, Thu, 21 November 24