
ಚಿಕ್ಕಮಗಳೂರು, ಜುಲೈ 04: ಆಲ್ದೂರು ಪೊಲೀಸ್ ಠಾಣೆಯ ASI ಶಿವಕುಮಾರ್ ಕಿರುಕುಳ ನೀಡಿದ್ದು, ನ್ಯಾಯ ಕೊಡಿಸುವಂತೆ ವ್ಯಕ್ತಿಯೋರ್ವ ಚಿಕ್ಕಮಗಳೂರು (Chikkamagaluru) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ (SP Office) ಎದುರೇ ವಿಷಸೇವಿಸಿದ್ದಾರೆ. ಆಲ್ದೂರು ಪಟ್ಟಣದ ಖಾಲಿದ್ ಹುಸೇನ್ ಡೆತ್ನೋಟ್ ಹಿಡಿದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಖಾಲಿದ್ ಹುಸೇನ್ ಅವರನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಶಿವಮೊಗ್ಗ: ಸಾಲಬಾಧೆಗೆ ಬೇಸತ್ತು ರೈತ ವಿಷ ಸೇವಿಸಿ ಮೃತಪಟ್ಟಿದ್ದಾನೆ. ತಂದೆಯ ಸ್ಥಿತಿ ಕಂಡು ಅಪ್ರಾಪ್ತ ಮಗಳು ಕೂಡ ವಿಷ ಸೇವಿಸಿದ್ದಾಳೆ. ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಬಾಳೂರು ಗ್ರಾಪಂ ವ್ಯಾಪ್ತಿಯ ನೇರಲ ಮನೆ ಗ್ರಾಮದಲ್ಲಿ ಘಟನೆ ನಡೆದಿದೆ. ರೈತ ವೆಂಕಟೇಶ್ (49) ಮೃತ ದುರ್ದೈವಿ. ತಂದೆ ವಿಷ ಸೇವಿಸಿದ್ದಕ್ಕೆ ಮನನೊಂದ ಅಪ್ರಾಪ್ತ ಮಗಳು ತಾನೂ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದಾಳೆ. ಕಳೆದ ರಾತ್ರಿ ಊಟ ಮಾಡುವಾಗ ಸಾಲಗಾರರ ಕಾಟ ತಾಳಲಾಗುತ್ತಿಲ್ಲ ಎಂದು ವೆಂಕಟೇಶ್ ಜಗಳವಾಡಿದ್ದಾರೆ. ಈ ವೇಳೆ ವೆಂಕಟೇಶ್ ಅವರನ್ನು ಅವರ ತಂದೆ ಸಮಾಧಾನ ಪಡಿಸಿದ್ದಾರೆ.
ಬಳಿಕ ವೆಂಕಟೇಶ್ ಮನೆಯಿಂದ ಹೊರಗಡೆ ಹೋಗಿ ವಿಷ ಸೇವನೆ ಮಾಡಿ ಬಂದಿದ್ದಾರೆ. ತಂದೆ ವಿಷ ಕುಡಿದ ವಿಷಯ ತಿಳಿಯುತ್ತಲೇ ಅದೇ ಬಾಟಲಿಯಲ್ಲಿ ಉಳಿದಿದ್ದ ವಿಷವನ್ನು ಮಗಳು ಸಹಿತ ಕುಡಿದಿದ್ದಾಳೆ. ಕೂಡಲೇ ಇಬ್ಬರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವೆಂಕಟೇಶ್ ಮೃತಪಟ್ಟಿದ್ದಾರೆ. ಅಪ್ರಾಪ್ತ ಮಗಳು ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ
ಕೋಲಾರ: ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತಪಟ್ಟಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದ ಬಳಿ ಇರುವ ತೋಟದಲ್ಲಿ ಘಟನೆ ನಡೆದಿದೆ. ಮಂಗಮ್ಮ (46) ಮೃತ ಮಹಿಳೆ. ಮೇವು ಕತ್ತರಿಸುವ ವೇಳೆ ಅಚಾನಕ್ಕಾಗಿ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆ: ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಮಹಿಳೆ ಮೃತಪಟ್ಟಿದ್ದಾರೆ. ಮೂವರಿಗೆ ಗಾಯವಾಗಿದೆ. ಹಮೀದಾ ಗುಡವಾಳ (32) ಮೃತ ದುರ್ದೈವಿ. ಗಾಯಾಳುಗಳನ್ನು ಇಳಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 5:54 pm, Fri, 4 July 25