
ಚಿಕ್ಕಮಗಳೂರು, ಆಗಸ್ಟ್ 26: ಚಿಕ್ಕಮಗಳೂರು (Chikkamagaluru) ತಾಲ್ಲೂಕಿನ ಪಶ್ಚಿಮ ಘಟ್ಟಗಳ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯ್ಯನಗಿರಿ (Mullaiyanagari), ಸೀತಾಳಯ್ಯನಗಿರಿಗೆ ಎರಡು ದಿನ (ಆ.26 ಮತ್ತು 27) ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ರಜೆ ನಿಮಿತ್ತ ಹೆಚ್ಚಿನ ಪ್ರವಾಸಿಗರು ಈ ಬೆಟ್ಟಗಳಿಗೆ ತೆರಳುತ್ತಾರೆ. ಆದರೆ, ಇದೇ ಸಂದರ್ಭದಲ್ಲಿ ಗೌರಿ-ಗಣೇಶ ಹಬ್ಬದ ನಿಮಿತ್ತ ಸ್ಥಳೀಯರು ಇಂದು ಮತ್ತು ನಾಳೆ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿಯಲ್ಲಿನ ಮುಳ್ಳಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡುತ್ತಾರೆ. ಹೀಗಾಗಿ, ಪ್ರವಾಸಿಗರ ದಟ್ಟಣೆಯಿಂದ ಪೂಜೆಗೆ ವಿಳಂಬವಾಗಬಾರದೆಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ: ಹಿಂದೂ ಸಂಘಟನೆಗಳಿಂದ ಉತ್ಖನಕ್ಕೆ ಪಟ್ಟು
ಶ್ರೀ ಮೇಲುಗದ್ದುಗೆ ಮುಚ್ಚಯ್ಯನಗಿರಿ, ಶ್ರೀ ಸೀತಾಳಯ್ಯನಗಿರಿ ಹಾಗೂ ಶ್ರೀ ಗುರು ನಾರುಕಂತೆಮಠ ದೇವಾಲಯಗಳಿಗೆ ಕಸಬಾ ಹೋಬಳಿ, ವಸ್ತಾರೆ, ಅವತಿ, ಅಂಬಳೆ ಮತ್ತು ಜಾಗರ ಹೋಬಳಿ 40ಕ್ಕೂ ಹೆಚ್ಚು ಗ್ರಾಮಸ್ಥರು ದೇವಾಲಯಕ್ಕೆ ಬೇಟಿ ನೀಡಿ ಹಿಂದಿನ ಸಂಪ್ರಾದಯದಂತೆ ಪೂಜೆ, ಹಣ್ಣು ಕಾಯಿ ಮಾಡಿಸಿಕೊಂಡು ಬರುವುದು ಪಾರಂಪರಿಕ ಆಚರಣೆಯಾಗಿರುತ್ತದೆ. ಆದ್ದರಿಂದ ಗಿರಿಭಾಗದ ಪ್ರವಾಸಿ ತಾಣಗಳಿಗೆ ಸ್ಥಳೀಯರಿಗೆ, ಗ್ರಾಮಸ್ಥರಿಗೆ ಮಾತ್ರ ಅವಕಾಶ ಇದೆ. ಈ ಸ್ಥಳಗಳಲ್ಲಿ ಈಗಾಗಲೇ ರೆಸಾರ್ಟ್ / ಹೋಂಸ್ಟೇ ಗಳಲ್ಲಿ ಬುಕ್ಕಿಂಗ್ ಮಾಡಿಕೊಂಡವರುಗಳನ್ನು ಹೊರತುಪಡಿಸಿ ಇನ್ನು ಇತರೆ ಯಾವುದೇ ಜಿಲ್ಲೆ, ರಾಜ್ಯದ ಪ್ರವಾಸಿಗರು / ಯಾರ್ತಾರ್ಥಿಗಳು ಬರುವುದನ್ನು ನಿಬರ್ಂಧಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಗೌರಿ ಗಣೇಶ ಹಬ್ಬ, ಈದ್ ಮಿಲಾದ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಚಿಕ್ಕಮಗಳೂರು ಸೇರಿದಂತೆ 10 ಪಟ್ಟಣದಲ್ಲಿ 26 ಸ್ಥಳಗಳನ್ನು ಅತೀ ಸೂಕ್ಷ್ಮ ಪ್ರದೇಶಗಳನ್ನು ಪೊಲೀಸರು ಗುರುತಿಸಿದ್ದಾರೆ. ಬ್ಯಾನರ್, ಬಂಟಿಂಗ್ಸ್, ಬಾವುಟ ಕಟ್ಟಲು, ಮೆರವಣಿಗೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಪಟಾಕಿ ಹೊಡೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
Published On - 10:46 am, Tue, 26 August 25