
ಚಿಕ್ಕಮಗಳೂರು, ಮೇ 16: ಸರ್ಕಾರದ (Karnataka Government) ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯ (Primary School Teachers Transfer) ಆದೇಶದಲ್ಲಿನ ನಿಯಮಗಳನ್ನು ಗಾಳಿಗೆ ತೂರಿ ಬಿಇಒ (BEO) ಬರೋಬ್ಬರಿ 60ಕ್ಕೂ ಹೆಚ್ಚು ಜನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮೂಲ ಕಾರ್ಯಸ್ಥಳದ ಶಾಲೆಯಿಂದ ಬೇರೊಂದು ಶಾಲೆಗೆ ನಿಯೋಜನೆ ಮಾಡಿರುವ ಆರೋಪ ಕೇಳಿಬಂದಿದೆ. ರಾಜ್ಯದ ಶಿಕ್ಷಣ ಇಲಾಖೆಯಲ್ಲಿಯೇ ಇದು ಅತಿ ದೊಡ್ಡ ಹಗರಣವೆನಿಸಿಕೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಸಿದ್ದರಾಜು ನಾಯ್ಕ್ ಅವರು ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ನಿಯಮ ಬಾಹಿರವಾಗಿ 6ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರುಗಳನ್ನ ಅವರಿಗೆ ಬೇಕಾದ ಶಾಲೆಗಳಿಗೆ ನಿಯೋಜನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡಿ ಸಮಗ್ರ ತನಿಖೆ ನಡೆಸುವಂತೆ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ ಚಿಕ್ಕಮಗಳೂರು ಡಿಡಿಪಿಐ ಜಿ.ಕೆ ಪುಟ್ಟರಾಜು ತನಿಖೆಗೆ ಸಮಿತಿ ಒಂದನ್ನು ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ. ಕಡೂರು ಬಿಇಒ ಸಿದ್ದರಾಜು ನಾಯಕ್ ಮೇಲಿನ ಆರೋಪದ ಬೆನ್ನು ಬಿದ್ದ ಸಮಿತಿ ಇಂಚಿಂಚೂ ಮಾಹಿತಿ ಕಲೆಹಾಕಿದ್ದು ಬರೋಬ್ಬರಿ 57 ಪುಟಗಳ ವರದಿಯನ್ನು ಸಿದ್ಧಪಡಿಸಿ ಡಿಡಿಪಿಐ ಅವರ ಮುಂದೆ ಸಲ್ಲಿಕೆ ಮಾಡಿದೆ.
ಕಡೂರು ಬಿಇಒ ಮೇಲಿನ ಆರೋಪದ ಬೆನ್ನುಬಿದ್ದ ತನಿಖಾ ಸಮಿತಿ ಸುದೀರ್ಘ ತನಿಖೆ ನಡೆಸಿದ್ದು, ತನಿಖೆ ಯಲ್ಲಿ ಬಿಇಒ ಸಿದ್ದರಾಜು ನಾಯ್ಕ್ ನಿಯಮ ಬಾಹಿರವಾಗಿ 60ಕ್ಕೂ ಹೆಚ್ಚು ಶಿಕ್ಷಕರನ್ನು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ನಿಯೋಜನೆ ಮಾಡಿ ಆದೆಶ ಮಾಡಿದೆ. ಅವರ ಆದೇಶದಂತೆ ನಿಯೋಜನೆಗೊಂಡ ಶಿಕ್ಷಕರುಗಳು ತಮ್ಮ ಮೂಲ ಕಾರ್ಯಕ್ಷೇತ್ರ ಬಿಟ್ಟು ಬಿಇಒ ನಿಯೋಜನೆಗೊಂಡ ಶಾಲೆಗಳಿಗೆ ಹಾಜರಾಗಿರುವುದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ನಿಯೋಜನೆ ಮಾಡಲು ಡಿಡಿಪಿಐಗೆ ಅಧಿಕಾರವಿಲ್ಲ. ಹೀಗಿರುವಾಗ ಬಿಇಒ ಹೇಗೆ ನಿಯೋಜನೆ ಮಾಡಿದರು ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಇನ್ನು, ಸಮಿತಿ ಕೊಟ್ಟ ವರದಿ ನೋಡಿ ದಂಗಾದ ಡಿಡಿಪಿಐ ಪುಟ್ಟರಾಜು ಅವರು ಸರ್ಕಾರಕ್ಕೆ ಸಮಿತಿ ನೀಡಿದ ವರದಿಯನ್ನು ಶಿಫಾರಸ್ಸು ಮಾಡಿದೆ. ಬಿಇಒ ಸಿದ್ದರಾಜ್ ನಾಯ್ಕ್ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಶಿಫಾರಸ್ಸು ಮಾಡಲಾಗುತ್ತೆ ಎಂದಿದ್ದಾರೆ. ಇಷ್ಟೆಲ್ಲ ಅಕ್ರಮ ನಡೆಸಿರುವ ಬಿಇಒ ಅವರನ್ನ ಕೂಡಲೇ ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿಬಂದಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಬೀಗ
ಒಟ್ಟಿನಲ್ಲಿ ಹಳ್ಳಿ ಮಕ್ಕಳಿಗೆ ಶಿಕ್ಷಣ ಸಿಗಲಿ ಅನ್ನೋ ಉದ್ದೆಶದಿಂದ ಸರ್ಕಾರ ಪ್ರಾಥಮಿಕ ಶಾಲೆಯ ಶಿಕ್ಷಕರುಗಳಿಗೆ ಎಲ್ಲ ಸೌಲಭ್ಯಗಳನ್ನೂ ಕೊಟ್ಟು ಅವರು ಕೇಳಿದಲ್ಲಿ ವರ್ಗಾವಣೆ ಮಾಡಿಕೊಟ್ಟರು ಕೂಡ ಇಂತಹ ಕಳ್ಳಾಟಗಳು ನಡೆಯುತ್ತಿವೆ. ಕೇವಲ ಒಂದೇ ಒಂದು ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲೇ ಇಷ್ಟೋಂದು ದೊಡ್ಡ ಮಟ್ಟದ ಹಗರಣ ನಡೆದಿದೆ ಎಂದಾದರೇ ಇಡೀ ರಾಜ್ಯದಲ್ಲಿ ಇನ್ನೆಷ್ಟರ ಮಟ್ಟಿಗೆ ಶಿಕ್ಷಕರ ನಿಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರಬಹುದೆಂಬುದರ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕಿದೆ. ಒಬ್ಬ ಬಿಇಓ ಮಾಡಿದ ಈ ಕೆಲಸಕ್ಕೆ ಇಡೀ ಶಿಕ್ಷಣ ಇಲಾಖೆಯೇ ತಲೆ ತಗ್ಗಿಸುವಂತಾಗಿರುವುದು ಮಾತ್ರ ಸುಳ್ಳಲ್ಲ.
Published On - 9:50 pm, Fri, 16 May 25