ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಜಯಂತಿ; ಅರ್ಚಕ ಸೇರಿದಂತೆ ಐವರಿಗೆ ಅಂಗರಕ್ಷಕರ ನೇಮಕ

ಡಿಸೆಂಬರ್ 17 ರಂದು ದತ್ತ ಜಯಂತಿಗೆ ಚಾಲನೆ ನೀಡಲಾಗಿದೆ. ವಿಶ್ವಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ದತ್ತಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಲಾಗಿದ್ದು, 10 ದಿನಗಳ ಕಾಲ ದತ್ತಜಯಂತಿ ಆಚರಣೆ ನಡೆಯಲಿದೆ. ದತ್ತ ಜಯಂತಿ ಆಚರಣೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಈಗಾಗಲೇ ಹೈಅಲರ್ಟ್ ಘೋಷಿಸಲಾಗಿದೆ. ಇದೀಗ ಇಬ್ಬರು ಅರ್ಚಕರು ಸೇರಿದಂತೆ ಐವರಿಗೆ ಅಂಗರಕ್ಷಕರನ್ನು ನೇಮಿಸಲಾಗಿದೆ.

ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಜಯಂತಿ; ಅರ್ಚಕ ಸೇರಿದಂತೆ ಐವರಿಗೆ ಅಂಗರಕ್ಷಕರ ನೇಮಕ
ದತ್ತ ಜಯಂತಿ ಹಿನ್ನೆಲೆ ಅರ್ಚಕ ಸೇರಿದಂತೆ ಐವರಿಗೆ ಅಂಗರಕ್ಷಕರ ನೇಮಕ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: Digi Tech Desk

Updated on:Dec 19, 2023 | 10:42 AM

ಚಿಕ್ಕಮಗಳೂರು, ಡಿ.19: ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ (Inam Dattatreya Baba Budangiri Swami Dargah) ದತ್ತ ಜಯಂತಿ (Datta Jayanti) ಆಚರಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಇಬ್ಬರು ಅರ್ಚಕರು ಸೇರಿದಂತೆ ಐವರಿಗೆ ಅಂಗರಕ್ಷರನ್ನ ನೇಮಿಸಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆದೇಶ ಹೊರಡಿಸಿದ್ದಾರೆ..

ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಇಬ್ಬರು ಅರ್ಚಕರಾದ ಶ್ರೀಧರ್ ಪೂಜಾರ್, ಶಿವಾರಂ, ಇಬ್ಬರು ಮುಜಾವರ್​ಗಳಾದ ಸೈಯದ್ ಅಖಿಲ್ ಪಾಷ, ಇಸ್ಮಾಯಿಲ್​ ಹಾಗೂ ವ್ಯವಸ್ಥಾಪನ ಸಮಿತಿ ಮುಸ್ಲಿಂ ಸದಸ್ಯ ಭಾಷಾ ಅವರಿಗೆ ಒಬ್ಬಬ್ಬೊ ಅಂಗರಕ್ಷಕರನ್ನು ನೇಮಿಸಲಾಗಿದೆ.

ದತ್ತ ಜಯಂತಿ ಆಚರಣೆ ಹಿನ್ನೆಲೆ 15 ದಿನಗಳ ಕಾಲ ಐವರ ಭದ್ರತೆಗಾಗಿ ಗನ್​ಮ್ಯಾನ್​ಗಳನ್ನು ನೇಮಕ ಮಾಡಲಾಗಿದೆ. ದಿನದ 24 ಗಂಟೆಗಳ ಕಾಲವೂ ಭದ್ರತೆ ನೀಡಲಾಗುತ್ತದೆ. ಅರ್ಚಕರ ಮೂಲ ವಿಳಾಸ, ಚಿಕ್ಕಮಗಳೂರಿನ ನಿವಾಸಿಗಳ ಬಗ್ಗೆ ಗೌಪ್ಯತೆ ಕಾಪಾಡಲು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: ದತ್ತ ಜಯಂತಿ ಸಂಭ್ರಮ, ಕಾಫಿನಾಡು ಕೇಸರಿಮಯ: ಮಹಿಳೆಯರಿಂದ ಬೃಹತ್ ಸಂಕೀರ್ತನಾ ಯಾತ್ರೆ ಫೋಟೋಸ್ ಇಲ್ಲಿವೆ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇರುವ ದತ್ತಪೀಠ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಜಯಂತಿ ನಡೆಸಲಾಗುತ್ತಿದೆ. ಈ ದತ್ತ ಜಯಂತಿಗೆ ಡಿಸೆಂಬರ್ 17 ರಂದು ಚಾಲನೆ ನೀಡಲಾಗಿದೆ. ಡಿ.26 ರ ವರೆಗೆ ನಡೆಯಲಿರುವ ದತ್ತಜಯಂತಿಗೆ ವಿಶ್ವಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ದತ್ತಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಸಿ.ಟಿ.ರವಿ ಸೇರಿದಂತೆ ಜಿಲ್ಲೆಯಾದ್ಯಂತ 4 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ದಾರೆ.

ದತ್ತ ಜಯಂತಿ ಆಚರಣೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮಾಲಾಧಾರಿಗಳು ಡಿಸೆಂಬರ್ 26ರಂದು ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ರಾಜ್ಯದ ಮೂಲೆಮೂಲೆಯಿಂದ 30,000ಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಪಾದುಕೆ ದರ್ಶನ ಪಡೆದು ಹೋಮ ಹವನ ಮಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 am, Tue, 19 December 23