ಚಿಕ್ಕಮಗಳೂರು: ಕಾಲುವೆ ನೀರಿನಲ್ಲಿ ಆಟವಾಡುವಾಗ ಆಯತಪ್ಪಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ನಡೆದಿದೆ. ರವಿ(31), ಅನನ್ಯ(17), ಶಾಮವೇಣಿ(16) ಮೃತ ದುರ್ದೈವಿಗಳು. ರವಿ ಮೂಲತಃ ಲಕ್ಕವಳ್ಳಿ ನಿವಾಸಿ. ಅನನ್ಯ ಮತ್ತು ಶಾಮವೇಣಿ ರವಿಯ ಸಹೋದರಿಯರ ಮಕ್ಕಳು. ಅನನ್ಯ ಮೂಲತಃ ಶಿವಮೊಗ್ಗ, ಶಾಮವೇಣಿ ನಂಜನಗೂಡಿನವರು. ರಜೆ ನಿಮಿತ್ತ ಅನನ್ಯ ಮತ್ತ ಶಾಮವೇಣಿ ಲಕ್ಕವಳ್ಳಿ ಸಂಬಂಧಿ ಮನೆಗೆ ಬಂದಾಗ ಘಟನೆ ಸಂಭವಿಸಿದೆ. ರವಿ ಮೃತದೇಹ ಪತ್ತೆಯಾಗಿದ್ದು, ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ರಾಜ್ಯದ ಹಲವು ಕಡೆ ಧಾರಾಕಾರ ಮಳೆಯಾಗಿದ್ದು ಭಾರೀ ಅನಾಹುತಗಳು ಸಂಭವಿಸಿವೆ. ಮೈಸೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಹಾನಿಯಾಗಿದೆ. ಹಾಗೂ ರಸ್ತೆಯಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವಕ ಮೃತಪಟ್ಟಿದ್ದಾನೆ. ಮತ್ತೊಂದೆಡೆ ಸಿಡಿಲು ಬಡಿದು ರೈತ ಮೃತಪಟ್ಟಿದ್ದಾನೆ. ಹೀಗೆ ಮೈಸೂರಿನಲ್ಲಿ ಮಳೆಯಿಂದ ಭಾರೀ ಅನಾಹುತಗಳು ಸಂಭವಿಸಿವೆ.
ಇದನ್ನೂ ಓದಿ: ಕೆಲವೇ ಗಂಟೆ ಸುರಿದ ಮಳೆಗೆ ಬೆಂಗಳೂರು ತತ್ತರ; ಎಲ್ಲೆಲ್ಲಿ ಎಷ್ಟು ಪ್ರಮಾಣ ಮಳೆ ಸುರಿದಿದೆ? ಇಲ್ಲಿದೆ ವಿವರ
ಪಿರಿಯಾಪಟ್ಟಣ ತಾಲೂಕಿನ ಬಾರಸೆ ಗ್ರಾಮದಲ್ಲಿ ರಸ್ತೆಯಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ವಾಮಿ(18) ಎಂಬ ಯುವಕ ಸಾವನ್ನಪ್ಪಿದ್ದು ಹರೀಶ್ ಹಾಗೂ ಸಂಜಯ್ ಎಂಬ ಇಬ್ಬರಿಗೆ ಗಾಯಗಳಾಗಿವೆ. ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಮತ್ತೊಂದೆಡೆ ಹುಣಸೂರು ತಾಲೂಕಿನ ಮಂಟಿಕೊಪ್ಪಲು ಗ್ರಾಮದಲ್ಲಿ ಸಿಡಿಲು ಬಡಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಹರೀಶ್ (42) ಮೃತಪಟ್ಟಿದ್ದಾರೆ. ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಗಿದ್ದು ಜಮೀನಿನಲ್ಲಿದ್ದ ಗುಡಿಸಲಿನ ಬಳಿ ರೈತ ಹರೀಶ್ ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹುಣಸೂರು ತಾಲೂಕಿನಲ್ಲಿ ಗಾಳಿ ಮಳೆಗೆ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ. ಗಾಳಿಗೆ ಮನೆಯ ಮೇಲ್ಚಾವಣಿಗೆ ಹಾಕಿದ್ದ ಶೀಟ್ಗಳು ಹಾರಿ ಹೋಗಿವೆ. ಗಾಳಿ ಮಳೆಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಮರಗಳು ಧರೆಗುರುಳಿದ ಪರಿಣಾಮ ವಿದ್ಯುತ್, ರಸ್ತೆ ಸಂಪರ್ಕ ಬಂದ್ ಆಗಿದೆ. ಹನಗೋಡು ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಹನಗೋಡು ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು ರಸ್ತೆ ಸಂಚಾರ ಬಂದ್ ಆಗಿದೆ. ಹೊಸಕೋಟೆ ಗೇಟ್ ಬಳಿ ಬೃಹತ್ ಮರ ಉರುಳಿ ಸಂಚಾರ ಬಂದ್ ಆಗಿದೆ. ಹನಗೋಡು-ಕಿರಂಗೂರು ಹರಳಹಳ್ಳಿ ರಸ್ತೆ ಜಲಾವೃತಗೊಂಡಿದ್ದು ಸಂಚಾರ ಸ್ಥಗಿತಗೊಂಡಿದೆ. ಕಿರಂಗೂರಿನಲ್ಲಿ ಮಳೆಯಿಂದಾಗಿ 4 ಎಕರೆಯಲ್ಲಿ ಬೆಳೆದಿದ್ದ ಜೋಳ ನಾಶವಾಗಿದೆ. ಹಿಂಡಗುಡ್ಲುವಿನಲ್ಲಿ ಮನೆಗೆ ನೀರು ನುಗ್ಗಿ ದವಸ, ಧಾನ್ಯ, ವಸ್ತುಗಳು ನಾಶವಾಗಿವೆ. ಚನ್ನಸೋಗೆ ಗ್ರಾಮದಲ್ಲಿ ಮೇಲ್ಚಾವಣಿಗಳು ಹಾರಿಹೋಗಿ ಮನೆಗಳಿಗೆ ಹಾನಿಯಾಗಿದೆ.
ರಾಜ್ಯದ ಮತ್ತಷ್ಟ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:43 am, Mon, 22 May 23