AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkamagaluru: ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿ ಕಳೇಬರ ಪತ್ತೆ

ಭದ್ರಾ ಹುಲಿ ಸಂರಕ್ಷಿತಾರಣ್ಯದ ಗಂಗೆ ಗಿರಿಯಲ್ಲಿ 8 ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿದೆ. ಹುಲಿಗಳ ನಡುವಿನ ಕಾದಾಟದಿಂದ ನಿತ್ರಾಣಗೊಂಡು ಹುಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ವ್ಯಾಘ್ರಗಳ ಸರಣಿ ಸಾವು ಮುಂದುವರಿದಿದ್ದು, ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಮೈಸೂರು ಮತ್ತು ನಾಗರಹೊಳೆಯಲ್ಲೂ ಇತ್ತೀಚೆಗೆ ಹುಲಿಗಳು ಸಾವನ್ನಪ್ಪಿದ್ದವು.

Chikkamagaluru: ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿ ಕಳೇಬರ ಪತ್ತೆ
ಹುಲಿ ಕಳೇಬರ ಪತ್ತೆ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Jan 07, 2026 | 7:26 AM

Share

ಚಿಕ್ಕಮಗಳೂರು, ಜನವರಿ 07: ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಹೆಬ್ಬೆ ವಲಯ ಅರಣ್ಯದ ಗಂಗೆ ಗಿರಿಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ. ಹುಲಿ ಗಣತಿ ವೇಳೆ 8 ವರ್ಷದ ಗಂಡು ಹುಲಿ ಮೃತಪಟ್ಟಿರೋದು ಬೆಳಕಿಗೆ ಬಂದಿದೆ. ಹುಲಿಗಳ ನಡುವೆ ಕಾದಾಟದ ವೇಳೆ ನಿತ್ರಾಣಗೊಂಡು ಸಾವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, 5-6 ದಿನಗಳ ಹಿಂದೆ ಮೃತಪಟ್ಟ ವ್ಯಾಘ್ರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿಸದೆ. ಸ್ಥಳಕ್ಕೆ ವನ್ಯಜೀವಿ ವಿಭಾಗದ ಅಧಿಕಾರಿಗಳು, ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರವನ್ನು ಅಧಿಕಾರಿಗಳು ಸುಟ್ಟಿದ್ದಾರೆ.

ನಾನಾ ಕಾರಣಗಳಿಂದಾಗಿ ರಾಜ್ಯದಲ್ಲಿ ಹುಲಿಗಳ ಸಾವು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ದುಷ್ಟರ ಅಟ್ಟಹಾಸಕ್ಕೋ, ಅನಾರೋಗ್ಯ ಕಾರಣದಿಂದಲೋ ವ್ಯಾಘ್ರಗಳ ಸರಣಿ ಸಾವು ಮುಂದುವರಿದಿದೆ. ಇತ್ತೀಚೆಗಷ್ಟೇ ಮೈಸೂರು ಮೃಗಾಲಯದಲ್ಲಿ ತಾಯಮ್ಮ ಎಂಬ ಹುಲಿ ಮೃತಪಟ್ಟಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ 4 ವರ್ಷದ 10 ತಿಂಗಳ ವ್ಯಾಘ್ರ, ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿತ್ತು, 2021ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ರಕ್ಷಣೆ ಮಾಡಿದ್ದ ಈ ಹುಲಿಯನ್ನು ಮೈಸೂರು ಮೃಗಾಲಯಕ್ಕೆ ತಂದು ಆರೈಕೆ ಮಾಡಲಾಗಿತ್ತು. ಆದರೆ ರಕ್ತ ಕಣದ ಸಮಸ್ಯೆಯಿಂದ ಬಳಲುತ್ತಿದ್ದ ಹುಲಿ ಆಹಾರ ತ್ಯಜಿಸಿದ್ದ ಕಾರಣ ಪ್ರಾಣ ಕಳೆದುಕೊಂಡಿತ್ತು.

ಇದನ್ನೂ ಓದಿ: ಹುಲಿ ಕಾಟದಿಂದ ಸದ್ಯಕ್ಕಿಲ್ಲ ಮುಕ್ತಿ; ವ್ಯಾಘ್ರಗಳನ್ನು ಹಿಡಿಯಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ ಅರಣ್ಯ ಇಲಾಖೆ

ಮತ್ತೊಂದೆಡೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲೇ ಬಲೆಗೆ ಸಿಲುಕಿ 5 ವರ್ಷದ ಹುಲಿ ಮೃತಪಟ್ಟಿರೋದು ರಾಜ್ಯವ್ಯಾಪಿ ಸುದ್ದಿಯಾಗಿತ್ತು. ದುಬಾರೆ ಅರಣ್ಯದಿಂದ 5 ಕಿ.ಮೀ. ದೂರದಲ್ಲಿರುವ ಎಸ್ಟೇಟ್‌ನಲ್ಲಿ ಮೃತದೇಹವನ್ನು ಸ್ಥಳೀಯರು ಗಮನಿಸಿ ಮಾಹಿತಿ ನೀಡಿದ್ದರು. ಹುಲಿ ದೇಹದ ಮೇಲಿನ ಗಾಯಗಳನ್ನು ಗಮನಿಸಿದಾಗ ಎರಡು ದಿನಗಳ ಹಿಂದೆ ಇದು ಬಲೆಗೆ ಬಿದ್ದಿತ್ತು ಎನ್ನುವುದನ್ನು ಅಧಿಕಾರಿಗಳು ದೃಢಪಡಿಸಿದ್ದರು. ಒಟ್ಟಿನಲ್ಲಿ ಅರಣ್ಯ ಇಲಾಖೆಯ ಸಾಕಷ್ಟು ಮುಂಜಾಗೃತೆಯ ನಡುವೆಯೂ ಹುಲಿಗಳ ಸಾವಿಗೆ ಮಾತ್ರ ಬ್ರೇಕ್​​ ಬಿದ್ದಿಲ್ಲ. ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿವ ಕರ್ನಾಟಕದಲ್ಲಿ ಮೇಲಿಂದ ಮೇಲ ವರದಿಯಾಗುತ್ತಿರುವ ವ್ಯಾಘ್ರಗಳ ಸಾವು ಪ್ರಾಣಿ ಪ್ರಿಯರಲ್ಲಿ ನಿಜಕ್ಕೂ ಆತಂ ಸೃಷ್ಟಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.