ಚಿಕ್ಕಮಗಳೂರು: ಈರುಳ್ಳಿ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದ ಹಿನ್ನೆಲೆಯಲ್ಲಿ ರೈತ ಆಕ್ರೋಶ ವ್ಯಕ್ತಪಡಿಸಿದ್ದು, ಟ್ರ್ಯಾಕ್ಟರ್ನಿಂದ 2 ಎಕರೆ ಉಳುಮೆ ಮಾಡಿ ಈರುಳ್ಳಿ ಬೆಳೆ ನಾಶ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಗೊಂಡೆದಹಳ್ಳಿ ಗ್ರಾಮದಲ್ಲಿ ರೈತ ದೇವರಾಜ್ ಬೆಳೆದ ಬೆಳೆ ನಾಶಪಡಿಸಿ ಬೇಸರ ಹೊರಹಾಕಿದ್ದಾರೆ.
ನಿನ್ನೆ ಅಜ್ಜಂಪುರದಲ್ಲಿ ನಡೆದ ಪ್ರತಿಭಟನೆಯಲ್ಲೂ ರೈತ ದೇವರಾಜ್ ಭಾಗಿಯಾಗಿದ್ದರು. ಇಂದು ಬೆಲೆ ಕುಸಿತದಿಂದ ನೊಂದು ಬೆಳೆ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದಾರೆ. ಸಾಲ ಸೋಲ ಮಾಡಿ ಈರುಳ್ಳಿ ಬೆಳೆ ಬೆಳೆದಿದ್ದೇವೆ. ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ರೈತ ದೇವರಾಜ್ ಮನವಿ ಮಾಡಿಕೊಂಡಿದ್ದಾರೆ.
ನೊಂದ ರೈತರು ಹೀಗೆ ತಾವು ಬೆಳೆದ ಬೆಳೆಯನ್ನು ನಾಶ ಪಡಿಸಿರುವುದು ಇದೇ ಮೊದಲೇನಲ್ಲ. ಇಂತಹ ಅನೇಕ ಘಟನೆಗಳು ಈ ಮೊದಲು ಕೂಡ ನಡೆದಿದೆ. ಅವುಗಳ ಚಿತ್ರಣ ಈ ಕೆಳಗಿನಂತಿದೆ.
ಕೊಪ್ಪಳ: ಟೊಮೆಟೋ ದರ ಕುಸಿತ; ಬೆಳೆದ ಟೊಮೆಟೋವನ್ನೆಲ್ಲಾ ಬೀದಿಗೆ ಸುರಿದು ರೈತರಿಂದ ಆಕ್ರೋಶ
ಟೊಮೆಟೋ ದರ ಕುಸಿತ ಹಿನ್ನೆಲೆ ಟೊಮೆಟೋ ರಸ್ತೆಗೆ ಚೆಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೊಪ್ಪಳ ಜಿಲ್ಲೆಯ ಬೆಳವಿನಾಳ ಎಪಿಎಮ್ಸಿ ಮಾರುಕಟ್ಟೆ ಬಳಿ ನಡೆದಿದೆ. ಕೆಜಿ ಟೊಮೆಟೋವನ್ನು ಹತ್ತು ರೂಪಾಯಿಗೂ ಯಾರು ಕೇಳುತ್ತಿಲ್ಲ. ಬಾಡಿಗೆನೆ 40 ರೂಪಾಯಿ ಕೊಟ್ಟಿದ್ದೇವೆ. ಹೀಗಾಗಿ ಎಪಿಎಮ್ಸಿಗೆ ತಂದ ಅಷ್ಟು ಟೊಮೆಟೋ ರಸ್ತೆಗೆ ಚೆಲ್ಲಿದ್ದೇವೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ: ದಾಳಿಂಬೆ ಬೆಳೆಗೆ ದುಂಡಾಣು ಅಂಗ ಮಾರಿ ರೋಗಬಾಧೆ; ಟ್ರ್ಯಾಕ್ಟರ್ನಿಂದ ಬೆಳೆ ನಾಶಕ್ಕೆ ಮುಂದಾದ ಬಳ್ಳಾರಿ ರೈತ
ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿತ್ತು. ಹೀಗಾಗಿ ಎಲ್ಲಾ ವ್ಯಾಪಾರ, ವ್ಯವಹಾರಗಳು ಬಂದ್ ಆಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಜುಲೈ 5 ರಿಂದ ಲಾಕ್ಡೌನ್ ಮುಕ್ತಾಯವಾಗಿದೆ. ಅದರಂತೆ ಎಲ್ಲಾ ಚಟುವಟಿಕೆಗಳು ಪುನರಾರಂಭವಾಗಿದ್ದು, ರೈತರು ಕೂಡ ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಅಂತೆಯೇ ವಿಜಯನಗರದಲ್ಲಿ ಕೂಡ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ನಂದಿಹಳ್ಳಿ ಗ್ರಾಮದ ರೈತ ಮಾತ್ರ ಬೆಳೆ ರೋಗದಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ವಿಜಯನಗರ ಜಿಲ್ಲೆಯ ಕಂಠಿ ಕಂಟೆಪ್ಪ ಎಂಬುವವರ ಸುಮಾರು ಐದು ಎಕರೆ ಹೊಲದಲ್ಲಿ ಬೆಳೆದಿದ್ದ ದಾಳಿಂಬೆ ಗಿಡಗಳಿಗೆ ದುಂಡಾಣು ಅಂಗ ಮಾರಿ ರೋಗಬಾಧೆ ಎದುರಾಗಿದ್ದು, ರೋಗಬಾಧೆಯಿಂದ ದಾಳಿಂಬೆ ಗಿಡಗಳು ಸಂಪೂರ್ಣ ಹಾಳಾಗಿ ಹೋಗಿದೆ. ಹೀಗಾಗಿ, ಟ್ರ್ಯಾಕ್ಟರ್ ಸಹಾಯದೊಂದಿಗೆ ತೋಟಗಾರಿಕೆ ಬೆಳೆಗಾರ ಕಂಠಿ ಕಂಟೆಪ್ಪನವರು, ದಾಳಿಂಬೆ ಗಿಡಗಳನ್ನ ನಾಶ ಮಾಡಲು ಮುಂದಾಗಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆಯೇ ತನ್ನ ಐದು ಎಕರೆ ಹೊಲದಲ್ಲಿ ದಾಳಿಂಬೆ ಗಿಡಗಳನ್ನು ಬೆಳೆಯಲಾಗಿದೆ. ಅಂದಾಜು 14 ಲಕ್ಷ ರೂಪಾಯಿ ವರೆಗೂ ಈ ಬೆಳೆಗೆ ಖರ್ಚು ಮಾಡಲಾಗಿದೆ. ಕೇವಲ 1.20 ಲಕ್ಷ ರೂಪಾಯಿಗಳವರೆಗೆ ಮಾತ್ರ ಆದಾಯ ಬಂದಿದೆ. ಮನುಷ್ಯನ ನಡುವಿನ ಎತ್ತರಕ್ಕೆ ಬೆಳೆದು ನಿಂತಿದ್ದ ಈ ದಾಳಿಂಬೆ ಗಿಡಗಳಿಗೆ ದುಂಡಾಣು ಅಂಗ ಮಾರಿ ರೋಗಬಾಧೆ ಕಾಣಿಸಿಕೊಂಡ ಪರಿಣಾಮ ಈ ದಾಳಿಂಬೆ ಬೆಳೆನಾಶಕ್ಕೆ ಮುಂದಾಗಿದ್ದೇನೆ ಎಂದು ಬೆಳೆಗಾರ ಕಂಠಿ ಕಂಟೆಪ್ಪ ತಿಳಿಸಿದ್ದಾರೆ.
ಕಳೆದ ಆರೇಳು ತಿಂಗಳಲ್ಲಿ ಮಳೆಯ ಪ್ರಮಾಣ ಜಾಸ್ತಿಯಾಗಿರುವುದರಿಂದ ಗಿಡದಲ್ಲಿ ಬೆಳೆದಿದ್ದ ದಾಳಿಂಬೆ ಕಾಯಿ ಮೇಲೆ ಕೆಂಪು ಚುಕ್ಕೆಯಕಾರದ ರೋಗ ಕಾಣಿಸಿಕೊಂಡು ಫಸಲು ಅಷ್ಟೇನು ಸರಿಯಾಗಿರಲಿಲ್ಲ. ಹೀಗಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಕಾರಣಕ್ಕೆ ಬೆಳೆ ನಾಶದ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಬೆಳೆಗಾರ ಕಂಠಿ ಕಂಟೆಪ್ಪ ಬೇಸರ ವ್ಯಕ್ತಿಪಡಿಸಿದ್ದಾರೆ.
ಇದನ್ನೂ ಓದಿ:
ದಾಳಿಂಬೆ ಬೆಳೆಗೆ ದುಂಡಾಣು ಅಂಗ ಮಾರಿ ರೋಗಬಾಧೆ; ಟ್ರ್ಯಾಕ್ಟರ್ನಿಂದ ಬೆಳೆ ನಾಶಕ್ಕೆ ಮುಂದಾದ ಬಳ್ಳಾರಿ ರೈತ
ಲಾಕ್ಡೌನ್ ಎಫೆಕ್ಟ್: ಸೇವಂತಿ ಹೂವಿನ ಬೆಳೆ ನಾಶ ಮಾಡಿದ ಹಾವೇರಿ ರೈತ
Published On - 12:50 pm, Wed, 22 September 21