ಚಿಕ್ಕಮಗಳೂರು: 3 ಲೀಟರ್ ಪೆಟ್ರೋಲ್ ಗಿಫ್ಟ್ ನೀಡಿ ವಧು- ವರರಿಗೆ ಶಾಕ್ ಕೊಟ್ಟ ಸ್ನೇಹಿತರು!

ಚಿಕ್ಕಮಗಳೂರು: 3 ಲೀಟರ್ ಪೆಟ್ರೋಲ್ ಗಿಫ್ಟ್ ನೀಡಿ ವಧು- ವರರಿಗೆ ಶಾಕ್ ಕೊಟ್ಟ ಸ್ನೇಹಿತರು!
ವಧು- ವರರಿಗೆ ಪೆಟ್ರೋಲ್ ಗಿಫ್ಟ್

Chikkamagalur News: ನನ್ನ ಯೋಚನೆಯನ್ನ ಅರ್ಥೈಸಿಕೊಂಡು ಪೆಟ್ರೋಲ್ ಗಿಫ್ಟ್ ನೀಡಿದ ಸ್ನೇಹಿತರಿಗೆ ಧನ್ಯವಾದ. ಸ್ನೇಹಿತರ ಉಡುಗೊರೆ ಸಂತಸ ತಂದಿದೆ. ಇನ್ನಾದ್ರೂ ಪೆಟ್ರೋಲ್-ಡಿಸೇಲ್ ಬೆಲೆ ಕಡಿಮೆಯಾಗಲಿ ಅಂತಾ ಆಶಿಸುತ್ತೇನೆ ಎಂದು ಸಚಿನ್ ಹೇಳಿದ್ದಾರೆ.

TV9kannada Web Team

| Edited By: ganapathi bhat

Oct 15, 2021 | 8:29 PM

ಚಿಕ್ಕಮಗಳೂರು: ವಿವಾಹ ಮಹೋತ್ಸವದ ವೇಳೆ ನವಜೋಡಿಗಳಿಗೆ ಗಿಫ್ಟ್ ನೀಡೋದು ಸಾಮಾನ್ಯ. ಬಹುತೇಕರು ಹಣವನ್ನ ಕವರ್​ನಲ್ಲಿ ಹಾಕಿ ಉಡುಗೊರೆ ನೀಡಿದ್ರೆ ಇನ್ನೂ ಕೆಲವರು ಗೃಹಪಯೋಗಿ ವಸ್ತುಗಳು, ಬಟ್ಟೆ ಈ ರೀತಿಯ ವಸ್ತುಗಳನ್ನ ವಧುವರರಿಗೆ ನೀಡಿ ಹಾರೈಸುತ್ತಾರೆ. ಆದ್ರೆ ಇಂದು ಕಾಫಿನಾಡಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಸ್ನೇಹಿತರೆಲ್ಲರೂ ಸೇರಿ ಪೆಟ್ರೋಲ್ ನೀಡುವ ಮೂಲಕ ನವಜೋಡಿಗೆ ಸೇರಿದಂತೆ ನೆರೆದಿದ್ದ ಜನರಿಗೆ ಅಚ್ಚರಿ ಮೂಡಿಸಿದ್ದಾರೆ. ಹೌದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಸಚಿನ್ ಮರ್ಕಲ್ ಹಾಗೂ ವೈಷ್ಣವಿ ವಿವಾಹ ಮಹೋತ್ಸವ ನಡೆಯಿತು. ಈ ವೇಳೆ ಸಚಿನ್ ಸ್ನೇಹಿತರು 3 ಲೀಟರ್ ಪೆಟ್ರೋಲ್ ನೀಡಿ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿಗೆ ವಿಶ್ ಮಾಡಿದ್ದಾರೆ.

ಗಗನಕ್ಕೇರಿದ ಪೆಟ್ರೋಲ್-ಡಿಸೇಲ್ ಬೆಲೆ, ದುಬಾರಿ ಗಿಫ್ಟ್ ಪಟ್ಟಿಗೆ ಪೆಟ್ರೋಲ್ ಸೇರ್ಪಡೆ ಇದೀಗ ಪೆಟ್ರೋಲ್-ಡಿಸೇಲ್ ಬೆಲೆ ಪ್ರತಿದಿನ ಏರಿಕೆಯಾಗ್ತಿದೆ. ಜನಸಾಮಾನ್ಯರು ಪೆಟ್ರೋಲ್-ಡಿಸೇಲ್ ಖರೀದಿಸಲು ಪರದಾಟ ಪಡುವಂತಾಗಿದೆ. ವಾಹನದಲ್ಲಿ ಒಂದೊಂದು ಕಿಲೋ ಮೀಟರ್ ಓಡಾಟ ನಡೆಸಬೇಕು ಅಂದ್ರೂ ಚಿಂತಿಸಬೇಕಾದ ಅವಶ್ಯಕತೆ ಎದುರಾಗಿದೆ. ಈಗಾಗಲೇ ಪೆಟ್ರೋಲ್-ಡಿಸೇಲ್ ಬೆಲೆಯನ್ನ ಇಳಿಸುವಂತೆ ಜನಸಾಮಾನ್ಯರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿವೆ. ಏನೇ ಆದ್ರೂ ಕೂಡ ಏರಿಕೆಯಾಗಿರುವ ಇಂಧನ ಬೆಲೆ ಕಡಿಮೆಯಾಗಿಲ್ಲ. ಹಾಗಾಗಿ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಕುರಿತು ವರ ಸಚಿನ್ ಆಗಾಗ ತನ್ನ ಸ್ನೇಹಿತರ ಬಳಿ ಅಸಮಾಧಾನವನ್ನ ಹೊರುಹಾಕುತ್ತಲೇ ಇದ್ದರು. ಇದನ್ನು ಕಂಡಿದ್ದ ಸ್ನೇಹಿತರು ತಮ್ಮ ನೆಚ್ಚಿನ ಗೆಳೆಯನ ಮದುವೆ ದಿನ ಪೆಟ್ರೋಲ್ ಉಡುಗೊರೆ ನೀಡಿದ್ದಾರೆ. ಆದಷ್ಟು ಬೇಗ ಪೆಟ್ರೋಲ್-ಡಿಸೇಲ್ ಬೆಲೆ ಕಡಿಮೆಯಾಗಲಿ ಎಂದು ಆಶಿಸಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯನಾಗಿರುವ ಸಚಿನ್​ಗೆ ಉಪ್ಪಿ ಪ್ರಜಾಕೀಯವೇ ಮಾದರಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯತ್ ಸದಸ್ಯನಾಗಿರೋ ಮದುವೆ ವರ ಸಚಿನ್, ಕಳೆದ ವರ್ಷ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ಜಿಲ್ಲೆಯಲ್ಲಿ ಅತಿ ಕಿರಿಯ ವಯಸ್ಸಿನಲ್ಲಿಯೇ ಗ್ರಾಮ ಪಂಚಾಯತ್ ಸದಸ್ಯನ ಪಟ್ಟ ಗಿಟ್ಟಿಸಿಕೊಂಡ ಹೆಗ್ಗಳಿಕೆ ಸಚಿನ್​ದು. ಪ್ರಜಾಕೀಯದ ಆಶಯದಂತೆ ದನಿಯಿಲ್ಲದವರ ದನಿಯಾಗಿ ಕೆಲಸ ಮಾಡ್ತಾ ಬಂದಿದ್ದೇನೆ ಎನ್ನುವ ಸಚಿನ್ ಈಗಾಗಲೇ ತನ್ನ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಪ್ರದೇಶದಲ್ಲಿ ಅನೇಕ ಜನಪರ ಕೆಲಸ ಮಾಡುತ್ತಾ ಬಂದಿದ್ದಾರೆ. ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇತ್ತೀಚಿಗಂತೂ ಬೆಲೆ ಏರಿಕೆ ವಿರುದ್ಧ ಸ್ನೇಹಿತರ ಬಳಿ ತೀವ್ರ ಅಸಮಾಧಾನ ಹೊರಹಾಕುತ್ತಿದ್ದ ಅವರು, ಅಡುಗೆ ಅನಿಲ, ಅಡುಗೆ ಎಣ್ಣೆ, ತರಕಾರಿ ಸೇರಿದಂತೆ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ರೋಶ ಹೊರಹಾಕಿದ್ದರು. ಸಚಿನ್​ರ ಈ ಭಾವವನ್ನು ಗಮನಿಸಿದ ಸ್ನೇಹಿತರು ದುಬಾರಿ ಪೆಟ್ರೋಲ್ ಗಿಫ್ಟ್ ನೀಡುವ ಮೂಲಕ ನವಜೋಡಿಗೆ ಶಾಕ್ ಕೊಟ್ಟಿದ್ದಾರೆ.

ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆ ಮಾತನಾಡಿದ ಸಚಿನ್, ಸ್ನೇಹಿತರು ಪೆಟ್ರೋಲ್ ಉಡುಗೊರೆ ನೀಡಿದ್ದನ್ನ ಕಂಡು ನಾನು ಅಚ್ಚರಿಪಟ್ಟೆ. ಹೀಗೆ ಗಿಫ್ಟ್ ನೀಡುವ ಮೂಲಕ ಪೆಟ್ರೋಲ್ ದುಬಾರಿ ಉಡುಗೊರೆ ಅನ್ನೋದನ್ನ ನನ್ನ ಸ್ನೇಹಿತರು ತೋರಿಸಿಕೊಟ್ಟಿದ್ದಾರೆ. ನನ್ನ ಯೋಚನೆಯನ್ನ ಅರ್ಥೈಸಿಕೊಂಡು ಪೆಟ್ರೋಲ್ ಗಿಫ್ಟ್ ನೀಡಿದ ಸ್ನೇಹಿತರಿಗೆ ಧನ್ಯವಾದ. ಸ್ನೇಹಿತರ ಉಡುಗೊರೆ ಸಂತಸ ತಂದಿದೆ. ಇನ್ನಾದ್ರೂ ಪೆಟ್ರೋಲ್-ಡಿಸೇಲ್ ಬೆಲೆ ಕಡಿಮೆಯಾಗಲಿ ಅಂತಾ ಆಶಿಸುತ್ತೇನೆ ಎಂದಿದ್ದಾರೆ.

ವರದಿ: ಪ್ರಶಾಂತ್, ಟಿವಿ9 ಕನ್ನಡ, ಚಿಕ್ಕಮಗಳೂರು

ಇದನ್ನೂ ಓದಿ: Petrol Price Today: ಇಂದು ಸಹ ಏರಿಕೆಯಾದ ಇಂಧನ ದರ; ದೆಹಲಿಯಲ್ಲಿ 105 ರೂ. ದಾಟಿ ಮುನ್ನುಗ್ಗಿದ ಲೀಟರ್ ಪೆಟ್ರೋಲ್ ಬೆಲೆ

ಇದನ್ನೂ ಓದಿ: ಚಿಕ್ಕಮಗಳೂರು: ಮಾರುಕಟ್ಟೆಯಲ್ಲಿ ಬೆಲೆ ಕುಸಿತ; ಟ್ರ್ಯಾಕ್ಟರ್​ನಿಂದ 2 ಎಕರೆ ಉಳುಮೆ ಮಾಡಿ ಈರುಳ್ಳಿ ಬೆಳೆ ನಾಶ

Follow us on

Related Stories

Most Read Stories

Click on your DTH Provider to Add TV9 Kannada