ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ ಅವಾಂತರ; ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಸಾಲು ಸಾಲು ಗುಡ್ಡ ಕುಸಿತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 28, 2024 | 7:44 PM

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ನಿಂತರೂ ಅವಾಂತರಗಳ ಸರಮಾಲೆಗಳು ಕಡಿಮೆಯಾಗಿಲ್ಲ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಸುರಿದ ಮಳೆಯಿಂದ ಸಾಲು ಸಾಲು ಗುಡ್ಡ ಕುಸಿತವಾಗಿದೆ. ಚಿಕ್ಕಮಗಳೂರು ದತ್ತಪೀಠ ತೆರಳುವ ಮಾರ್ಗ ಮಧ್ಯೆ ರಸ್ತೆ ಕುಸಿದಿದ್ದು ದತ್ತಪೀಠಕ್ಕೆ ಸಂಪರ್ಕ ಕಳೆದು ಕೊಳ್ಳುವ ಆತಂಕ ಒಂದು ಕಡೆಯಾದರೆ, ಮತ್ತೊಂದು ಕಡೆ ಬಿರುಗಾಳಿ ಹೊಡೆತಕ್ಕೆ ಮರಗಳು ಉರುಳಿ 2000 ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಬಿರುಗಾಳಿ ಮಲೆನಾಡು ಜನರ ನಿದ್ದೆಗೆಡಿಸಿದೆ.

ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ ಅವಾಂತರ; ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಸಾಲು ಸಾಲು ಗುಡ್ಡ ಕುಸಿತ
ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ ಅವಾಂತರ
Follow us on

ಚಿಕ್ಕಮಗಳೂರು, ಜು.28: ಕಾಫಿನಾಡು ಚಿಕ್ಕಮಗಳೂರು(Chikkamagaluru)ಜಿಲ್ಲೆಯಾದ್ಯಂತ ಆರ್ಭಟಿಸುತ್ತಿದ್ದ ಮಳೆ ಕೊಂಚ ವಿರಾಮ‌ ನೀಡಿದೆ. ಆದ್ರೆ, ಮಳೆ ನಿಂತರೂ ಬಿರುಗಾಳಿ ಮಳೆಯಿಂದ ಅವಾಂತರಗಳ ಸರಮಾಲೆಗಳೇ ಸೃಷ್ಟಿಯಾಗಿದೆ. ಹೌದು, ಜುಲೈ ಮಳೆ ಆರ್ಭಟಕ್ಕೆ ಜಿಲ್ಲೆಯಾದ್ಯಂತ 100 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಇನ್ನು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಸಾಲು ಸಾಲು ‌ಗುಡ್ಡ ಕುಸಿತವಾಗಿದ್ದು, ಮುಳ್ಳಯ್ಯನಗಿರಿ ತೆರಳುವ ಮಾರ್ಗದ ಹತ್ತಾರು ಕಡೆ ಗುಡ್ಡ ಕುಸಿದಿದ್ರೆ ಚಿಕ್ಕಮಗಳೂರಿನಿಂದ‌ ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ಚಂದ್ರದ್ರೋಣ ಪರ್ವತದ ‌ಸಾಲಿನ ಕವಿಕಲ್ ಗಂಡಿ ಬಳಿ ರಸ್ತೆ ಕುಸಿದು ನೂರು ಅಡಿ ಪ್ರಪಾತಕ್ಕೆ ಬಿದ್ದಿದೆ. ಇದರಿಂದ ಸಂಪೂರ್ಣ ರಸ್ತೆ ಕುಸಿಯುವ ಆತಂಕ ಸೃಷ್ಟಿಯಾಗಿದೆ.

ಚಿಕ್ಕಮಗಳೂರು ದತ್ತಪೀಠ ಮಾರ್ಗದಲ್ಲಿ KSRTC, ಖಾಸಗಿ ‌ಬಸ್ ಸೇವೆ ಸ್ಥಗಿತ

ಮುಂಜಾಗ್ರತಾ ‌ಕ್ರಮವಾಗಿ ಚಿಕ್ಕಮಗಳೂರು ದತ್ತಪೀಠ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ KSRTC, ಖಾಸಗಿ ‌ ಬಸ್ ಸೇವೆಯನ್ನ ನಿಲ್ಲಿಸಿದೆ. ರಸ್ತೆ ಕುಸಿತವಾದ್ರೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮಹಲ್, ಅತ್ತಿಗುಂಡಿ ಮಾಣಿಕಾಧಾರ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಡಿತವಾಗಲಿದೆ. ಗುಡ್ಡ ,ರಸ್ತೆ ಕುಸಿಯುತ್ತಿರುವ ಹಿನ್ನೆಲೆ ಚಂದ್ರದ್ರೋಣ ಪರ್ವತದ ‌ಸಾಲಿನಲ್ಲಿ ಪ್ರವಾಸಿಗರನ್ನ ಜುಲೈ ‌ 31 ರ ವರೆಗೂ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರಗಳು ಬಿದ್ದು ಸಂಚಾರ ಸ್ಥಗಿತ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಿರುಗಾಳಿ ‌ಸಾಲು ಸಾಲು ಅವಘಡಗಳ ಮಾಡುತ್ತಿದೆ. ವೇಗವಾಗಿ ಬಿಸುತ್ತಿರುವ ಬಿರುಗಾಳಿ ಹೊಡೆತಕ್ಕೆ ಜಿಲ್ಲೆಯಾದ್ಯಂತ ಸಾವಿರಾರು ಮರಗಳು ‌ಉರುಳಿ ಬಿದ್ದಿದ್ದು, ಮೆಸ್ಕಾಂ ಇಲಾಖೆಗೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದೆ. 2000 ಕ್ಕೂ ಅಧಿಕ ವಿದ್ಯುತ್ ಕಂಬಗಳು, ಲೈನ್​ಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬ ,ಲೈನ್​ಗಳ ಮೇಲೆ ಮರ ಬಿಳುತ್ತಿರುವ ಪರಿಣಾಮ ಕಂಬಗಳು ಮುರಿದಿದ್ದು, ಮಲೆನಾಡು ಭಾಗದ ಗುಡ್ಡಗಾಡಿನ ಗ್ರಾಮಗಳಿಗೆ ವಿದ್ಯುತ್ ಇಲ್ಲದೆ ಜನರು ಪರದಾಡುತ್ತಿದ್ದಾರೆ.

ಇಂಧನ ಸಚಿವ ಕೆ.ಜೆ ಜಾರ್ಜ್ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು , ನಾಳೆ‌‌‌ ಮೆಸ್ಕಾಂ‌ ಇಲಾಖೆ ಸಿಬ್ಬಂದಿ ಸೇರಿದಂತೆ ಜಿಲ್ಲಾಡಳಿತದ ಜೊತೆ ಸಭೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಸಾಲು ‌ಸಾಲು ಅವಾಂತರಗಳೇ ಸೃಷ್ಟಿಯಾಗಿದ್ದು ಜನ್ರು ಕಂಗಾಲಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ