AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರಗಳು ಬಿದ್ದು ಸಂಚಾರ ಸ್ಥಗಿತ

ಕರ್ನಾಟಕದಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು ಕರಾವಳಿ ಕರ್ನಾಟಕ, ಮಲೆನಾಡು, ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ವರ್ಷಧಾರೆ ಸುರಿಯುತ್ತಿದೆ. ಪರಿಣಾಮವಾಗಿ ಹಲವು ಕಡೆ ಅವಾಂತರಗಳು ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಜೋಕಟ್ಟೆ ಬಳಿ ಮನೆ ಕುಸಿದ ಬಾಲಕ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರಗಳು ಬಿದ್ದು ಅವಾಂತರ ಸೃಷ್ಟಿಯಾಗಿದೆ.

ಚಿಕ್ಕಮಗಳೂರು ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರಗಳು ಬಿದ್ದು ಸಂಚಾರ ಸ್ಥಗಿತ
ಚಿಕ್ಕಮಗಳೂರು ಮಂಗಳೂರು ಹೆದ್ದಾರಿಯಲ್ಲಿ ಬೃಹತ್ ಮರ ಬಿದ್ದು ಸಂಚಾರ ಸ್ಥಗಿತ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: Ganapathi Sharma|

Updated on: Jul 25, 2024 | 12:34 PM

Share

ಬೆಂಗಳೂರು, ಜುಲೈ 25: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಮಲೆನಾಡಿನ ಭಾಗದಲ್ಲೂ ಭಾರೀ ಮಳೆ ಆಗುತ್ತಿದ್ದು, ನೂರಾರು ಮರಗಳು ಧರೆಗುರುಳಿವೆ. ಚಿಕ್ಕಮಗಳೂರು ಹಾಗೂ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರಗಳು ಬಿದ್ದು ಅವಾಂತರವೇ ಆಗಿದೆ. NH-73 ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಇದಿಷ್ಟೇ ಅಲ್ಲ, ಮರ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಜೋಕಟ್ಟೆ ಬಳಿ ಮನೆ ಪಕ್ಕದ ತಡೆಗೋಡೆ ಕುಸಿದು ಸಂಭವಿಸಿದ ಅವಘಡದಲ್ಲಿ ಮೂಲ್ಕಿ ಕೊಲ್ನಾಡಿನ ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್(17) ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಪರಿಣಾಮವಾಗಿ ಕುಟುಂಬಸ್ಥರು ಕಣ್ಣೀರು ಹಾಕುವಂತಾಗಿದೆ. ಹೇಗಾದರೂ ಮಾಡಿ ನಮಗೆ ಪರಿಹಾರ ಕೊಡಿಸಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದಿಷ್ಟೇ ಅಲ್ಲ, ಇನ್ನೊಂದು ಮನೆಯ ಮೇಲೆ ಅಡಕೆ ಮರಗಳು ಬಿದ್ದು ಅವಾಂತರ ಆಗಿದೆ. ಮರ ಬಿದ್ದಿದ್ದರಿಂದ ಮನೆಯ ಪಕ್ಕದಲ್ಲಿರೋ ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಮನೆಯ ಕಾಂಪೌಂಡ್ ಕೂಡ ನಾಶವಾಗಿದೆ.

ಹಾಸನ ಜಿಲ್ಲೆಯಲ್ಲಿ ಬಾರಿ ಮಳೆ

ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದೆ. ಬೇಲೂರು ತಾಲ್ಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಕೆರೆ ಒಡೆದು ಕೊಚ್ಚಿಹೋಗಿದ್ದು, ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿ ಹೋಗಿವೆ. ಸುಮಾರು ಹನ್ನೆರಡು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಸಸಿಗಳು ನಾಶವಾಗಿವೆ. ಮಂಜಪ್ಪ, ಚಂದ್ರೇಗೌಡ, ಬಸವರಾಜು, ಸೀತಮ್ಮ, ಯು.ಎಂ.ಇಂದಿರಾ, ಯು.ಡಿ.ಮಂಜುನಾಥ್‌ ಎಂಬುವವರಿಗೆ ಸೇರಿದ ಜಮೀನು ಇದಾಗಿದೆ. ಜಮೀನಿಗೆ ನೀರು ನುಗ್ಗಿದ್ದರಿಂದ ರೈತರು ಕಂಗಾಲಾಗಿದ್ದು, ಆಗಿರುವ ನಷ್ಟಕ್ಕೆ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹ ವ್ಯಕ್ತವಾಗಿದೆ.

ಭಾಗಮಂಡಲ-ತಲಕಾವೇರಿ ರಸ್ತೆ ಸಂಪರ್ಕ ಕಡಿತ

ತಲಕಾವೇರಿ ರಸ್ತೆಯ ಕೋಳಿ ಕಾಡು ಬಳಿ ಬಿರುಗಾಳಿ ಸಹಿತ ಭಾರಿ ಮಳೆಗೆ ಮರ ಉರುಳಿ ಬಿದ್ದು, ಭಾಗಮಂಡಲ-ತಲಕಾವೇರಿ ರಸ್ತೆ ಸಂಪರ್ಕ ಕಡಿತವಾಗಿದೆ. ಸದ್ಯ ಅರಣ್ಯ ಇಲಾಖೆಯಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ: ಪ್ರವಾಹ ಭೀತಿ: ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ

ದಕ್ಷಿಣ‌ ಕೊಡಗಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ‌ಯಾಗುತ್ತಿದ್ದು, ಕುಟ್ಟ, ಟಿ.ಶೆಟ್ಟಿಗೇರಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ರಜೆ ಘೋಷಿಸಿ ವಿರಾಜಪೇಟೆ ಕ್ಷೇತ್ರದ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪಂಚಗಂಗಾ

ಅತ್ತ ಬೆಳಗಾವಿಯಲ್ಲಿ ಪಂಚಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ರೌದ್ರ ನರ್ತನದ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. 43 ಅಡಿಯಷ್ಟು ಗರಿಷ್ಠ ಮಟ್ಟ ಸಾಹೊಂದಿರುವ ಪಂಚಗಂಗಾ ನದಿಯಲ್ಲಿ ಹರಿವು ಈಗಾಗಲೇ 42 ಅಡಿ ತಲುಪಿದೆ. ಪಂಚಗಂಗಾ ನದಿ ನೀರು ಹೆಚ್ಚಾದರೆ ಮಹಾರಾಷ್ಟ್ರದ ಕೊಲ್ಲಾಪುರ ನಗರಕ್ಕೆ ಆತಂಕವಿದೆ. ಈಗಾಗಲೇ ಕೊಲ್ಲಾಪುರ ಜಿಲ್ಲೆಯ 81 ಸೇತುವೆಗಳು ಜಲಾವೃತಗೊಂಡಿವೆ.

ಪಂಚಗಂಗಾ ನದಿ ನೀರು ಈಗಾಗಲೇ ಅಕ್ಕ ಪಕ್ಕದ ಜಮೀನುಗಳಿಗೆ ನುಗ್ಗಿದೆ. ಹೆದ್ದಾರಿ ಮೇಲೆಯೂ ನದಿ ನೀರು ಹರಿಯುತ್ತಿದೆ. ಎರಡು ಅಡಿ ನೀರಲ್ಲೇ ವಾಹನ ಸವಾರರು ಓಡಾಟ ಮಾಡುತ್ತಿದ್ದಾರೆ. ಕೊಲ್ಲಾಪುರ ಜಿಲ್ಲೆಯ ರಾಧಾನಗರ ಡ್ಯಾಮ್ ಶೇಕಡಾ 92ರಷ್ಟು ಭರ್ತಿಯಾಗಿದೆ. ಯಾವುದೇ ಕ್ಷಣದಲ್ಲಿ ನೀರು ಹೊರಕ್ಕೆ ಬಿಡುವ ಸಾದ್ಯತೆ ಇದೆ. ನದಿ ತೀರದ ಜನರು ಆತಂಕದಲ್ಲಿಯೇ ದಿನ ಕಳೆಯುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ