ಕಡೂರು ಯೋಧ ಹುತಾತ್ಮ: ಪಟಾಕಿ ತೆಗೆದುಕೊಂಡು ದೀಪಾವಳಿಗೆ ಬರ್ತೀನಿ ಅಂದಿದ್ದ ಪ್ರೀತಿಯ ಅಪ್ಪ

ಕಡೂರು ಯೋಧ ಹುತಾತ್ಮ: ಪಟಾಕಿ ತೆಗೆದುಕೊಂಡು ದೀಪಾವಳಿಗೆ ಬರ್ತೀನಿ ಅಂದಿದ್ದ ಪ್ರೀತಿಯ ಅಪ್ಪ
ಕಡೂರಿನ ಸಿಆರ್​ಪಿಎಫ್ ಯೋಧ ಶೇಷಪ್ಪ ಅವರ ಪತ್ನಿ ರಾಷ್ಟ್ರಧ್ವಜ ಕೈಲಿ ಹಿಡಿದಾಗ ಭಾವುಕರಾದರು.

ಊರಿಗೆ ಬಂದ ಸೈನಿಕನ ಪಾರ್ಥಿವ ಶರೀರ ನೋಡಿ ಮಕ್ಕಳು, ತಂದೆ-ತಾಯಿ, ಪತ್ನಿಗೆ ಆಕಾಶವೇ ಕೆಳಗೆ ಬಿದ್ದಂತಾಗಿತ್ತು. ಸಾವಿರಾರು ಜನರು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿ ಕಣ್ಣೀರಿನ ವಿದಾಯ ಹೇಳಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Nov 08, 2021 | 10:36 PM

ಚಿಕ್ಕಮಗಳೂರು: ಪಟಾಕಿ ತೆಗೆದುಕೊಂಡು ದೀಪಾವಳಿ ಹಬ್ಬಕ್ಕೆ ಬರುವೆ ಎಂದು ದೂರದ ಜಮ್ಮು ಕಾಶ್ಮೀರದಿಂದ ಒಂದು ವಾರದ ಹಿಂದಷ್ಟೇ ಆ ಯೋಧ ತನ್ನಿಬ್ಬರು ಮಕ್ಕಳಿಗೆ ಕರೆ ಮಾಡಿ ಪ್ರೀತಿಯಿಂದ ಮಾತನಾಡಿದ್ದ. ಇನ್ನೇನು ಹಬ್ಬಕ್ಕೆ ಅಪ್ಪ ಬರ್ತಾರೆ ಅಂತ ಕಾಯುತ್ತಿದ್ದ ಮಕ್ಕಳಿಗೆ ಅದೊಂದು ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ಬರೋಬ್ಬರಿ 20 ವರ್ಷ ಭಾರತಾಂಬೆಯ ಸೇವೆ ಮಾಡಿದ್ದ ಆ ಯೋಧ ಇಂದು ತವರಿಗೆ ಮರಳಿದ್ದು ಹುತಾತ್ಮನಾಗಿ. ಊರಿಗೆ ಬಂದ ಸೈನಿಕನ ಪಾರ್ಥಿವ ಶರೀರ ನೋಡಿ ಮಕ್ಕಳು, ತಂದೆ-ತಾಯಿ, ಪತ್ನಿಗೆ ಆಕಾಶವೇ ಕೆಳಗೆ ಬಿದ್ದಂತಾಗಿತ್ತು. ಸಾವಿರಾರು ಜನರು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿ ಕಣ್ಣೀರಿನ ವಿದಾಯ ಹೇಳಿದರು.

ಕಳೆದವಾರವಷ್ಟೇ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಜಮ್ಮುವಿನಿಂದ ಮನೆಗೆ ಕರೆ ಮಾಡಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬಿಳವಾಲ ಗ್ರಾಮದ ವೀರಯೋಧ ಶೇಷಪ್ಪ ದೀಪಾವಳಿಗೆ ಬರ್ತೀನಿ ಎಂದಿದ್ದರು. ಇನ್ನೇನು ಅಪ್ಪ ಹಬ್ಬಕ್ಕೆ ಬರ್ತಾರೆ ಅಂತ ಗ್ರಾಮದಲ್ಲಿ ಶೇಷಪ್ಪನವರ ಇಬ್ಬರು ಮಕ್ಕಳು ದಿನಗಳನ್ನು ಎಣಿಸುತ್ತಾ ದಾರಿ ನೋಡುತ್ತಿದ್ದರು. ಆದರೆ ವಿಧಿಯಾಟ ಬೇರೆಯಾಗಿತ್ತು. ಕರುನಾಡಿನ ವೀರಯೋಧ ಇಂದು ತನ್ನೂರಾದ ಕಡೂರಿಗೆ ಬಂದಿದ್ದು ಹುತಾತ್ಮನಾಗಿ.

ಎಲ್ಲಿ ನೋಡಿದರೂ ಜನವೋ ಜನ. ಒಂದೆಡೆ ಬೋಲೋ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎನ್ನುವ ಘೋಷಣೆ, ಇನ್ನೊಂದೆಡೆ ಜೈ ಜವಾನ್, ಜೈ ಕಿಸಾನ್, ಶೇಷಪ್ಪ ಅಮರ್ ರಹೇ ಎನ್ನುವ ಪ್ರಾರ್ಥನೆ. ದುಃಖ ತಡೆಹಿಡಿಯಲಾರದೆ ವೀರಯೋಧನ ಮಡದಿ, ತಂದೆ-ತಾಯಿ, ಮಕ್ಕಳು ಅಳುತ್ತಿದ್ದರು. ಈ ದೃಶ್ಯವು ನೆರೆದಿದ್ದ ಸಾವಿರಾರು ಜನರ ಕರುಳು ಹಿಂಡುವಂತಿತ್ತು.

Sheshappa

ಜಮ್ಮುವಿನಲ್ಲಿ ಮೃತಪಟ್ಟ ಕಡೂರು ಯೋಧ ಶೇಷಪ್ಪ

ಸಾವಿರಾರು ಸೈನಿಕರಿಗೆ ತರಬೇತಿ ಕೊಟ್ಟ ಯೋಧ ತನ್ನ ಸಾವು ಗೆಲ್ಲಲಿಲ್ಲ ಜಮ್ಮುವಿನ ಬಿಎಸ್ಎಎಫ್ ಮೆಕ್ಯಾನಿಕ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಷಪ್ಪ ಒಂದು ವಾರದ ದಿನದ ಹಿಂದೆ ವಾಹನ ರಿಪೇರಿ ಮಾಡುವಾಗ ಜಾಕ್ ಸ್ಲಿಪ್ ಆಗಿ ತಲೆಗೆ ಗಂಭೀರ ಗಾಯವಾಗಿತ್ತು. ಅಂದಿನಿಂದಲೂ ಕೋಮಾದಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕಳೆದ ಶನಿವಾರ ಕೊನೆಯುಸಿರೆಳೆದರು. ಕಳೆದ ಇಪ್ಪತ್ತು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ, ಸಾವಿರಾರು ಸೈನಿಕರಿಗೆ ತರಬೇತಿ ನೀಡಿ ಪ್ರೋತ್ಸಾಹಿಸಿದ್ದರು. ಆದರೆ ತಾವೇ ವಾಹನ ರಿಪೇರಿ ಮಾಡುವಾಗ ಜಾಕ್ ಸ್ಲಿಪ್ ಆಗಿ ತಲೆಗೆ ಗಂಭೀರವಾದ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿ, ಕೋಮಾಕ್ಕೆ ಹೋಗುವಂತಾಯ್ತು. ಸತತ 6 ದಿನ ಜೀವನ್ಮರಣ ಹೋರಾಟ ನಡೆಸಿದ ಯೋಧನಿಗೆ ಕೊನೆಗೂ ಸಾವನ್ನ ಗೆಲ್ಲಲು ಸಾಧ್ಯವೇ ಆಗಲಿಲ್ಲ.

ಬಿ.ಕೆ ಶೇಷಪ್ಪ ಮೃತದೇಹವನ್ನು ಸಿಆರ್​ಪಿಎಫ್ ಸಿಬ್ಬಂದಿ ಗ್ರಾಮಕ್ಕೆ ತಂದಾಗ ಸಾವಿರಾರು ಜನರು ಜಯಕಾರ ಹಾಕಿ, ಭಾರತ್ ಮಾತಾ ಕೀ ಜೈ, ಶೇಷಪ್ಪ ಅಮರ್ ರಹೇ ಘೋಷಣೆ ಕೂಗಿದರು. ಕಡೂರು ಪಟ್ಟಣದಿಂದ ಬಿಳುವಾಲ ಗ್ರಾಮದವರೆಗೂ ಮೆರವಣಿಗೆ ಮೂಲಕ ಸಾಗಿ, ಬಿಳುವಾಲದ ಸರಕಾರಿ ಫ್ರೌಢಶಾಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಊರಿನ ಜನರು ಮನೆ ಮಗನನ್ನೇ ಕಳೆದುಕೊಂಡ ರೀತಿಯಲ್ಲಿ ಕಣ್ಣೀರಿಟ್ಟರು. ಊರಿನ ಜನರು, ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಶೇಷಪ್ಪನವರ ಸಾವನ್ನು ಯಾರೂ ಊಹೆ ಮಾಡಿರಲಿಲ್ಲ.

ನಿವೃತ್ತಿಗೆ ಎರಡು ತಿಂಗಳಿತ್ತು ಕಾಫಿನಾಡಿನ ಈ ಯೋಧ ಭಾರತಾಂಬೆಯ ಸೇವೆ ಮಾಡಬೇಕೆಂದು ಸಿಆರ್​ಪಿಎಫ್​ಗೆ ಸೇರಿ 20 ವರ್ಷಗಳೇ ಕಳೆದಿತ್ತು. ಇನ್ನೆರೆಡು ತಿಂಗಳು ಕಳೆದಿದ್ದರೆ, ಅಂದರೆ ಜನವರಿಯಲ್ಲಿ ನಿವೃತ್ತಿ ತೆಗೆದುಕೊಂಡು ತವರಿಗೆ ಮರಳಲು ಸಮಯವೂ ನಿಗದಿ ಆಗಿತ್ತು. ಆದರೆ ವಿಧಿ ಮಾತ್ರ ವೀರಯೋಧನ ಕನಸಿಗೆ ಅವಕಾಶವನ್ನೇ ಮಾಡಿಕೊಡಲಿಲ್ಲ. ದೀಪಾವಳಿಗೆ ಬರ್ತೇನೆ ಅಂದಿದ್ದ ಇಬ್ಬರು ಮಕ್ಕಳ ಮುದ್ದಿನ ಅಪ್ಪ ಹುಟ್ಟೂರಿಗೆ ಮರಳಿದ್ದು ಹುತಾತ್ಮನಾಗಿ.

ಕಣ್ಣಿಗೆ ರಾಷ್ಟ್ರಧ್ವಜ ಒತ್ತಿಕೊಂಡ ಪತ್ನಿ ಶೇಷಪ್ಪ ಅವರ ಜಮೀನಿನಲ್ಲೇ ಅವರ 11 ವರ್ಷದ ಮಗ ಹರ್ಷ ಕಣ್ಣೀರಿಡುತ್ತಲೇ ಅಂತಿಮ ವಿಧಿಗಳನ್ನು ನೆರವೇರಿಸಿದ. ಇದು ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. ಕೊನೆಗೆ ಶೇಷಪ್ಪನವರ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ವೀರಯೋಧ ಶೇಷಪ್ಪನವರ ಪತ್ನಿ ಛಾಯ ಅವರಿಗೆ ನೀಡಲಾಯಿತು. ಅವರು ರಾಷ್ಟ್ರಧ್ವಜವನ್ನು ಕಣ್ಣಿಗೆ ಒತ್ತಿಕೊಂಡ ದೃಶ್ಯ ಮನಕಲಕುವಂತಿತ್ತು. ಆ ಬಳಿಕ ವೀರಯೋಧನ ಪುತ್ರ ಅಪ್ಪನ ಚಿತೆಗೆ ಭಾರವಾದ ಮನಸ್ಸಿನಿಂದಲೇ ಅಗ್ನಿಸ್ಪರ್ಶ ಮಾಡಿದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮೂರು ಸುತ್ತು ಕುಶಾಲತೋಪು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಯಿತು. ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಬೆಳ್ಳಿ ಪ್ರಕಾಶ್, ಮಾಜಿ ಶಾಸಕ ವೈ.ಎಸ್.ವಿ.ದತ್ತಾ, ಎಸ್​ಪಿ, ಡಿಸಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

-ಪ್ರಶಾಂತ್, ಚಿಕ್ಕಮಗಳೂರು

ಇದನ್ನೂ ಓದಿ: ಜಮ್ಮುವಿನಲ್ಲಿ ಕಡೂರು ಯೋಧ ಹುತಾತ್ಮ ಇದನ್ನೂ ಓದಿ: Chhattisgarh News ಛತ್ತೀಸ್‌ಗಡದಲ್ಲಿ ಸಿಆರ್‌ಪಿಎಫ್ ಸಹೋದ್ಯೋಗಿಯಿಂದ ಗುಂಡಿನ ದಾಳಿ: 4 ಯೋಧರು ಸಾವು, ಮೂವರಿಗೆ ಗಾಯ

Follow us on

Most Read Stories

Click on your DTH Provider to Add TV9 Kannada