
ಚಿಕ್ಕಮಗಳೂರು, ಫೆ.17: ಕರ್ನಾಟಕದ ಮೋಸ್ಟ್ ವಾಂಟೆಡ್ ಭೂಗತ ನಕ್ಸಲ್ (Naxal) ಸುರೇಶ್ನನ್ನು ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಬಂಧಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಅರಣ್ಯದ ನಕ್ಸಲ್ ಕ್ಯಾಂಪ್ (Naxal Camp) ಮೇಲೆ ಕಾಡಾನೆ ದಾಳಿ ನಡೆಸಿತ್ತು. ಕಾಡಾನೆ ದಾಳಿಯಿಂದ ನಕ್ಸಲ್ ಸುರೇಶ್ ಗಾಯಗೊಂಡಿದ್ದ. ಹೀಗಾಗಿ ಸುರೇಶ್ಗೆ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಿಚಾರ ಇಳಿದು ದಾಳಿ ನಡೆಸಿದ ಪೊಲೀಸರು ಸುರೇಶ್ನನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್, ಕಳೆದ 10 ವರ್ಷಗಳಿಂದ ಭೂಗತ ನಕ್ಸಲ್ ಆಗಿದ್ದಾನೆ. ಪೊಲೀಸ್ ಇಲಾಖೆ, ಸುರೇಶ್ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಿತ್ತು. ಕೇರಳ ಕರ್ನಾಟಕ ಗಡಿ ಪ್ರದೇಶದ ಅರಣ್ಯದಲ್ಲಿ ಸುರೇಶ್ ಅಡಗಿದ್ದ. ಸುರೇಶ್ ವಿರುದ್ಧ ಚಿಕ್ಕಮಗಳೂರು ಉಡುಪಿಯ ಶಿವಮೊಗ್ಗ ಜಿಲ್ಲೆಯಲ್ಲಿ ಕೇಸ್ ದಾಖಲಾಗಿವೆ. 10 ಕ್ಕೂ ಅಧಿಕ ಪ್ರಕರಣಗಳಲ್ಲಿ ಸುರೇಶ್ ಪೊಲೀಸರಿಗೆ ಬೇಕಾಗಿರುವ ಆರೋಪಿ.
ಕರ್ನಾಟಕ ಕರಾವಳಿ, ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಚುರುಕಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ತೀವ್ರ ನಿಗಾ ವಹಿಲಾಗುತ್ತಿದೆ. ನಕ್ಸಲರ ಓಡಾಟದ ಹಿನ್ನಲೆ ಎ.ಎನ್.ಎಫ್. ನಿಂದ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಮಲೆನಾಡು-ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ನಕ್ಸಲ್ ನಿಗ್ರಹ ದಳಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಆಕ್ಟಿವ್ ಆದ ನಕ್ಸಲ್ ಚಟುವಟಿಕೆ ! ಗ್ರಾಮಸ್ಥರಿಗೆ ಪೊಲೀಸರ ಸೂಚನೆ
2011ರ ಡಿಸೆಂಬರ್‌ನಲ್ಲಿ ಉಡುಪಿ ಜಿಲ್ಲೆ ಹೆಬ್ರಿಯ ಕಬ್ಬಿನಾಲೆ ಬಳಿ ನಡೆದಿದ್ದ ಸದಾಶಿವ ಗೌಡ ಎಂಬುವವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ಮಾಡಲು ನಕ್ಸಲ್ ಮಹಿಳೆ ಶ್ರೀಮತಿ ಅಲಿಯಾಸ್ ಉಣ್ಣಿಮಾಯಳನ್ನು ಬಾಡಿ ವಾರೆಂಟ್ ಪಡೆದು ಕಬ್ಬಿನಾಲೆಗೆ ಕಾರ್ಕಳ ಪೊಲೀಸರು ಕರೆತಂದಿದ್ದಾರೆ.
ನವೆಂಬರ್ 7, 2023 ರಂದು ನಕ್ಸಲ್ ಗುಂಪು ಸದಸ್ಯರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದ ನಂತರ ಶೃಂಗೇರಿ ತಾಲೂಕಿನ ಬೆಳಗೋಡುಕೊಡಿಗೆಯ ಶ್ರೀಮತಿ ಮತ್ತು ತಮಿಳುನಾಡಿನ ಮತ್ತೊಬ್ಬ ನಕ್ಸಲ್ ಚಂದ್ರು ಅವರನ್ನು ಕೇರಳದ ವೈನಾಡಿನಲ್ಲಿ ಪೊಲೀಸರು ಬಂಧಿಸಿದ್ದರು. ಗುರುವಾರ ಶ್ರೀಮತಿ ಅವರನ್ನು ಕಾರ್ಕಳದ ನ್ಯಾಯಾಲಯಕ್ಕೆ ಕರೆತಂದಾಗ ಅವರು, ಮಾವೋವಾದ ಪರವಾಗಿ ಘೋಷಣೆ ಕೂಗಿದರು. 28 ವರ್ಷದ ಶ್ರೀಮತಿ ಕೇರಳದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಫೆಬ್ರವರಿ 13 ರಂದು ರಾತ್ರಿ ಪೊಲೀಸರು ಬಿಗಿ ಭದ್ರತೆಯ ನಡುವೆ ಕಾರ್ಕಳಕ್ಕೆ ಕರೆತಂದರು. ಫೆ.14ರಂದು ಆಕೆಯನ್ನು ಕಾರ್ಕಳದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕಾರ್ಕಳ ನ್ಯಾಯಾಲಯ ಆಕೆಯನ್ನು ಫೆಬ್ರವರಿ 17ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ