ಧಾರಾಕಾರ ಮಳೆ: ಚಾರ್ಮಾಡಿ ಘಾಟ್‌ನಲ್ಲಿ ಮತ್ತೆ ಸಾಲು-ಸಾಲು ಗುಡ್ಡ ಕುಸಿತ

| Updated By: ರಮೇಶ್ ಬಿ. ಜವಳಗೇರಾ

Updated on: Oct 09, 2024 | 6:57 PM

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 2 ಗಂಟೆಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಇದರ ಪರಿಣಾಮ ದಕ್ಷಿಣ ಕನ್ನಡ- ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಚಾರ್ಮಾಡಿ ಘಾಟಿನಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದ ಫುಲ್ ಟ್ರಾಫಿಕ್ ಜಾಮ್ ಆಗಿದೆ.

ಧಾರಾಕಾರ ಮಳೆ: ಚಾರ್ಮಾಡಿ ಘಾಟ್‌ನಲ್ಲಿ ಮತ್ತೆ ಸಾಲು-ಸಾಲು ಗುಡ್ಡ ಕುಸಿತ
ಚಾರ್ಮಡಿ ಘಾಟ್
Follow us on

ಚಿಕ್ಕಮಗಳೂರು, (ಅಕ್ಟೋಬರ್ 09): ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡು ಗಂಟೆಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ನಲ್ಲಿ ಸಾಲು ಸಾಲು ಗುಡ್ಡ ಕುಸಿತವಾಗಿದೆ. ಮತ್ತೊಂದೆಡೆ ಮಳೆ ನೀರು ರಸ್ತೆಯ ಮೇಲೆ ನದಿಯಂತೆ ಹರಿಯುತ್ತಿದೆ. ಇದರಿಂದ ಚಾರ್ಮಾಡಿ ಘಾಟ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಹಿಂದಕ್ಕೆ ಹೋಗದೇ ಮುಂದಕ್ಕೆ ಹೋಗಲು ಆಗದೇ ವಾಹನ ಸವಾರರು ತೀವ್ರ ಪರದಾಡುತ್ತಿದ್ದಾರೆ.

ಕೊಟ್ಟಿಗೆಹಾರ, ಬಾಳೂರು, ಬಣಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು (ಅಕ್ಟೋಬರ್ 09) ಸಂಜೆ ಕಳೆದ ಎರಡು ಗಂಟೆಯಿಂದ ನಿರಂತರವಾಗಿ ಎಡಬಿಡದೇ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ಗುಡ್ಡ ಕುಸಿದಿದೆ. ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.

ಮಂಗಳೂರಿನ ಸುತ್ತಮುತ್ತ ಧಾರಾಕಾರ ಮಳೆ

ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಕಕ್ಕಿಂಜೆ, ಚಾರ್ಮಾಡಿ ಘಾಟ್ ​ರಸ್ತೆಗಳು ಜಲಮಯವಾಗಿದೆ. ಚಾರ್ಮಾಡಿಯ 3ನೇ ತಿರುವಿನಲ್ಲಿ ರಸ್ತೆ ಮೇಲೆ ನೀರು ನದಿಯಂತೆ ಹರಿಯುತ್ತಿದೆ. ಅಲ್ಲದೇ ನೆರಿಯಾ, ಪುಲ್ಲಾಜೆ ಸೇತುವೆಗಳು ಮುಳುಗಡೆಯಾಗಿವೆ. ಇದರಿಂದ ವಾಹನ ಸಂಚಾರ ಮತ್ತು ಜನಜೀವನ ಅಸ್ತವ್ಯವಾಗಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಅಬ್ಬರ

ಇನ್ನು ಶಿವಮೊಗ್ಗ ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಮಳೆರಾಯ ಅಬ್ಬರಿಸಿದ್ದಾನೆ. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು, ವಾಹನ ಸವಾರರ ಪರದಾಡುವಂತಾಗಿದೆ. ಅಲ್ಲದೇ ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ಮುಂಗಾರು ಸಂದರ್ಭದಲ್ಲೂ ಸಹ ಚಿಕ್ಕಮಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು. ಚಾರ್ಮಾಡಿ ಘಾಟ್‌ನಲ್ಲಿ 10ನೇ ತಿರುವಿನಲ್ಲಿ ಗುಡ್ಡ ಕುಸಿದಿತ್ತು. ಇದರಿಂದ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಡಿತವಾಗಿತ್ತು. ಹಾಸನ ಮತ್ತು ಚಾರ್ಮಾಡಿ ಘಾಟ್​ ಮೂಲಕ ದಕ್ಷಿಣ ಕನ್ನಡಕ್ಕೆ ಹೋಗುವ ಮಾರ್ಗಗಳು ಸಹ ಬಂದ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮತ್ತೆ ಗುಡ್ಡ ಕುಸಿದಿದ್ದು, ಚಾರ್ಮಾಡಿ ಘಾಟ್‌ನ ರಸ್ತೆಗಳಲ್ಲಿ ನೀರು ನದಿಯಂತೆ ಹರಿತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:40 pm, Wed, 9 October 24