ಚಿಕ್ಕಮಗಳೂರು: ಕೊರೊನಾ ಹೆಚ್ಚಾದರೆ ಸರ್ಕಾರಕ್ಕೆ ಲಾಕ್ಡೌನ್ ಅನಿವಾರ್ಯ. ಜನರು ಸಹಕಾರ ಕೊಡದಿದ್ದರೆ ಲಾಕ್ಡೌನ್ ಅನಿವಾರ್ಯ ಎಂದು ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಜನರ ಜೀವ ಉಳಿಸುವುದು ಸರ್ಕಾರದ ಬದ್ಧತೆಯಾಗಿದೆ. ಜನರು ಕೊವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಪಾದಯಾತ್ರೆಗೆ ಅನುಮತಿ ಕೊಡುವುದು ಬಿಡುವುದು ಬೇರೆ ವಿಷಯ ಆದ್ರೆ ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿರುವ ಪಾದಯಾತ್ರೆಗೆ ಬೇಸರವಿದೆ. ಕೊವಿಡ್ ಸಮಯದಲ್ಲಿ ರಾಜಕಾರಣದ ನಡೆ ಸರಿಯಲ್ಲ. ವಿರೋಧ ಪಕ್ಷವಾಗಿ ಹೋರಾಟ ಮಾಡಲು ಅವಕಾಶವಿದೆ. ಆದ್ರೆ, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ಸಿಗರು ಏನೂ ಮಾಡಲಿಲ್ಲ. ಸಿಎಂ ಬದಲಾವಣೆ, ಸಚಿವರ ಕೈಬಿಡುವುದು ಗಾಳಿಸುದ್ದಿ. ಬೊಮ್ಮಾಯಿ ಸರ್ಕಾರದಲ್ಲಿ ಯಾವ ಸಚಿವರನ್ನೂ ಕೈಬಿಡಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇನ್ನು ಮತ್ತೊಂದೆಡೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ವಿಚಾರಕ್ಕೆ ಸಂಬಂಧಿಸಿ ಜೀವ ಉಳಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಅನಿವಾರ್ಯ ಎಂದು ಕೊಪ್ಪಳ ನಗರದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಮಿಕ್ರಾನ್ ಪತ್ತೆ ಆಗಿರುವ ಶಂಕೆ ಇದೆ. ಓರ್ವ ಕಾರ್ಮಿಕನಲ್ಲಿ ಒಮಿಕ್ರಾನ್ ಸೋಂಕಿರುವ ಶಂಕೆ ಇದೆ. ಆತನ ಸ್ಯಾಂಪಲ್ಸ್ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಕೊರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಜೀವ ಉಳಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಅನಿವಾರ್ಯ. ಮುಂದೆ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಲು ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ.