ಅದು ಜನವರಿ 10ರ ಮಂಗಳವಾರ ಚಿಕ್ಕಮಗಳೂರು (chikmagalur) ಜಿಲ್ಲೆ ಕಳಸ (kalasa) ತಾಲ್ಲೂಕಿನ ಕಾಡಂಚಿನ ಗ್ರಾಮವೊಂದರ ಮನೆಯಲ್ಲಿ ಇನ್ನೂ 18 ತುಂಬದ ಬಾಲಕಿಯೊಬ್ಬಳು (minor Girl) ಮನೆಯಲ್ಲಿದ್ದ ಅದ್ಯಾವುದೋ ಕಳೆನಾಶಕ ಕುಡಿದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು. ಕೂಡಲೆ ಊರ ಜನರೆಲ್ಲಾ ಸೇರಿ ಕಾರೊಂದರಲ್ಲಿ ಕಳಸ ತಾಳ್ಲೂಕು ಆಸ್ಪತ್ರೆಗೆ ಕರೆ ತಂದಿದ್ದಾರೆ. ವಿಷ ಸೇವನೆ ಮಾಡಿ ಅದಾಗಲೆ ಗಂಟೆಗಳೇ ಕಳೆದಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನ ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡಾಸ್ಪತ್ರೆಗೆ ಕರೆದೊಯ್ಯಿರಿ ಎಂದು ಪೊಲೀಸರು ಸಲಹೆ ಕೊಟ್ಟಿದ್ದಾರೆ. ಪೋಷಕರು ತಡಮಾಡದೆ, ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದಾರಿ ಮಧ್ಯೆ ಏನಾಯ್ತು ಮಗಳೇ? ಯಾಕೆ ವಿಷ ಕುಡಿದೆ? ಎಂದು ಪರಿಪರಿಯಾಗಿ ಪೋಷಕರು ಕೇಳಿದ್ದಾರೆ. ಆಗ ಆತ್ಮಹತ್ಯೆ (suicide) ಯತ್ನದ ಹಿಂದಿನ ಅಸಲಿಯತ್ತನ್ನ ಯುವತಿ ಬಿಚ್ಚಿಟ್ಟಿದ್ದಾಳೆ. ಹಾಸ್ಟಲ್ ನಲ್ಲಿದ್ದುಕೊಂಡು ಎಸ್.ಎಸ್.ಎಲ್ ಸಿ ಮುಗಿಸಿದ್ದ ಬಾಲಕಿ ಪಿಯುಸಿಗೆ ಸೇರಿಕೊಂಡಾಗ ಮನೆಯಿಂದಲೇ ಹೋಗಿ ಬರೋಕೆ ಶುರು ಮಾಡಿದ್ದಳು. ತಮ್ಮ ಪಕ್ಕದೂರು ಕಾರಗದ್ದೆಯ ನಿತೇಶ್ ಎಂಬ ಯುವಕ ತನ್ನನ್ನ ಪ್ರೀತಿಸ್ತಿದ್ದ. ನಿನ್ನ ಕೈ ಬಿಡಲ್ಲ, ನಿನ್ನನ್ನ ಮದುವೆ ಆಗ್ತೇನೆ, ಅದು-ಇದೂ ಅಂತೆಲ್ಲಾ ನಂಬಿಸಿ ಕಡೆಗೆ ಕೈ ಕೊಟ್ಟಿದ್ದ. ನಾನು ಬೇರೆ ಹುಡುಗೀನ ಇಷ್ಟ ಪಡ್ತೀನಿ, ನಿನ್ನ ದಾರಿ ನಿನಗೆ ಅಂದ. ವರ್ಷಗಳಿಂದ ನಂಬಿಸಿ ಮೋಸ ಮಾಡಿದ್ದರಿಂದ ಬೇಸರಗೊಂಡು ಹೀಗೆ ಮಾಡಿದೆ ಎಂದು ಸತ್ಯ ಬಯಲು ಮಾಡಿದ್ದಳು.
ಅಲ್ಲಿಗೆ ಇನ್ನೂ 18 ತುಂಬದ, ನೂರಾರು ಕನಸುಗಳನ್ನಿಟ್ಟುಕೊಂಡು ಕಾಲೇಜು ಕಲಿಯುತ್ತಿದ್ದ ಅಪ್ರಾಪ್ತ ವಯಸಿನ ಯುವತಿ ಹದಿಹರೆಯದ ಪ್ರೀತಿಯ ಬಲೆಗೆ ಬಿದ್ದು ಆತ್ಮಹತ್ಯೆ ಯತ್ನ ಮಾಡಿದ್ದಳು. ಹುಡುಗನ ವಿಚಾರ ಏನೇ ಇರಲಿ, ಮೊದಲು ಮಗಳು ಬದುಕುಳಿಯಲಿ ಎಂದು ಆಸ್ಪತ್ರೆಗೆ ಸೇರಿಸಿದ್ದ ಪೋಷಕರು ಮಗಳಿಗೆ ಅಗತ್ಯವಾದ ಚಿಕಿತ್ಸೆ ಕೊಡಿಸೋಕೆ ಮುಂದಾಗಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಯುವತಿ ಸತತ ನಾಲ್ಕು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಳು. ವೈದ್ಯರು ಏನೆಲ್ಲಾ ಪ್ರಯತ್ನಪಟ್ಟರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಜನವರಿ 15ರ ಭಾನುವಾರು ಮುಂಜಾನೆ ಸಾವಿನ ಮನೆ ಸೇರಿದ್ದಳು. ಅಲ್ಲಿಗೆ ಕೂಲಿನಾಲಿ ಮಾಡಿದರೂ ನಮ್ಮ ಮಕ್ಕಳು ನಮ್ಮಂತೆ ಕೂಲಿ ಆಗಬಾರದು ಎಂದು ಒಳ್ಳೆಯ ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ತಾವು ನಿಲ್ಲಲಿ ಎಂದು ಹೋರಾಟ ನಡೆಸಿದ್ದ ಆ ದಂಪತಿಗೆ ಮಗಳು ಇನ್ನಿಲ್ಲಾ ಎಂದಾಗ ಕುಸಿದು ಹೋಗಿದ್ರು.
ಆಕಾಶವೇ ಮೈಮೇಲೆ ಧುತ್ತನೆ ಬಿದ್ದಂತಾಗಿದೆ. ಕಲಿಯ ಬೇಕಾದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಹಿಂದೆ ಬಿದ್ದಿದ್ದ ಯುವತಿ, ಪ್ರೀತಿ ಪ್ರೇಮಾ ಅಂತಾ ಸುತ್ತಾಡಿ ಕಡೆಗೆ ಮೋಸವಾಯ್ತು ಎಂದು ಆತ್ಮಹತ್ಯೆಗೆ ಯತ್ನಿಸಿ ಕಡೆಗೂ ಸಾವಿಗೀಡಾಗಿದ್ದಳು. ಸಾವಿಗೆ ಕಾರಣವಾದ ಯುವಕ ನಿತೇಶ್ ವಿರುದ್ದ ಕ್ರಮಕ್ಕಾಗಿ ಪೊಲೀಸರಿಗೆ ದೂರು ನೀಡಿದರು. ಕ್ರಮ ಕೈಗೊಂಡಿಲ್ಲ ಎನ್ನೋ ಪೋಷಕರ ಆರೋಪದ ನಡುವೆಯೇ ಕಡೆಗೂ ಪೋಕ್ಸೊ ಕೇಸ್ ದಾಖಲಿಸಿಕೊಂಡಿದ್ದ ಕುದುರೆಮುಖ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ರು. ಸಾವಿನ ಕೊನೆ ಗಳಿಗೆಯಲ್ಲಿ ಯುವತಿ ಬರೆದ ಡೆತ್ ನೋಟ್ ಆಧರಿಸಿ ತನಿಖೆ ಕೈಗೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಜನವರಿ 10ರಂದು ವಿಷ ಕುಡಿದಿದ್ದ ಯುವತಿ ನಾಲ್ಕು ದಿನಗಳು ಸಾವು ಬದುಕಿನ ನಡುವೆ ಹೊರಾಟ ನಡೆಸಿದ್ದಳು. ನನಗೆ ಕಾರಗದ್ದೆಯ ನಿತೇಶನಿಂದ ಮೋಸವಾಗಿದೆ ಎಂದು ಯುವತಿ ಹೇಳಿಕೊಂಡಿದ್ದಳು. ನಿನ್ನನ್ನು ಆತ ಪ್ರೀತಿಸಿದ್ದರ ಬಗ್ಗೆ ಏನಾದರೂ ದಾಖಲೆ ಇದ್ರೆ ಹೇಳು ಎಂದಾಗ ಆಕೆ ಐಸಿಯುನಲ್ಲೇ ಒಂದು ಪೇಪರ್ ಹಿಡಿದು ಬರೆದುಕೊಟ್ಟಿದ್ದಳು. ನಾನು ನಿತೇಶನನ್ನು ಇಷ್ಟಪಟ್ಟಿದ್ದೆ, ಚೆನ್ನಾಗಿ ನೋಡಿಕೊಳ್ತೀನಿ ಎಂದು ನಂಬಿಸಿದ್ದ ನಿತೇಶ್, ಕಡೆಗೆ ನನಗೆ ಮೋಸ ಮಾಡಿದ್ದ. ಇದ್ರಿಂದ ಬೇಸರಗೊಂಡು ನಾನು ಹೀಗೆ ಮಾಡಿದೆ ಎಂದು ಬರೆದು ಸಹಿ ಮಾಡಿಕೊಟ್ಟಿದ್ದಳು.
ಹೀಗೆ ಯುವತಿ ಬರೆಯೋದನ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಪೋಷಕರು ಆ ವಿಡಿಯೋ ಸಮೇತ ಪೊಲೀಸರಿಗೆ ದೂರು ಕೊಟ್ಟಾಗ ಪೊಲೀಸರು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇಸ್ ದಾಖಲು ಮಾಡಿಕೊಂಡಿದ್ದರು. ಹಲವು ವರ್ಷಗಳಿಂದ ಭಜರಂಗದಳ ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದ ನಿತೇಶ್, ಬಿಜೆಪಿ ಕಾರ್ಯಕರ್ತನಾಗಿಯೂ ಸ್ಥಳೀಯವಾಗಿ ಓಡಾಡಿಕೊಂಡಿದ್ದ. ಹೇಳಿ ಕೇಳಿ ಸ್ಥಳೀಯ ಮುಖಂಡನಾಗಿದ್ದ. ಹಲವರ ಸಂಪರ್ಕ ಇತ್ತು. ಹಾಗಾಗಿ ನಿತೇಶ್ ನಿಗೆ ಮಾರು ಹೋಗಿದ್ದ ಯುವತಿ ಆತನ ಪ್ರಿತಿಯ ಬಲೆಗೆ ಬಿದ್ದಿದ್ದಳು. ಕಾಲೇಜಿಗೆ ಹೋಗುತ್ತಿದ್ದ ಯುವತಿಯ ಬೆನ್ನುಬಿದ್ದಿದ್ದ ನಿತೇಶ್ ನಾನಿನ್ನ ಪ್ರೀತಿಸ್ತೀನಿ ಇಷ್ಟಪಡ್ತೀನಿ ನೀನೇ ನನ್ನ ಬದುಕು ಎಂತೆಲ್ಳಾ ಹೇಳಿ ಪೀಡಿಸೋಕೆ ಶುರುಮಾಡಿದ್ದ.
ನೀ ನನ್ನ ಮದುವೆಯಾಗೋದಾದ್ರೆ ನಿನಗೆ ಸ್ವರ್ಗ ತೊರಿಸ್ತೀನಿ, ನಿನ್ನ ರಾಣಿಯಂತೆ ನೋಡಿಕೊಳ್ತೀನಿ ಎಂದು ನಂಬಿಸಿದ್ದ. ಮದುವೆ, ಸಂಸಾರ, ವೈವಾಹಿಕ ಜೀವನ ಯಾವುದರ ಬಗ್ಗೆಯೂ ಅರಿವೇ ಇಲ್ಲದ ಯುವತಿ ವಂಚಕನ ಮಾತಿಗೆ ಮರುಳಾಗಿ ಹೋಗಿದ್ದಳು. ಅವನು ಹೇಳಿದಂತೆ ಕೇಳೋಕೆ ಶುರುಮಾಡಿದ್ದಳು. ಮನೆಯವರಿಗೆ ತಮ್ಮಿಬ್ಬರ ವಿಚಾರವನ್ನ ಹೇಳಬೇಡ ಎಂದಿದ್ದಕ್ಕೆ ಏನನ್ನೂ ಹೇಳದೆ ಎಲ್ಲವನ್ನೂ ಮುಚ್ಚಿಟ್ಟಿದ್ದ ಯುವತಿ ಯಾವಾಗ ನಿತೇಶ್ ಏಕಾಏಕಿ ನೀ ನನಗೆ ಬೇಡಾ, ನಾನು ಬೇರೆ ಹುಡುಗಿಯನ್ನ ಮದುವೆಯಾಗಬೇಕು ಎಂದಾಗ ಹದಿಹರೆಯದೆಲ್ಲೇ ಪ್ರೀತಿಯ ಬಲೆಗೆ ಬಿದ್ದು ನಲುಗಿದ್ದ ಬಾಲಕಿ ಕುಸಿದು ಹೋಗಿದ್ದಳು.
ತನ್ನ ನೋವು ಹೇಳಿಕೊಳ್ಳೋಕೆ ಈ ಕಡೆಯಿಂದ ಮನೆಯವರಿಗೆ ವಿಚಾರ ಗೊತ್ತಿಲ್ಲ. ಎಷ್ಟೇ ಫೋನ್ ಮಾಡಿದರೂ ಆ ಕಡೆಯಿಂದ ನಿತೇಶ್ ಫೋನ್ ರಿಸೀವ್ ಮಾಡ್ತಿಲ್ಲ. ದಿಕ್ಕು ತೋಚದಾದ ಯುವತಿ ಕಡೆಗೆ ಆತ್ಮಹತ್ಯೆಯ ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದಳು. ಮನೆಯಲ್ಲಿದ್ದ ಕಳೆನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳೋಕೆ ಮುಂದಾಗಿದ್ದಳು. ವಿಷ ಕುಡಿದಿದ್ದ ಮನೆ ಮಗಳು ಅಸ್ವಸ್ಥಗೊಂಡಿರುವುದನ್ನ ಪೋಷಕರು ಗಮನಿಸಿದ್ದಾರೆ. ಕೂಡಲೆ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಿಸಿದ್ದರು. ಆದ್ರೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಯುವತಿ ಕಡೆಗೂ ಸಾವಿನ ಮನೆ ಸೇರಿದ್ದಾಳೆ.
ಮಗಳಿಗಾದ ಅನ್ಯಾಯ ಮತ್ಯಾರಿಗೂ ಆಗೋದು ಬೇಡಾ, ನನ್ನ ಮಗಳನ್ನ ಪುಸಲಾಯಿಸಿ, ನಂಬಿಸಿ ಮೋಸ ಮಾಡಿ ಅವಳನ್ನ ಬಲಿ ಪಡೆದಿದ್ದಾರೆ. ನಿತೇಶನನ್ನು ಕೂಡಲೆ ಬಂಧಿಸಬೇಕು. ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ, ಇನ್ನು ಯುವತಿಗೆ ಮೋಸ ಮಾಡಿರುವ ವಂಚಕ ಈ ಒಬ್ಬ ಯುವತಿಗೆ ಮಾತ್ರವೇ ಮೋಸ ಮಾಡಿಲ್ಲವಂತೆ. ತನ್ನ ಮಾತನ್ನೇ ಬಂಡವಾಳ ಮಾಡಿಕೊಂಡು, ತನ್ನ ಪ್ರಭಾವವನ್ನೇ ಮುಂದೆ ಮಾಡಿ ಹಲವು ಯುವತಿಯರಿಗೆ ಬಲೆ ಬೀಸಿದ್ದನಂತೆ.
ಒಬ್ಬರಾದ ಮೇಲೆ ಮತ್ತೊಬ್ಬರಂತೆ ಹಲವರನ್ನ ತನ್ನ ಬಲೆಗೆ ಬೀಳಿಸಿಕೊಂಡು ಅವರನ್ನ ಪ್ರಿತಿ ಪ್ರೇಮ ಅಂತೆಲ್ಲಾ ಸುತ್ತಾಡಿಸಿ ಕಡೆಗೆ ಅವರನ್ನ ಕೈಬಿಟ್ಟು ಮತ್ತೊಬ್ಬರಿಗೆ ಗಾಳ ಹಾಕೋ ಚಾಳಿಯವನಂತೆ ಅವನು. ಈ ಬಗ್ಗೆ ಸ್ವತಃ ಆರೋಪಿಸಿರೋ ಪೋಷಕರು ಇನ್ನಾದರೂ ಪೊಲೀಸರು ಈ ಲಂಪಟನ ಬಗ್ಗೆ ಸಮಗ್ರ ತನಿಖೆ ನಡೆಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಹಿಂದೂ ಪರ ಸಂಘಟನೆಯಲ್ಲಿ ಇದ್ದುಕೊಂಡು, ಹಿಂದೂ ಯುವತಿಯರನ್ನ ರಕ್ಷಣೆ ಮಾಡ್ತೀನಿ ಎಂದು ಪ್ರತಿಜ್ಞೆ ಮಾಡಿ, ಅದೇ ಹೆಣ್ಣುಮಕ್ಕಳನ್ನ ದುರುಪಯೋಗ ಮಾಡಿಕೊಂಡ ಆರೋಪ ಕೇಳಿ ಬರುತ್ತಲೆ ಭಜರಂಗದಳ ಪ್ರಮುಖರು ಸಭೆ ಸೇರಿ ಈ ಕಿರಾತಕನನ್ನು ಸಂಘಟನೆಯಿಂದ ಕಿತ್ತೆಸೆದಿದ್ದಾರೆ. ಇನ್ನು ಮುಂದೆ ತಮ್ಮ ಸಂಘಟನೆಗೂ ಈತನಿಗೂ ಯಾವುದೇ ಸಂಬಂಧ ಇಲ್ಲಾ ಎಂದು ಸಂಬಂಧಕಡಿದುಕೊಂಡಿದ್ದಾರೆ.
ಆದ್ರೆ ತನ್ನ ಸಂಘಟನೆಯ ಬಲದಿಂದಲೇ ಇಷ್ಟೆಲ್ಲಾ ಆಟವಾಡಿದ ವ್ಯಕ್ತಿ, ಇದೀಗ ತಲೆಮರೆಸಿಕೊಂಡಿದ್ದಾನೆ, ಪ್ರೀತಿ ಪ್ರೇಮಾ ಅಂತಾ ನಂಬಿಸಿ ಹುಡುಗಿಯನ್ನ ಸುತ್ತಾಡಿಸಿ ಕಡೆಗೆ ಕೈಕೊಟ್ಟು ಆಕೆ ಸಾವಿಗೆ ಕಾರಣವಾದ ಪಾಪಿಯನ್ನ ಬಂಧಿಸೋಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿ ಬಂಧನದ ಬಳಿಕ ಪ್ರಕರಣದ ಮತ್ತಷ್ಟು ಸತ್ಯ ಬಯಲಾಗಬೇಕಿದೆ.
ವರದಿ: ಮಂಜುನಾಥ್ ಕೆಬಿ, ಟಿವಿ 9, ಹಾಸನ
Published On - 2:53 pm, Tue, 17 January 23