ಆತನಿಗೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿ (ಪಿ.ಎಸ್.ಐ PSI) ಸ್ವತಂತ್ರವಾಗಿ ಸಿಕ್ಕ ಮೊದಲ ಪೊಲೀಸ್ ಸ್ಟೇಷನ್ ಅದು. ಹಾಗಂತ ಆತ ಅಲ್ಲಿಗೇನು ಶಿಸ್ತಾಗಿ ರಾತ್ರೋರಾತ್ರಿ ಬಂದು ಸೆಟ್ಲ್ ಆಗ್ಲಿಲ್ಲ. ಅಂದಿನ ವ್ಯವಸ್ಥೆಯ ವಿರುದ್ಧ ಹೋರಾಡಬೇಕಾಯ್ತು. ಅಲ್ಲಿನ ಶಾಸಕ ಏಯ್! ಹೆಂಗ್ ಬಂದೆಯೋ ಹಂಗೇ ವಾಪಸ್ ಹೋಗ್ಬಿಡೋ.. ಅದ್ಹೇಗ್ ಚಾರ್ಜ್ ತಗೋಂತೀಯಾ ತಗೋ, ನಾನೂ ನೋಡ್ತೀನಿ ಅಂತೆಲ್ಲಾ ಅವಾಜ್ ಹಾಕಿದ ಪ್ರಸಂಗವೂ ನಡೆಯಿತು. ಐಜಿಪಿ ಹೇಳುದರು ಅಂತಾ ಆತ ಕೂಡ ಬಂದು ಅಧಿಕಾರ ವಹಿಸಿಕೊಂಡಿದ್ದರು. ಆದ್ರೆ ಅಂದು ಸುಣ್ಣ-ಬಣ್ಣ ಕಾಣದೆ, ಸೌಲಭ್ಯಗಳಿಲ್ಲದೆ ಹೆಸರಿಗಷ್ಟೆ ಪೊಲೀಸ್ ಸ್ಟೇಷನ್‍ನಂತಿದ್ದ ಆ ಠಾಣೆಗೆ ಇಂದು ಅವರು ಹೊಸ ರೂಪ ಕೊಟ್ಟಿದ್ದಾರೆ. ಅದನ್ನ ನೋಡ್ದೋರು ಯಾವ್ದೋ ರೆಸಾರ್ಟ್ ಇರಬೇಕು ಅಂತಾರೆ. ಆ ಠಾಣೆ ರಾಜ್ಯಕ್ಕೆ ಮಾದರಿ ಅಂದರೂ ತಪ್ಪಿಲ್ಲ. ಹಾಗಾದ್ರೆ ಆ ಪಿಎಸ್ಐ ಯಾರು? ಆ ಠಾಣೆ ಯಾವ್ದು ಅಂತೀರಾ? ಆ ಎಂಎಲ್ಎ ಯಾರು ಎಂದು ತಿಳಿಯುವ ಕುತೂಹಲವೂ ಇದೆಯಾ? ಈ ಸ್ಟೋರಿ ನೋಡಿ..
ಚಿಕ್ಕಮಗಳೂರು (Chikmagalur) ಜಿಲ್ಲೆ ಮೂಡಿಗೆರೆ (Mudigere) ತಾಲೂಕಿನ ಶಾಸಕ ಎಂ.ಪಿ. ಕುಮಾರಸ್ವಾಮಿ ಗೊತ್ತಲ್ವಾ!? ಅವರೇ ಅಂದು ಪಿಎಸ್ಐಗೆ ಆವಾಜ್ ಹಾಕಿದ್ದವರು… ಆ ಯುವ ಪೊಲೀಸ್ ಅಧಿಕಾರಿಯ ಹೆಸರು ರವೀಶ್ ಅಂತಾ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣೆಯೇ ಸ್ವತಂತ್ರವಾಗಿ ಪಿ.ಎಸ್.ಐ. ಆಗಿ ಪೋಸ್ಟಿಂಗ್ ಸಿಕ್ಕಿದ ಮೊದಲ ಸ್ಟೇಷನ್. ಅದು ಚಿಕ್ಕಮಗಳೂರು ತಾಲೂಕು ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲಂದೂರಿನ ಹಳೇ ಸ್ಟೇಷನ್. ರಾಜ್ಯದ ಇತರೆ ಠಾಣೆಗಳಂತೆ ಇದೂ ಒಂದು ಮಾಮೂಲಿ ಸ್ಟೇಷನ್ ಆಗಿತ್ತು.
ಆದ್ರೆ, ಈಗ ನೋಡಿದರೆ… ಆಕರ್ಷಕ ಸುಣ್ಣಬಣ್ಣ ಬಳಿದುಕೊಂಡು ಗೋಡೆಬರಹಗಳಿಂದ ಜಗಮಗಿಸುತ್ತಾ ಇದೆ. ಯಾವುದೋ ಖಾಸಗಿ ರೆಸಾರ್ಟ್ ಮಾದರಿ ಕಾಣ್ತಿದೆ. ಅಸಲಿಗೆ ಇದು ಅದೇ ಮಲ್ಲಂದೂರು ಪೊಲೀಸ್ ಸ್ಟೇಷನ್! ಅಂದು ಕೊನೆಗೂ ಅದುಹೇಗೋ ಇಲ್ಲಿ ಅಧಿಕಾರ ವಹಿಸಿಕೊಂಡಿದ್ದ ರವೀಶ್, ಕೆಲಸ ಮಾಡುವ ಜಾಗದಲ್ಲಿ ವಾತಾವರಣ ಶುದ್ಧವಾಗಿದ್ದರೆ ಮನಸ್ಸು ಪ್ರಫುಲ್ಲವಾಗಿರುತ್ತದೆ ಎಂದು ಬಗೆದರು.
ಕಾಲಾಂತರದಲ್ಲಿ ಅದನ್ನು ಕಾರ್ಯರೂಪಕ್ಕೂ ತಂದರು. ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ದಾನಿಗಳ ಸಹಕಾರದಿಂದ ಇಡೀ ಠಾಣೆಗೆ ಹೈಟೆಕ್ ಸ್ಪರ್ಶ ನೀಡಿದರು. ಅದೂ ಇದೂ ಅಂತಾ… ಯಾರ ಬಳಿಯೂ ಒಂದು ರೂಪಾಯಿ ಎಕ್ಸ್ಟ್ರಾ ಪಡೆಯಲಿಲ್ಲ. ನೀವೇ ಬಂದು ನೋಡಿ. ಕೆಲಸ ಮಾಡಿಸಿಕೊಡಿ ಎಂದು ಅವರಿವರಿಂದಲೇ ಎಲ್ಲಾ ಕೆಲಸ ಮಾಡಿಸಿದ್ದಾರೆ. ಇಂದು ಠಾಣೆಯ ಒಳಗೆ ಹೋದರೆ ಅದು ಪೊಲೀಸ್ ಸ್ಟೇಷನ್ ಎಂಬ ಭಾವವೇ ಬರುವುದಿಲ್ಲ. ಅಷ್ಟರಮಟ್ಟಿಗೆ ಗೆಟಪ್ ಚೇಂಜ್ ಮಾಡಿಕೊಂಡು, ಖದರು ಬದಲಿಸಿಕೊಂಡಿದೆ ಮಲ್ಲಂದೂರು ಪೊಲೀಸ್ ಸ್ಟೇಷನ್! ಇವರ ಕೆಲಸಕ್ಕೆ ಸ್ಥಳೀಯರು ಕೈಜೋಡಿಸಿ ಸಾಥ್ ಕೊಟ್ಟಿದ್ದು ನಿಜಕ್ಕೂ ಪ್ರಶಂಸಾರ್ಹ.
ಇನ್ನು ಪೊಲೀಸ್ ಠಾಣೆಯ ಕಾಂಪೌಂಡ್ ಹೊರಭಾಗದಲ್ಲಿ ಪೋಕ್ಸೋ ಕಠಿಣ ರೂಲ್ಸು, ಟ್ರಾಫಿಕ್ ರೂಲ್ಸು, ಅಪ್ರಾಪ್ತರಿಗೆ ವಾಹನ ಕೊಡಬೇಡಿ, ಜೂಜಾಟ, ಕಳ್ಳತನ, ಮಕ್ಕಳನ್ನ ಕೆಲಸಕ್ಕೆ ಬಳಸಬೇಡಿ ಎಂದು ಬಾಲಾಪರಾಧಗಳ ಬಗ್ಗೆ ಚಿತ್ರಗಳನ್ನು ಬಿಡಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಕಾಂಪೌಂಡ್ ಒಳಭಾಗದಲ್ಲಿ ಕಾಡುಪ್ರಾಣಿಗಳ ಬೇಟೆ, ಮರ ಕಡಿಯುವುದು, ಕಾಡುಪ್ರಾಣಿಗಳ ರಕ್ಷಣೆ ಮಾಡುವಂತಹಾ ಚಿತ್ರಗಳನ್ನ ಬಿಡಿಸಿ ಅಪರಾಧಿ ಮನಸ್ಸುಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಚಿತ್ರಗಳ ಮೂಲಕ ಮನವರಿಕೆಯಾಗುವಂತೆ ಮಾಡಿದ್ದಾರೆ.
ಜೊತೆಗೆ, ಠಾಣೆಯ ಆವರಣದಲ್ಲಿ ಮನಸಿಗೆ ಮುದ ನೀಡುವ ಪಾರ್ಕ್ ಕೂಡ ಮಾಡಿದ್ದಾರೆ. ಈ ಪೊಲೀಸ್ ಸ್ಟೇಷನ್ ಆವರಣದ ಒಳಗೆ ಹೋದರೆ ಪೊಲೀಸ್ ಸ್ಟೇಷನ್ ಕಲ್ಪನೆಯನ್ನ ಸಂಪೂರ್ಣ ಬದಲಿಸಿಬಿಡುತ್ತದೆ. ಖಡಕ್ ಪೊಲೀಸ್ ಅಧಿಕಾರಿಯ ಮನಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ದಾರೆ. ಅದರಿಂದ ಸ್ಥಳೀಯರು ಹಾಗೂ ಸ್ಥಳೀಯ ಆಡಳಿತದವರ ಮನಸ್ಸನ್ನೂ ಬದಲಿಸಿದ್ದಾರೆ. ಇನ್ನು ಠಾಣೆಯಲ್ಲಿ ಲೈಬ್ರರಿ ತೆರೆಯಬೇಕು ಎಂಬ ಬಯಕೆಯೂ ಇವರಿಗಿದೆ. ಸ್ಥಳೀಯರು ಅದಕ್ಕೂ ಸಹಕಾರ ನೀಡೋದಾಗಿ ಹೇಳಿದ್ದಾರೆ. ಪಿಎಸ್ಐ ರವೀಶ್ ಅವರ ಕೆಲಸವನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕೂಡ ಮೆಚ್ಚಿಕೊಂಡಿದ್ದಾರೆ.
ವರದಿ: ಅಶ್ವಿತ್, ಟಿವಿ9, ಚಿಕ್ಕಮಗಳೂರು
Published On - 5:11 pm, Sat, 21 January 23